ಬೆಂಗಳೂರು ಗ್ರಾಮಾಂತರ

ಯುಪಿಎ ಸರ್ಕಾರದಿಂದ ಅತ್ಯುತ್ತಮ ಆಡಳಿತ: ಡಿಕೆಶಿ

Published On :

ಕನಕಪುರ: ಕೇಂದ್ರದ ಯುಪಿಎ ಸರ್ಕಾರ ಜಾರಿಗೊಳಿಸಿರುವ ಮಹತ್ವದ ಕಾಯಿದೆಗಳಾದ ಆಹಾರ ಭದ್ರತೆ,ಉದ್ಯೋಗಖಾತ್ರಿ, ಕಡ್ಡಾಯ ಶಿಕ್ಷಣ, ಲೋಕಪಾಲ, ಸರ್ವರಿಗೂ ಶಿಕ್ಷಣ ಮೊದಲಾದವುಗಳು ದೇಶದ ಕಟ್ಟಕಡೆಯ ಜನರಿಗೂ ತಲುಪುತ್ತಿವೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಅವರು ಕನಕಪುರ ಪಟ್ಟಣದಲ್ಲಿ ಭಾರತ ನಿರ್ಮಾಣ ಅಭಿಯಾನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದಿಂದ ಪ್ರಾರಂಭವಾದ ಪಾದಯಾತ್ರೆ ಮಹಾತ್ಮಾಗಾಂಧಿರಸ್ತೆ, ಕಿತ್ತೂರು ಚನ್ನಮ್ಮರಸ್ತೆ, ಹಲಸಿನಮರ ದೊಡ್ಡಿ, ಮುನಿಸಿಪಲ್ ಮೈದಾನ, ಎಸ್.ಕರಿಯಪ್ಪರಸ್ತೆ ಮೂಲಕ ಮೆಳೇಕೋಟೆಯನ್ನು ತಲುಪಿತು. ಸಾವಿರಾರು ಜನರು ರಸ್ತೆಯುದ್ದಕ್ಕೂ ಸಚಿವರನ್ನು ಸ್ವಾಗತಿಸಿ ಶುಭಾಶಯಗಳನ್ನು ಕೋರಿದರು. ಪ್ರಮುಖ ವೃತ್ತಗಳಲ್ಲಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ಕೇಂದ್ರಸರ್ಕಾರ ಕಳೆದ 10 ವರ್ಷಗಳಲ್ಲಿ ಗಿರಿಜನರಿಗೆ ಪ್ರಾಕೃತಿಕ ಪರಿಸರದಲ್ಲಿ ಜೀವಿಸುವ ಹಕ್ಕು ಒದಗಿಸುವ ಅರಣ್ಯ ಹಕ್ಕುಗಳ ಕಾಯಿದೆ, ಮಹಿಳಾ ದೌರ್ಜನ್ಯತಡೆ ಕಾಯಿದೆ, ಕಾರ್ಮಿಕರ ರಕ್ಷಣಾ ಕಾಯಿದೆಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರಿಗೆ ಸರ್ಕಾರ ನೀಡಿರುವ ಸವಲತ್ತುಗಳನ್ನು ತಿಳಿಸಲು ಪಾದಯಾತ್ರೆ ಮೂಲಕ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ಸಚಿವ ಶಿವಕುಮಾರ್, ಬೆಂಗ್ರಾ ಲೋಕಸಭಾ ಕ್ಷೇತ್ರದ ನೂತನ ಸಂಸದ ಡಿ.ಕೆ.ಸುರೇಶ್ ಅವರು 10 ತಿಂಗಳ ಅವಧಿಯಲ್ಲಿ ಕ್ಷೇತ್ರದಾದ್ಯಂತ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಕಾರ್ಯಕ್ಷಮತೆ ಕಂಡಿರುವ ಜನರು ತಪ್ಪದೇ ಬೆಂಬಲಿಸಿ ಕೈಹಿಡಿಯುತ್ತಾರೆ ಎಂದು ಶಿವಕುಮಾರ್ ನುಡಿದರು.
ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸೂರನಹಳ್ಳಿ ಜಯರಾಂ, ವಿ. ಶ್ರೀನಿವಾಸ್, ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಪುರಸಭಾ ಮಾ ಅಧ್ಯಕ್ಷ ಜಿ.ಆರ್. ಕೃಷ್ಣಮೂರ್ತಿ, ಪಟ್ಟಣದ ಎಲ್ಲಾ ಪುರಸಭಾ ಸದಸ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.