ಬೊಂಬೆನಾಡು ನಗರಸಭೆ ಕೈ ವಶ
ಚನ್ನಪಟ್ಟಣ: ಯಾವ ಪಕ್ಷಕ್ಕೂ ಬಹುಮತವಿಲ್ಲದೆ ಅತಂತ್ರವಾಗಿದ್ದ ಬೊಂಬೆನಾಡು ಚನ್ನಪಟ್ಟಣ ನಗರಸಭೆ ಆಡಳಿತ ಚುಕ್ಕಾಣಿ ಕೈ ವಶವಾಗಿದೆ. ಕಾಂಗ್ರೆಸ್ನ ಅಖಿಲಾಬಾನು ಮತ್ತು ಮುದ್ದುಕೃಷ್ಣ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ವಿಜೇತ ಅಭ್ಯರ್ಥಿಗಳಾದ ಅಖಿಲಾಬಾನು ಮತ್ತು ಮುದ್ದುಕೃಷ್ಣ ತಲಾ 17 ಮತಗಳನ್ನು ಗಳಿಸಿದರೆ, ಜೆಡಿಎಸ್ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಉಜ್ಮಾ ಇಶ್ರತ್ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಿರರ್ ತಲಾ 10 ಮತಗಳನ್ನು ಪಡೆದು ಮುಖಭಂಗ ಅನುಭವಿಸಿದ್ದಾರೆ.
31 ಚುನಾಯಿತ ಸದಸ್ಯರು, ಶಾಸಕ ಮತ್ತು ಸಂಸದರು ಸೇರಿದಂತೆ 33 ಮಂದಿ ಮತದಾನದ ಹಕ್ಕು ಹೊಂದಿದ್ದರು. ಕಾಂಗ್ರೆಸ್ 13, ಬಿಎಸ್ಸಾರ್ ಕಾಂಗ್ರೆಸ್, ಪಕ್ಷೇತರ ತಲಾ ಒಬ್ಬರು, ಸಂಸದ ಡಿ.ಕೆ.ಸುರೇಶ್, ಶಾಸಕ ಸಿ.ಪಿ.ಯೋಗೇಶ್ವರ್ ವಿಜೇತ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು.
ಜೆಡಿಎಸ್ನ 16 ಸದಸ್ಯರ ಪೈಕಿ ಆರು ಮಂದಿ ಗೈರಾದರು. ಹಾಜರಿದ್ದ ಎಲ್ಲ 10 ಮಂದಿ ಸದಸ್ಯರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿದರು. ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಸಿದ್ದಪ್ಪ ಫಲಿತಾಂಶ ಪ್ರಕಟಿಸಿದರು.
ಸಂಸದಗೆ ಸೈನಿಕ ಸಾಥ್: ರಾಮನಗರ ಸಮೀಪದ ರೆಸಾರ್ಟ್ನಲ್ಲಿ ಶುಕ್ರವಾರವೇ ಪುರಪಿತೃಗಳ ಸಭೆ ನಡೆಸಿದ್ದ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಯೋಗೇಶ್ವರ್ ಅಭ್ಯರ್ಥಿಗಳನ್ನು ಆಖೈರುಗೊಳಿಸಿದ್ದರು. ಜೆಡಿಎಸ್ ಪಾಳಯದಲ್ಲಿದ್ದ ಪಕ್ಷೇತರ ಸದಸ್ಯ ನಂದೀಶ್ ಬೆಂಬಲ ಲಭಿಸುತ್ತಿದ್ದಂತೆಯೇ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಸ್ಪಷ್ಟವಾಗಿತ್ತು.
ವಿಜಯೋತ್ಸವ: ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನಗರಸಭೆ ಭವನದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಸಂಸದ ಸುರೇಶ್, ಶಾಸಕ ಯೋಗೇಶ್ವರ್ ಅಭಿನಂದಿಸಿದರು.
