ಬೆಂಗಳೂರು ಗ್ರಾಮಾಂತರ

ಸಮಸ್ಯೆ ಸುಳಿಯಲ್ಲಿ ಟೊಮೆಟೋ ಬೆಳೆದ ರೈತ

Published On :

ಚನ್ನಪಟ್ಟಣ: ನೀರಿನ ಕೊರತೆ, ವಿದ್ಯುತ್ ಸಮಸ್ಯೆ, ಕೂಲಿಕಾರ್ಮಿಕರ ಕೊರತೆ ಹೀಗೆ ಹತ್ತು ಹಲವು ಸವಾಲುಗಳ ನಡುವೆ ಟೊಮೆಟೋ ಬೆಳೆದ ರೈತ ಇದೀಗ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಇಂದಲ್ಲ ನಾಳೆ ಬೆಲೆ ಸಿಗುತ್ತದೆಂದು ನಂಬಿದ್ದ ರೈತನಿಗೆ ಮೂರು ತಿಂಗಳಿಂದ ಮಾರುಕಟ್ಟೆಗೆ ಟೊಮೆಟೋ ಹೊತ್ತು ತಂದ ರೈತ ಸಾಗಾಣಿಕೆ ವೆಚ್ಚಕ್ಕೂ ಸಾಲ ಮಾಡುವಂತಾಗಿದ್ದು, ಸಾಲ ಸೋಲ ಮಾಡಿ ಬೆಳೆದ ಬೆಳೆಯನ್ನು ಗಿಡದಲ್ಲೇ ಬಿಟ್ಟು ಸಾಲ ತೀರಿಸೋದೇಗೆ ಎಂಬ ಚಿಂತೆಯಲ್ಲಿ ದಿನ ದೂಡುವಂತಾಗಿದೆ.
ಮೂರು ತಿಂಗಳಿಂದ ಬೆಲೆ ಸಿಗುತ್ತಿಲ್ಲ: ಡಿಸೆಂಬರ್ ಅಂತ್ಯದಲ್ಲಿ ಪ್ರತಿ ಕೆ.ಜಿ ಟಮೋಟೋಗೆ 10 ರೂ. ಸರಾಸರಿ ಬೆಲೆ ಇತ್ತು,  ಜನವರಿ ತಿಂಗಳ ಮೊದಲವಾರದಿಂದ ಆರಂಭ ಗೊಂಡ ಬೆಲೆ ಕುಸಿತ ಇನ್ನೂ ಮುಂದುವರೆದಿದ್ದು, ರೈತ ಬೆಳೆದ ಟಮೋಟೋಗೆ  ಪ್ರಸ್ತುತ ಒಂದು ರೂ.ಸಿಕ್ಕರೆ ಹೆಚ್ಚು ಎಂಬಂತಾಗಿದೆ. ದಿನದಿಂದ ದಿನಕ್ಕೆ ಬೆಲೆ ಕುಸಿತ ಮುಂದುವರಿದಿರುವುದು ರೈತನ ಮೊಗದಲ್ಲಿ ಆತಂಕ ಹೆಚ್ಚಳ ಗೊಳ್ಳುವಂತೆ ಮಾಡಿದೆ.
ಅಲ್ಪ ಭಾಗದಲ್ಲಿ ಬೆಳೆದರೂ ಬೆಲೆ ಇಲ್ಲ: ಸತತ ಬರದಿಂದ ಕಂಗಾಲಾಗಿರುವ ತಾಲೂಕಿನ ಬಹುತೇಕ ಗ್ರಾಮಗಳು ಬೇಸಾಯವನ್ನು ಮರೆತೇ ಬಿಟ್ಟಿವೆ. ಸಾವಿರಾರು ಅಡಿ ಆಳಕ್ಕಿಳಿದು ಕೊಳವೆ ಬಾವಿ ಕೊರೆದರೂ ನೀರು ಸಿಗದಿರುವುದನ್ನು ಕಂಡು ಈ ಸಾಹಸ ಮಾಡುವುದಕ್ಕೆ ರೈತರು ಮುಂದಾಗುತ್ತಿಲ್ಲ. ಗರಕಹಳ್ಳಿ ಏತನೀರಾವರಿ ಯೋಜನೆಯಿಂದ ಕೆರೆಗಳು ತುಂಬಿರುವ ತಾಲೂಕಿನ ಅಕ್ಕೂ ಜಿ.ಪಂ ವ್ಯಾಪ್ತಿಯ ಕೆಲ ಗ್ರಾಮಗಳು ಮತ್ತು ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿರುವ ಇನ್ನು ಕೆಲವು ಗ್ರಾಮದಲ್ಲಿ ಅಲ್ಪ ಪ್ರಮಾಣದಲ್ಲಿ ಟೊಮೆಟೋ ಬೆಳೆಯುತ್ತಿದ್ದಾರಾದರೂ ಬೆಲೆ ಮಾತ್ರ ಸಿಗುತ್ತಿಲ್ಲ.
