ಬೆಂಗಳೂರು ಗ್ರಾಮಾಂತರ

ಶಿಂಷಾ ನದಿ ಪಾತ್ರದಲ್ಲಿ ತಲೆ ಎತ್ತಿದೆ ಮರಳು ಲೂಟಿ

Published On :

-ಮತ್ತೀಕೆರೆ ಜಯರಾಮ್
ರಾಮನಗರ: ಚನ್ನಪಟ್ಟಣ ತಾಲೂಕಿನಾದ್ಯಂತ ಮರಳುಗಾರಿಕೆ ನಿಷೇಧಕ್ಕೆ ಒತ್ತಾಯಿಸಿ ತಾ.ಪಂ. ಮಾಜಿ ಅಧ್ಯಕ್ಷ ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಸತ್ಯಾಗ್ರಹಕ್ಕೆ ಸೋಮವಾರ 50 ದಿನ ತುಂಬಿದೆ. ಅತ್ತ ಇಗ್ಗಲೂರು ಜಲಾಶಯ ಸಮೀಪ ಶಿಂಷಾ ನದಿ ಪಾತ್ರದಲ್ಲಿ ಮರಳು ಲೂಟಿ ಮತ್ತೆ ತಲೆಎತ್ತಿದೆ.
ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರೈತ ನಾಯಕ ಕಡಿದಾಳ್ ಶಾಮಣ್ಣ ಸಹಿತ ಹಲವರು ಭಾಗವಹಿಸಿ ಬೆಂಬಲ ಸೂಚಿಸಿದ್ದರಾದರೂ ಜಿಲ್ಲಾಡಳಿತವು ಬೇಡಿಕೆಗಳನ್ನು ಈಡೇರಿಸುವ ವಿಷಯದಲ್ಲಿ ತಿಪ್ಪೆ ಸಾರಿಸಿ ಕೈತೊಳೆದುಕೊಂಡಿದೆ.
ಕವಡೆ ಕಾಸಿನ ಕಿಮ್ಮತ್ತಿಲ್ಲ: ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರು ಅಧಿಕಾರಿಗಳ ಒಡ್ಡೋಲಗ ಸಮೇತ ಚನ್ನಪಟ್ಟಣಕ್ಕೆ ತೆರಳಿ, ಸಭೆ ನಡೆಸಿ ಮರಳುಗಾರಿಕೆ ವಿರುದ್ಧ ಸಮರವನ್ನೇನೋ ಸಾರಿದರು. ಆದರೆ, ಅವರ ಆದೇಶಕ್ಕೆ ಅಧೀನ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಮರಳು ದಂಧೆಗೆ ಕಡಿವಾಣ ಬೀಳಲೇ ಇಲ್ಲ.
ಕಣ್ವ, ಶಿಂಷಾ ಮತ್ತು ಅರ್ಕಾವತಿ ನದಿ ಪಾತ್ರದಲ್ಲಿ ಕಾರ್ಯಾಚರಣೆ ಕೈಗೊಂಡಾಗ ಅಲ್ಲಿನ ಮರಳು ಲೂಟಿಯಿಂದ ಜಿಲ್ಲಾಧಿಕಾರಿಗೆ ತಮ್ಮ ಅಧಿಕಾರಿಗಳ ತಂಡದ ವಿಶ್ವರೂಪ ದರ್ಶನವಾಗಿದೆ. ಅದಾಗಿ ಕೆಲ ದಿನಗಳ ಮಟ್ಟಿಗೆ ತಾತ್ಕಾಲಿಕ ಸ್ಥಗಿತವಾಗಿದ್ದ ಮರಳುಗಾರಿಕೆ ಇದೀಗ ಮಿತಿ ಮೀರಿದೆ.
ವರದಾನವಾದ ಚುನಾವಣೆ: ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವುದು ಮರಳು ಮಾಫಿಯಾಕ್ಕೆ ವರದಾನವಾಗಿದೆ. ಸ್ವತಃ ಜಿಲ್ಲಾಧಿಕಾರಿ ಸಹಿತ ಬಹುಪಾಲು ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ದಂಧೆಕೋರರಿಗೆ ಹೇಳೋರು ಕೇಳೋರಿಲ್ಲದಂತಾಗಿದೆ.
ಇಗ್ಗಲೂರು ಜಲಾಶಯದಿಂದ ಅನತಿ ದೂರವೇ ಶಿಂಷಾ ನದಿಗೆ ಕೊಪ್ಪರಿಕೆ, ತೆಪ್ಪಗಳನ್ನಿಳಿಸಿ ಮರಳು ದೋಚುವ ಕೆಲಸ ಮತ್ತೆ ಮುಂದುವರೆದಿದೆ. ಎಂಜಿಲು ಕಾಸಿನ ಕೈಯ್ಯೊಡ್ಡಿದ ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿ ಟಾಸ್ಕ್ ಫೋರ್ಸ್ ಇಲ್ಲವೇ ಮೇಲಧಿಕಾರಿಗಳಿಗೆ ದೂರು ನೀಡುವ ಗೋಜಿಗೆ ಹೋಗಿಲ್ಲ.
ಉಪಟಳ ಮತ್ತೆ ಪ್ರಾರಂಭ: ಮರಳು ದಂಧೆಯಿಂದ ಅದೆಷ್ಟೋ ಹೆಣಗಳು ಉರುಳಿರುವುದು ಗುಟ್ಟಿನ ಸಂಗತಿಯಲ್ಲ. ಬಹುತೇಕ ನರಬಲಿಗಳು ಮರಳು ದಿಬ್ಬ ಕುಸಿತದಿಂದ ಆಗಿದ್ದು, ಹಣ ಚೆಲ್ಲಿ ಪ್ರಕರಣಗಳನ್ನು ಮುಚ್ಚಲಾಗಿದೆ. ಇನ್ನು ಕೆಲ ನರಬಲಿಗಳು ದಂಧೆಗೆ ಅಡ್ಡಿಪಡಿಸುವಿಕೆಯಂತ ವಿಷಯಗಳು ಕಾರಣವಾಗಿವೆ.
ಅಧಿಕಾರಿಗಳಿಗೆ ನೀಡಲಾದ ದೂರು, ಕಂದಾಯ ಜಮೀನುಗಳಲ್ಲಿ ಅಕ್ರಮ ರಸ್ತೆ ನಿರ್ಮಾಣ, ಹಫ್ತಾ ವಸೂಲಿ, ಲಾಭ ಹಂಚಿಕೆಯಲ್ಲಿ ವ್ಯತ್ಯಾಸದಂತಹ ಪ್ರಕರಣಗಳಲ್ಲಿ ಘರ್ಷಣೆ ನಡೆದು ಅದೆಷ್ಟೋ ನೆತ್ತರು ನೆಲಕ್ಕೆ ಹರಿದ ನಿದರ್ಶನಗಳಿವೆ. ಮರಳು ದಂಧೆ ಘರ್ಷಣೆಗಳಲ್ಲಿ ಪಾತಕಿಗಳು ಭಾಗಿ ಆಗಿದ್ದೂ ಉಂಟು.
ಅಧಿಕಾರಿಗಳೇ ಅಡ್ಡಗಾಲು: ಚನ್ನಪಟ್ಟಣ ತಾಲೂಕಿನಾದ್ಯಂತ ಮರಳು ಸಂಪತ್ತಿನ ಲೂಟಿಯಿಂದ ಅಂತರ್ಜಲ ಪಾತಾಳಕ್ಕೆ ಕುಸಿಯಲು ಅಧಿಕಾರಶಾಹಿಯ ಧನದಾಹವೇ ಕಾರಣ ಎನ್ನಲು ಸಾಕಷ್ಟು ಉದಾಹರಣೆಗಳಿವೆ. ಮರಳುಗಾರಿಕೆ ವಿರುದ್ಧ ಶಾಸಕರೇ ಹೋರಾಡಿ ಹೈರಾಣರಾದರು ಎನ್ನುವುದು ವ್ಯವಸ್ಥೆಗೆ ಕೈಗನ್ನಡಿಯಾಗಿದೆ.  
ಚನ್ನಪಟ್ಟಣದಲ್ಲಿ ಈ ಹಿಂದೆ ಎರಡು ಬಾರಿ ಕರ್ತವ್ಯ ನಿರ್ವಹಿಸಿದ್ದ ಹಾಲಿ ತಹಸೀಲ್ದಾರ್ ಅರುಣಪ್ರಭ ಮರಳು ದಂಧೆಕೋರರಿಗೆ ಸಿಂಹಸ್ವಪ್ನರಾಗಿದ್ದರು. ಆದರೆ, ಈಚೆಗಷ್ಟೇ ವರ್ಗಗೊಂಡ ಈ. ಶಿವರುದ್ರಪ್ಪ ಮರಳುಗಾರಿಕೆ ತಡೆಗಟ್ಟುವಲ್ಲಿ ವಿಫಲರಾಗಿದ್ದರು.