ಜೆಡಿಎಸ್ ಮತ್ತೆ ಒಡೆದ ಮನೆ
ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಮತ್ತೆ ಒಡೆದ ಮನೆಯಾಗಿದೆ. ಕಳೆದ ಅವಧಿಯಲ್ಲಿ ಬಹುಮತವಿದ್ದರೂ ಅಧಿಕಾರ ಉಳಿಸಿಕೊಳ್ಳದ ಪಕ್ಷವು ಈ ಬಾರಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅಧಿಕಾರ ಹಿಡಿಯುವ ಅವಕಾಶ ಕೈಚೆಲ್ಲಿದೆ. ಚನ್ನಪಟ್ಟಣಕ್ಕೆ ಸಮರ್ಥ ನಾಯಕತ್ವವಿಲ್ಲದ ಕೊರಗು ನೀಗಿಸಲು ಅನಿತಾ ಕುಮಾರಸ್ವಾಮಿ ಇಲ್ಲಿಂದ ಸ್ಪರ್ಧಿಸಿದ್ದರು. ಮುಖಂಡರ ಧೋರಣೆಗೆ ಬೇಸತ್ತು ಅವರು ಮತ್ತೆ ಈ ಕಡೆ ಮುಖ ಮಾಡಿಲ್ಲ. ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತಕ್ಕೆ ನಗರಸಭೆ ಚುನಾವಣೆ ಬೆಳವಣಿಗೆ ಕೈಗನ್ನಡಿಯಾಗಿದೆ. ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆ ಆದಾಗಿನಿಂದಲೂ ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವುದು, ಒಮ್ಮತದ ಅಭ್ಯರ್ಥಿ ಆಯ್ಕೆ ಸಂಬಂಧವಾಗಿ ಪಕ್ಷದ ಮುಖಂಡರು ಪ್ರಾಮಾಣಿಕ ಪ್ರಯತ್ನವನ್ನೇ ನಡೆಸಿಲ್ಲ. ಈ ಸೋಲಿನಲ್ಲಿ ಮುಖಂಡರ ವೈಫಲ್ಯ ಸ್ಪಷ್ಟವಾಗಿದೆ. ವರಿಷ್ಠರ ಮುಂದೆ ಚರ್ಚಿಸುವ ಮುನ್ನವೇ 16 ಸದಸ್ಯರ ಪೈಕಿ 10 ಮತ್ತು 6 ಸದಸ್ಯರು ಎರಡು ಗುಂಪಾಗಿದ್ದರು. ಇಬ್ಬಣಗಳೂ ತಮ್ಮದೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದವು. ಪಟ್ಟು ಬಿಡದೆ, ಇಬ್ಬಣಗಳೂ ಪಕ್ಷಕ್ಕೆ ಪೆಟ್ಟು ಕೊಟ್ಟಿವೆ.
ನಂದೀಶ್ ಮತಕ್ಕೆ ಕಸರತ್ತು
ಚನ್ನಪಟ್ಟಣ ನಗರಸಭೆಯ ಏಕೈಕ ಪಕ್ಷೇತರ ಸದಸ್ಯ ನಂದೀಶ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಬೆಂಬಲ ಸೂಚಿಸಿದ್ದರು. ಅವರು ಜೆಡಿಎಸ್ ಮುಖಂಡ ಲಿಂಗೇಶ್ಕುಮಾರ್ ಬೆಂಬಲಿಗ. ನಗರಸಭೆ ವರಿಷ್ಠರ ಚುನಾವಣೆಯಲ್ಲಿ ನಂದೀಶ್ ನಿಷ್ಠೆ ಕಾಂಗ್ರೆಸ್ಗೆ ಬದಲಾಗಿದೆ. ನಂದೀಶ್ ಅವರನ್ನು ತಮ್ಮತ್ತ ಸೆಳೆಯಲು ಉಭಯ ಪಕ್ಷಗಳು ಕಸರತ್ತು ನಡೆಸಿದ್ದವು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿಸಲು ಒಪ್ಪಿದ್ದ ನಂದೀಶ್, ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮುಕ್ತವಾಗಿಟ್ಟುಕೊಂಡಿದ್ದರು. ಜೆಡಿಎಸ್ನಲ್ಲಿ ಒಗ್ಗಟ್ಟು ಮೂಡಿದ್ದರೆ ನಂದೀಶ್ ಮತ ಸಿಗುತ್ತಿತ್ತು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

