ಬೆಂಗಳೂರು ಗ್ರಾಮಾಂತರ

'ಉತ್ಸವ ಜನರಲ್ಲಿ ಸ್ನೇಹ ಸೌಹಾರ್ದತೆ ಮೂಡಿಸುತ್ತೆ'

Published On :

ನೆಲಮಂಗಲ: ದೇವರ ಮೇಲಿನ ಭಕ್ತಿ  ಶಾಂತಿ ನೆಮ್ಮದಿಯನ್ನು ನೀಡುತ್ತದೆ  ಎಂದು ತುಮಕೂರು ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ತಾಲೂಕಿನ ವನಕಲ್ಲು ಮಠದ ಶ್ರೀ ಮಲ್ಲೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಾ ದೇವರ ಉತ್ಸವಗಳು ಜನರಲ್ಲಿ ಸ್ನೇಹ ಸೌಹಾರ್ದತೆಯನ್ನು ಮತ್ತು ಒಗ್ಗಟ್ಟು ಬೆಸೆಯುವ ಮೂಲಕ ಗ್ರಾಮಗಳ ಸಮಸ್ಯೆಯ ಪರಿಹಾರಕ್ಕೆ, ಅಭಿವೃದ್ಧಿಗೆ ಜಾತ್ರೆಗಳು ಸಹಕಾರಿಯಾಗುತ್ತವೆ ಎಂದರು.
ಚಿತ್ರದುರ್ಗದ ಮುರುಘ ಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ವಿಜ್ಞಾನ ಬೆಳೆದು ನಿಂತಿದ್ದು ಇದರ ಲಾಭವನ್ನು ಪಡೆದುಕೊಳ್ಳಲು ರೈತರು ಸೇರಿದಂತೆ ಎಲ್ಲಾ ವರ್ಗದ ಜನ ವೈಜ್ಞಾನಿಕ ಯೋಜನೆ, ಚಿಂತನೆಯನ್ನು ಬೆಳೆಸಿಕೊಳ್ಳುವ ಮೂಲಕ ಅಂತರಂಗದ ಅರಿವು ಮೂಡಿಸಿ ಪ್ರಗತಿಯ ಮಾರ್ಗ ಕಂಡುಕೊಳ್ಳಿ ಎಂದರು.
ಶಾಂತಿ ಕಳೆದುಕೊಳ್ಳ ಬೇಡಿ: ಕೇವಲ ಹಣವನ್ನು ಹೊಂದಬೇಕೆಂಬ ಹಂಬಲದಿಂದ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳಬೇಡಿ. ಹಣಕ್ಕೆ ದಾಸನಾದರೆ ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ವಿಶಾಲ ಮನೋಭಾವವನ್ನು ಹೊಂದುವ ಮೂಲಕ ಕೈಲಾದಷ್ಟು ಸಮಾಜ ಸೇವೆಯನ್ನು ಮಾಡುವ ಮೂಲಕ ಇತರರಿಗೂ ಮಾರ್ಗದರ್ಶಕರಾಗಿ ಜೀವನವನ್ನು ನೆಮ್ಮದಿ ಶಾಂತಿಯಿಂದ ಕಳೆಯುವುದನ್ನು ಮೈಗೂಡಿಸಿಕೊಳ್ಳಿ ಎಂದು ಭಕ್ತರಿಗೆ ಕರೆ ನೀಡಿದರು.
ವನಕಲ್ಲು ಮಠದ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಕ್ಷೇತ್ರದ  ಬ್ರಹ್ಮರಥೋತ್ಸವ ಸಂಘಟಿಸುವಲ್ಲಿ  ಭಕ್ತರು ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ರಥೋತ್ಸವಕ್ಕೆ ಸೇರಿದ್ದ ಸಾವಿರಾರು ಭಕ್ತರು ಶ್ರೀ ಮಲ್ಲೇಶ್ವರ ಸ್ವಾಮಿ ರಥೋತ್ಸವ ಮುಂದೆ ಸಾಗುತ್ತಿದ್ದಂತೆ
ತೂರು ಬಾಳೆ, ಮೆಣಸು ಮತ್ತು ಧಾನ್ಯವನ್ನು ರಥೋತ್ಸವಕ್ಕೆ  ತೂರಿದರು.
ರಥೋತ್ಸವದ ಅಂಗವಾಗಿ ಡೊಳ್ಳುಕುಣಿತ, ಪೂಜಾಕುಣಿತ, ಕಂಸಾಳೆ ನೃತ್ಯ, ತಮಟೆ ವಾದ್ಯ, ವೀರಗಾಸೆ, ಡೊಳ್ಳುವಾದ್ಯ ವ್ಯವಸ್ಥೆ ಮತ್ತು ಜಾತ್ರೆಗೆ ಬಂದಿದ್ದ ಜನರಿಗೆ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಬಂದಿದ್ದ ಎಲ್ಲಾ ಭಕ್ತರಿಗೂ ಪಾನಕ ಮಜ್ಜಿಗೆ ಹೆಸರು ಬೇಳೆ ಮತ್ತು ಅರವಂಟಿಕೆ ಮೂಲಕ ಉಚಿತ ಊಟದ ವ್ಯವಸ್ಥೆ ಮಾಡಿದ್ದರು.
 ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ, ಇ. ಕೃಷ್ಣಪ್ಪ, ಜಿ.ಪಂ. ಸದಸ್ಯರಾದ ಸುನಂದಶಿವಕುಮಾರ್, ವೇಣುಗೋಪಾಲ್, ಸಾರಿಗೆ ಇಲಾಖೆಯ ನಾಗೇಶ್‌ಕುಮಾರ್, ಗ್ರಾ.ಪಂ. ಅಧ್ಯಕ್ಷರಾದ ರತ್ನಮ್ಮ, ತೀರ್ಥಪ್ರಸಾದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.