ತಾಲೂಕಿನಲ್ಲಿ ನೂರು ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಟೊಮೆಟೋ ಬೆಳೆಯಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಅಂಕಿ ಅಂಶಗಳು ಹೇಳುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಬರುತ್ತಿರುವುದರಿಂದ ಬೆಲೆ ಇಳಿಮುಖಗೊಂಡಿದೆ ಎಂದು ದಲ್ಲಾಳಿಗಳೂ ಕಾರಣ ನೀಡುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ತಾಲೂಕು ಎಪಿಎಂಸಿಗೆ 1028 ಕ್ವಿಂಟಾಲ್ ಟೊಮೆಟೋ ಬಂದಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 710ಕ್ವಿಂಟಾಲ್ ಟೊಮೆಟೋ ಮಾತ್ರ ಬಂದಿತ್ತು. ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಬಂದಿರುವುದರಿಂದ ಬೆಲೆ ಕುಸಿತಗೊಂಡಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ಕಾರಣ ನೀಡುತ್ತಿದ್ದಾರೆ.
ಬಂಪರ್ ಬೆಲೆ ನಂಬಿ ಕೆಟ್ಟರು: ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೋ ಬೆಳೆಯಲು  ಡಿಸೆಂಬರ್ ತಿಂಗಳವರೆಗೆ ಇದ್ದ ಬಂಪರ್ ಬೆಲೆ. 2013ರ ಆಗಸ್ಟ್‌ನಿಂದ ಡಿಸೆಂಬರ್ ಮೊದಲ ವಾರದವರೆಗೆ ಟೊಮೆಟೋಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಕೆ.ಜಿಗೆ 25ರಿಂದ 30 ರು. ವರೆಗೆ ಇದ್ದ ದರ ಹಬ್ಬದ ಸಾಲಿನಲ್ಲಿ 50ರ ಗಡಿ ದಾಟಿದ ಉದಾಹರಣೆಯೂ ಸಾಕಷ್ಟಿತ್ತು.
ಇದರಿಂದ ಆಕರ್ಷಿತರಾದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೋ ಬೆಳೆಯಲು ಮುಂದಾದರು. ನಮಗೂ ಬಂಪರ್ ಬೆಲೆ ಸಿಗುತ್ತದೆ ಎಂದು ನಂಬಿ ಟೊಮೆಟೋ ಬೆಳೆದ ರೈತ ಇದೀಗ ಮಾಡಿದ ಖರ್ಚಿರಲಿ, ಮಾರುಕಟ್ಟೆಗೆ ತರಲು ವ್ಯಯಿಸಿದ ಸಾಗಾಣಿಕೆ ವೆಚ್ಚವೂ ಸಿಗದೆ ಪೇಚಾಡುವಂತಾಗಿದೆ.
ಸರ್ಕಾರ  ಕೂಡಲೇ ಪ್ರತಿ ಕೆ.ಜಿ ಟೊಮೋಟೋಗೆ 5 ರು. ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ಜತೆಗೆ ಈ ಟೊಮೋಟೋವನ್ನು ಸರ್ಕಾರಿ ಸ್ವಾಮ್ಯದ ಹಾಸ್ಟೆಲ್, ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ವಿತರಿಸುವ ಕೆಲಸ ಮಾಡಿದಲ್ಲಿ ಟೊಮೋಟೋಗೆ ತಂತಾನೆ ಬೇಡಿಕೆ ಬರುತ್ತದೆ. ದಲ್ಲಾಳಿಗಳ ಕೈಗೆ ಸಿಲುಕಿರುವ ಎಪಿಎಂಸಿ ವ್ಯವಸ್ಥೆ ರೈತ ವಿರೋಧಿಯಾಗಿ ವರ್ತಿಸುತ್ತಿರುವುದರಿಂದ ಟೊಮೋಟೋ ಬೆಳೆಗಾರ ಸಾಲದ ಸುಳಿಗೆ ಸಿಲುಕುವಂತಾಗಿದೆ.
- ಜಿ.ಕೃಷ್ಣೇಗೌಡಗರಕಹಳ್ಳಿ, ಪ್ರಗತಿಪರ ರೈತ


-ಸು.ನಾ.ನಂದಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.