ದೂರಿದರೆ ರಕ್ಷಣೆಯಿಲ್ಲ: ಚುನಾವಣಾ ನೀತಿ ಸಂಹಿತೆಯಂತಹ ವಿಷಯದಲ್ಲೇ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ಗೆ ಕರೆ ಮಾಡಿ ದೂರಿದರೆ, ಆ ಕರೆಯನ್ನೇ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರಿಸಿ ತಹಸೀಲ್ದಾರ್ ಶಿವರುದ್ರಪ್ಪ ವಿವಾದಕ್ಕೆ ಗುರಿಯಾಗಿದ್ದಾರೆ.
ಇಂತಹ ಅಧಿಕಾರಿ ಮರಳುಗಾರಿಕೆ ವಿರುದ್ಧ ಬಂದ ದೂರಿನ ವಿವರವನ್ನು ಮಾಫಿಯಾಕ್ಕೆ ನೀಡಿಲ್ಲ ಎನ್ನಲು ಖಾತ್ರಿ ಏನೆನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಶಿವರುದ್ರಪ್ಪ ವಿರುದ್ಧ ಜಂಟಿ ಕಾರ್ಯಾಚರಣೆ ವೇಳೆ ಮಂಡ್ಯ ಜಿಲ್ಲಾಡಳಿತ ಕೂಡ ಅನುಮಾನ ವ್ಯಕ್ತಪಡಿಸಿದೆ.  
ಬೆದರಿಕೆ ಕರೆ ಬರುತ್ತಿವೆ: ಸತ್ಯಾಗ್ರಹ ನಡೆಸುತ್ತಿರುವ ಸಿದ್ದರಾಮ ಹೆಗ್ಗಡೆ ಅವರ ಮೊಬೈಲ್‌ಗೆ ಕರೆ ಮಾಡಿದ ಮರಳು ದಂಧೆಕೋರರು ನಿನ್ನನ್ನು ಕೊಲೆ ಮಾಡುತ್ತೇವೆ. ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ನಿನ್ನ ಪುತ್ರನನ್ನು ಅಪಹರಿಸಿ, ಕೊಲೆ ಮಾಡುತ್ತೇವೆ ಎಂದೆಲ್ಲಾ ಬೆದರಿಸಿದ್ದರು.  
ವಾರದ ಹಿಂದೆ ಮರಳುಗಾರಿಕೆ ವಿರುದ್ಧ ವರದಿ ಮಾಡಿಕೊಂಡು ಬಂದಿರುವ ನೆರೆಯ ಮದ್ದೂರು ತಾಲೂಕಿನ ಪತ್ರಕರ್ತರೊಬ್ಬರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಸಂಬಂಧ ಅಲ್ಲಿನ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಮಾಫಿಯಾದ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ.

ಸತ್ಯಾಗ್ರಹಕ್ಕೆ ಶತಕಾರ್ಧ ದಿನ
ಅಕ್ರಮ ಮರಳುಗಾರಿಕೆಯ ವಿರುದ್ಧ ನೈಜ ಕಳಕಳಿಯಿಂದ ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಸತ್ಯಾಗ್ರಹಕ್ಕೆ ಅರ್ಧ ಶತಕ ದಿನಗಳು ತುಂಬಿವೆ. ಮಾಡು ಇಲ್ಲವೇ ಮಡಿ ಘೋಷಣೆಯೊಂದಿಗೆ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಕೆಗೆ ಅಚಲ ನಿರ್ಧಾರ ತಳೆದಿದ್ದಾರೆ.
ಸತ್ಯಾಗ್ರಹ ಪ್ರಾರಂಭವಾದಾಗಿನಿಂದ ಕ್ಷೌರ ಮಾಡಿಸಿಲ್ಲ. ತಾಲೂಕು ಕಚೇರಿ ಆವರಣದಲ್ಲೇ ನಿದ್ರೆ, ಅಲ್ಲೇ ಉಪಹಾರ, ಊಟ, ಸ್ನಾನ, ನಿತ್ಯಕರ್ಮಗಳ ಮಾಡಿಕೊಂಡಿರುವ ಸತ್ಯಾಗ್ರಹಿಯು ಮನೆ, ಮಠವನ್ನೇ ಮರೆತಿದ್ದಾರೆ. ಪ್ರಾರಂಭದಲ್ಲಿ ಬೆಂಬಲಕ್ಕೆ ನಿಂತ ಸಂಘಟನೆಗಳು ಇದೀಗ ಸುಮ್ಮನಾಗಿವೆ.
