ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಚನ್ನಪಟ್ಟಣ: ತಾಲೂಕು ಕಚೇರಿಯ ಚುನಾವಣಾ ಶಾಖೆಯ ನ್ಯೂನ್ಯತೆಯಿಂದಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಪಟ್ಟಿಗೆ ಹೊಸ ಹೆಸರುಗಳ ಸೇರ್ಪಡೆ ಕಾರ್ಯ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಅಂಗನವಾಡಿ ಕಾರ್ಯಕರ್ತೆಯರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಲೋಕಸಭೆ ಚುನಾವಣೆ ನಿಮಿತ್ತ ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಮಟ್ಟದ ಅಧಿಕಾರಿಯಾಗಿ ಚುನಾವಣಾ ಆಯೋಗ ನೇಮಕ ಮಾಡಿಕೊಂಡಿದ್ದು, ಬೂತ್ ಮಟ್ಟದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರುವವರಿಂದ ಅರ್ಜಿಗಳನ್ನು ಸ್ವೀಕರಿಸಿ ಅವುಗಳನ್ನು ತಾಲೂಕು ಕಚೇರಿ ಚುನಾವಣಾ ಶಾಖೆ ಸಿಬ್ಬಂದಿ ಮೂಲಕ ಕಂಪ್ಯೂಟರ್ನಲ್ಲಿ ದಾಖಲು ಮಾಡಿಸಬೇಕಿತ್ತು.
ಕಳೆದೆರಡು ದಿನಗಳಿಂದ ಸರ್ವರ್ ಸಮಸ್ಯೆಯನ್ನು ಮುಂದುಮಾಡಿ ಚುನಾವಣಾ ವಿಭಾಗದ ಸಿಬ್ಬಂದಿ ದಾಖಲು ಕಾರ್ಯವನ್ನು ವಿಳಂಬ ಮಾಡಿದ್ದರಿಂದ ಕುಪಿತಗೊಂಡ ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ಮಧ್ಯಾಹ್ನ ಪ್ರತಿಭಟನೆಯ ಹಾದಿ ಹಿಡಿದು. ಚುನಾವಣಾ ವಿಭಾಗದ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಹಿಡಿ ಶಾಪ ಹಾಕಿದರು.
ಅಲೆದಾಡಿ ಸಾಕಾಗಿದೆ: ಮೊದಲ ಹಂತವಾಗಿ ಮೂರು ದಿನಗಳ ಕಾಲ ಕಸಬಾ ಹೋಬಳಿಯ ಅರ್ಜಿಗಳನ್ನು ದಾಖಲಿಸುವುದಾಗಿ ತಿಳಿಸಿದ್ದರು. ನಂತರ ವಿರೂಪಾಕ್ಷಿಪುರ ಮತ್ತು ಮಳೂರು ಹೋಬಳಿಯ ಅರ್ಜಿಗಳನ್ನು ದಾಖಲಿಸುವುದಾಗಿ ದಿನಾಂಕ ನಿಗದಿ ಪಡಿಸಿದ್ದರು. ಆದರೆ ಮೂರು ದಿನವಾದರೂ ಇನ್ನೂ ಕಸಬಾ ಹೋಬಳಿಯ ಅರ್ಜಿಗಳೇ ಮುಗಿದಿಲ್ಲ ಇನ್ನು ಉಳಿದ ಹೋಬಳಿಯ ಅರ್ಜಿಗಳನ್ನು ಯಾವಾಗ ಪರಿಶೀಲಿಸುತ್ತಾರೆ ಎಂದು ಪ್ರಶ್ನಿಸಿದ ಅಂಗನವಾಡಿ ಕಾರ್ಯಕರ್ತೆಯರನ್ನು ಬೆಳಗ್ಗಿನಿಂದ ಸಂಜೆಯವರೆಗೆ ಕಾಯಿಸಿ ನಂತರ ನಾಳೆ ಬನ್ನಿ ಎನ್ನುತ್ತಾರೆ. ದಿನಾ ತಾಲೂಕು ಕಚೇರಿಗೆ ಅಲೆದಾಡುವುದೇ ನಮ್ಮ ಕೆಲಸವಾಗಿದೆ ಎಂದು ಕಿಡಿಕಾರಿದರು.
ಕಾರ್ಯಕರ್ತೆಯರಿಗೆ ಅಗೌರವ: ತಾಲೂಕು ಕಚೇರಿ ಸಿಬ್ಬಂದಿ ನಮ್ಮನ್ನು ತಮ್ಮ ಮನೆಯ ಕೂಲಿ ಕಾರ್ಮಿಕರಂತೆ ನಡೆಸಿ ಕೊಳ್ಳುತ್ತಿದ್ದಾರೆ. ಬೆಳಿಗ್ಗೆಯಿಂದ ನಾವು ಊಟ ತಿಂಡಿ ಇಲ್ಲದೆ ತಾಲೂಕು ಕಚೇರಿ ಬಾಗಿಲು ಕಾಯುವಂತಾಗಿದೆ. ನಮಗೆ ಕುಡಿಯಲು ನೀರಿನ ವ್ಯವಸ್ಥೆಯನ್ನು ತಾಲೂಕು ಕಚೇರಿ ಅಧಿಕಾರಿಗಳು ಕಲ್ಪಿಸಿಲ್ಲ ಎಂದು ಕಿಡಿಕಾರಿದರು. ಕೆಲಸ ಆಗದೆ ತಡರಾತ್ರಿಯವರೆಗೂ ಕಚೇರಿಯಲ್ಲಿ ಇರುವ ಅನಿವಾರ್ಯತೆ ಸಾಕಷ್ಟು ಸಮಯದಲ್ಲಿ ಬಂದೊದಗಿದೆ ಎಂದು ಕಿಡಿಕಾರಿದರು.
ಸಾಕಷ್ಟು ಉದಾಹರಣೆ: ಚುನಾವಣಾ ಕೆಲಸ ವಿಳಂಭಗೊಂಡು ನಮ್ಮ ಸ್ವಗ್ರಾಮಕ್ಕೆ ತೆರಳಲು ಬಸ್ ಇಲ್ಲದೆ ಪರದಾಡಿದ ಉದಾಹರಣೆಗಳು ಸಾಕಷ್ಟಿವೆ. ನಮ್ಮ ಕೆಲಸಗಳನ್ನು ತಾಲೂಕು ಕಚೇರಿ ಸಿಬ್ಬಂದಿ ಬೇಕೆಂದೇ ವಿಳಂಬ ಮಾಡುತ್ತಾರೆ. ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಅಲವತ್ತುಗೊಂಡರು. ನಾವು ನೀಡುವ ಅರ್ಜಿಗಳು ಸರಿಯಾಗಿ ದಾಖಲಾಗದೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದೇ ಆದಲ್ಲಿ ಜನತೆ ನಮ್ಮನ್ನು ನಿಂದಿಸುತ್ತಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮಾತನಾಡಿದ ಚುನಾವಣಾ ವಿಭಾಗದ ಶೀರಸ್ತೇದಾರ್ ದಾಸಪ್ಪ ಸರ್ವರ್ ಸಮಸ್ಯೆಯಿಂದ ದಾಖಲೆ ಮಾಡುವ ಕಾರ್ಯ ವಿಳಂಬವಾಗುತ್ತಿದ್ದು, ಕಾರ್ಯಕರ್ತೆಯರು ತಂದಿರುವ ಅರ್ಜಿಗಳನ್ನು ಕಚೇರಿಗೆ ನೀಡಿ ತೆರಳುವಂತೆ, ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಅರ್ಜಿಗಳನ್ನು ಅಪ್ಲೋಡ್ ಮಾಡುತ್ತಾರೆ ಎಂದು ತಿಳಿಸಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