ಸಂಸದ ಡಿ.ಕೆ. ಸುರೇಶ್ ಸತ್ಯಾಗ್ರಹದತ್ತ ಸುಳಿದಿಲ್ಲ. ಹೋರಾಟಕ್ಕೆ ಬೆಂಬಲ ಘೋಷಿಸಿರುವ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತೊಂದು ಪಕ್ಷಾಂತರದ ಬ್ಯುಸಿಯಲ್ಲಿದ್ದಾರೆ. ಆಗೊಬ್ಬರು, ಈಗೊಬ್ಬರು ಸಿದ್ದರಾಮ ಹೆಗ್ಗಡೆ ಯೋಗಕ್ಷೇವು ವಿಚಾರಿಸಿಕೊಂಡು ಮೆಚ್ಚುಗೆ ಮಾತುಗಳನ್ನಾಡಿ ಬೆನ್ನು ತಟ್ಟಿ ಹೋಗುತ್ತಿದ್ದಾರೆ.
ದೊರೆಸ್ವಾಮಿ, ಕಡಿದಾಳ್ ಶಾಮಣ್ಣ ಸೇರಿದಂತೆ ನಾನಾ ಮುಖಂಡರು ಇಲ್ಲಿಗೆ ಬಂದು ಹೋದಾಗ ಸಿದ್ದರಾಮ ಹೆಗ್ಗಡೆ  ಮಾತಾಡ್ ಮಾತಾಡ್ ಮಲ್ಲಿಗೆ ಚಲನಚಿತ್ರದ ಹೂವಯ್ಯನ ರೀತಿಯ ಹೋರಾಟ  ಆಗಬಹುದೆಂದು ಅದೆಷ್ಟೋ ಜನ ಅಂದುಕೊಂಡಿದ್ದರು. ಅದೀಗ ಹುಸಿಯಾಗಿದೆ. ಪ್ರಕೃತಿ ವಿಕೋಪಕ್ಕೆ ತುತ್ತಾದರೂ ಇನ್ನೂ ಎಚ್ಚೆತ್ತುಕೊಳ್ಳದ ಚನ್ನಪಟ್ಟಣ ಜನರ ತಾತ್ಸಾರವೂ ಮರಳು ಲೂಟಿಕೋರರಿಗೆ ಲಾಭವಾಗಿದೆ. ಕೆಲವೇ ದಂಧೆಕೋರರು, ಬೆರಳೆಣಿಕೆ ಅಧಿಕಾರಿಗಳು ಕಿಸೆ ತುಂಬಲು ಚನ್ನಪಟ್ಟಣ ತಾಲೂಕಿನ ಹಿತ ಬಲಿ ಯಾವ ನ್ಯಾಯ?

ಇತ್ತ ಸತ್ಯಾಗ್ರಹ ಹತ್ತಿಕ್ಕಲು ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆಯ ಗುಮ್ಮ ಬಿಡುತ್ತಿದ್ದಾರೆ. ಅತ್ತ ಮರಳು ಲೂಟಿ ಮುಂದುವರೆಸಿರುವ ದಂಧೆಕೋರರು ದೂರವಾಣಿ ಕರೆ ಮಾಡಿ ಕೇಕೆ ಹಾಕುತ್ತಿದ್ದಾರೆ. ಇಂಥ ವ್ಯವಸ್ಥೆಗೆ ನಾಚಿಕೆ ಆಗಬೇಕು. ನನ್ನನ್ನು ಬಲವಂತವಾಗಿ ಎಬ್ಬಿಸಿದರೆ ಪರಿಣಾಮ ನೆಟ್ಟಗಿರದು. 3-4 ದಿನದಲ್ಲಿ ಚಳವಳಿ ತೀವ್ರಗೊಳಿಸುವೆ. ಲೋಕಾಯುಕ್ತ ಇಲ್ಲವೆ ಉನ್ನತ ತನಿಖೆ ಆಗುವವರೆಗೆ ಪಟ್ಟು ಸಡಿಲಿಸುವ ಪ್ರಶ್ನೆಯೇ ಇಲ್ಲ. ನನ್ನಲ್ಲಿನ್ನೂ ಹೋರಾಟದ ಕಿಚ್ಚು ಆರಿಲ್ಲ.
- ಸಿದ್ದರಾಮ ಹೆಗ್ಗಡೆ, ಸತ್ಯಾಗ್ರಹಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.