ಬೆಂಗಳೂರು ಗ್ರಾಮಾಂತರ

ಎಚ್‌ಡಿಕೆ ನಡೆ ಚಿಕ್ಕಬಳ್ಳಾಪುರ ಕಡೆ?

Published On :

ಮತ್ತೀಕೆರೆ ಜಯರಾಮ್
ರಾಮನಗರ: ಲೋಕಸಭೆಗೆ ಸುತಾರಾಂ ಸ್ಪರ್ಧೆ ಇಲ್ಲ ಎಂದು ಹೇಳುತ್ತಲೇ ಬಂದಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರಾಂತರದೊಂದಿಗೆ ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿಯುವ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಸ್ವಕ್ಷೇತ್ರ ರಾಮನಗರ ಸಹಿತ ಜಿಲ್ಲೆಯ ಜೆಡಿಎಸ್ ಪಾಳಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಕುಮಾರಸ್ವಾಮಿ ಒಲವು ತೋರುತ್ತಿದ್ದಂತೆಯೇ ರಾಮನಗರ ಜಿಲ್ಲಾ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಜಿಪಂ ಸದಸ್ಯರ ಸಹಿತ  ಸ್ಥಳೀಯ ಸಂಸ್ಥೆಗಳ ಸದಸ್ಯರನೇಕರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.  ರಾಮನಗರ ಕ್ಷೇತ್ರ ಮತ್ತು ಜಿಲ್ಲೆ ಮುಖಂಡರ ಅಭಿಪ್ರಾಯ ಪಡೆದುಕೊಂಡು ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆನ್ನಲ್ಲೇ ಜಿಲ್ಲೆಯ ಜೆಡಿಎಸ್ ಮುಖಂಡರು, ಕಾರ್ಯಕರ್ತರ ದಂಡು ಬೆಂಗಳೂರಿಗೆ ದೌಡಾಯಿಸಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸ್ಪರ್ಧೆ ನಿಲುವಿನಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದೆ.
ನಿಖಿಲ್‌ಗೌಡ ಕ್ಷೇತ್ರಾಂತರ ಬೇಡ್ವೆ ಬೇಡ ಎನ್ನುತ್ತಿದ್ದಾರೆ
ಬೆಂಗಳೂರು ಗ್ರಾಮಾಂತರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆ ಪ್ರಸ್ತಾಪವಾಗುತ್ತಿದ್ದಂತೆಯೇ ಸ್ವತಃ ಕುಮಾರಸ್ವಾಮಿ ಸಹಿತ ಇಡೀ ಕುಟುಂಬ ವಿರೋಧಿಸಿತ್ತು. ಈಗ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಇರಾದೆ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಪಾಲಿಗೂ ಕುಟುಂಬದಲ್ಲಿ ತೀವ್ರ ವಿರೋಧ ಎದುರಾಗಿದೆ. ಸತತ ಎರಡು ಸೋಲಿನ ನಂತರ ಚುನಾವಣಾ ರಾಜಕಾರಣದಿಂದಲೇ ದೂರವಾಗಿರುವ ಪತ್ನಿ ಅನಿತಾ ಕುಮಾರಸ್ವಾಮಿ,
ಪುತ್ರ ನಿಖಿಲ್‌ಗೌಡ ಕೂಡ ಕುಮಾರಸ್ವಾಮಿ ಕ್ಷೇತ್ರಾಂತರ ಬಿಲ್‌ಕುಲ್ ಬೇಡ ಎನ್ನುತ್ತಿದ್ದಾರೆ. ಚಿಕ್ಕಬಳ್ಳಾಪುರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಒಲವು ತೋರಿರುವ ದೇವೇಗೌಡರು ಕುಮಾರಸ್ವಾಮಿ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕ್ಷೇತ್ರಾಂತರದ ಸವಾಲುಗಳು
ಲೋಕಸಭೆಗೆ ಸ್ಪರ್ಧಿಸುವುದೇ ಇಲ್ಲ ಎಂದಿದ್ದ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರಕ್ಕೆ ಬೆನ್ನು ತೋರಿ, ಚಿಕ್ಕಬಳ್ಳಾಪುರದಲ್ಲಿ ಕಣಕ್ಕೆ ಇಳಿದಿದ್ದೇ ಆದರೆ ಡಿಕೆಎಸ್ ಸಹೋದರರ ಅಬ್ಬರಕ್ಕೆ ಹೆದರಿ ಪಲಾಯನ ಮಾಡಿದರೆನ್ನುವ ಆರೋಪಕ್ಕೆ ಗುರಿಯಾಗುವ ಸಾಧ್ಯತೆಯಿದೆ.  ಈಗಾಗಲೇ ಲೋಕಸಭೆ ಮತ್ತು ವಿಧಾನಸಭೆಗೆ ತಲಾ ಒಮ್ಮೆ ಉಪ ಚುನಾವಣೆ ತಂದೊಡ್ಡಿದ ಕಳಂಕಕ್ಕೆ ಗುರಿಯಾಗಿರುವ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಿಂದ ಲೋಕಸಭೆಗೆ ಚುನಾಯಿತರಾದರೆ ರಾಮನಗರದಲ್ಲಿ ಮತ್ತೊಂದು ಉಪ ಚುನಾವಣೆಗೆ ಕಾರಣರಾದ ಅಪಖ್ಯಾತಿಗೂ ಗುರಿಯಾಗಲಿದ್ದಾರೆ.  ಹೇಳಿ ಕೇಳಿ ರಾಮನಗರದಲ್ಲಿ ಡಿಕೆಎಸ್ ಸಹೋದರರ ಹವಾ ಜೋರಾಗಿದೆ. ಕಾಂಗ್ರೆಸ್ ಪ್ರಾಬಲ್ಯ ಹೆಚ್ಚುತ್ತಿದೆ. ಹೀಗಿರುವಾಗ ಪಕ್ಷ ಬಲಪಡಿಸುವ ಬದಲು ನಂಬಿದವರನ್ನು ನಡುನೀರಲ್ಲಿ ಬಿಟ್ಟು ಹೋದರೆನ್ನುವ ಟೀಕೆಯನ್ನು ಅವರು ಎದುರಿಸಬೇಕಾಗುತ್ತದೆ. ಕುಮಾರಸ್ವಾಮಿ ಕ್ಷೇತ್ರಾಂತರ ಮಾಡಿದ್ದೇ ಆದರೆ ರಾಮನಗರ ಜಿಲ್ಲೆಯ ಜೆಡಿಎಸ್‌ನಲ್ಲಿ ಅವರ ಸ್ಥಾನ ತುಂಬಬಲ್ಲ ಸಮರ್ಥ ನಾಯಕತ್ವದ ಕೊರತೆ ಎದುರಾಗುತ್ತದೆ. ತಾವೇ ಕಷ್ಟಪಟ್ಟು ಕಟ್ಟಿದ ಪಕ್ಷ ಮತ್ತು ಸಂಘಟನೆಗೆ ಎಳ್ಳುನೀರು ಬಿಟ್ಟಂತಾಗುವುದು ನಿಶ್ಚಿತ.
ಬೇಸತ್ತರೇ ಎಚ್‌ಡಿಕೆ...
ರಾಮನಗರ ಜಿಲ್ಲೆಯ ಎಲ್ಲ 4 ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ಕಳಪೆಯಾಗಿದೆ. ವಿಧಾನಸಭೆಯಲ್ಲಿ ಚನ್ನಪಟ್ಟಣದಿಂದ ಪತ್ನಿ ಅನಿತಾ ಕುಮಾರಸ್ವಾಮಿ ಸೋಲು, ಲೋಕಸಭೆ ಉಪ ಸಮರದಲ್ಲೂ ದಕ್ಕದ ಗೆಲವು, ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ್ರೋಹ ಎಸಗಿದ ಸದಸ್ಯರ ವರ್ತನೆ ಕುಮಾರಸ್ವಾಮಿ ಅವರಿಗೆ ಸಹಜವಾಗಿಯೇ ಬೇಸರ ಮೂಡಿಸಿದೆ. ರಾಮನಗರದಲ್ಲಿ ಕಾಂಗ್ರೆಸ್ ಅದರಲ್ಲೂ ಡಿಕೆಎಸ್ ಸಹೋದರರ ಅಧಿಪತ್ಯ ಸ್ಥಾಪನೆಯಾಗುತ್ತಿದೆ. ಇದೆಲ್ಲದರ ಹೊರತಾಗಿ ಲೋಕಸಭೆಯಲ್ಲಿ ಪಕ್ಷಕ್ಕೆ ಒಂದು ಸ್ಥಾನ ಹೆಚ್ಚಿಸಿಕೊಳ್ಳವ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆಗೆ ಇಳಿಯುವ ಕುರಿತ ಕುಮಾರಸ್ವಾಮಿ ಇರಾದೆ ಅವರ ಆಪ್ತೇಷ್ಟರು, ಬೆಂಬಲಿಗರಿಗೆ ಅಪಥ್ಯವೇ ಸರಿ.
ತುರ್ತು ಸಭೆಗೆ ನಿರ್ಧಾರ
ಚಿಕ್ಕಬಳ್ಳಾಪುರದಿಂದ ಕುಮಾರಸ್ವಾಮಿ ಸ್ಪರ್ಧೆ ತಡೆಯಲು ಒತ್ತಡ ಹೇರುವ ನಿಟ್ಟಿನಲ್ಲಿ ಆಪ್ತರು, ಜೆಡಿಎಸ್ ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರ ತುರ್ತು ಸಭೆಯನ್ನು ರಾಮನಗರದಲ್ಲಿ ಬುಧವಾರ ಆಯೋಜಿಸುವ ನಿಟ್ಟಿನಲ್ಲಿ ರಾಮನಗರ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಕೂಟಗಲ್ ದೇವೇಗೌಡ ಮುಂದಾಗಿದ್ದಾರೆ.  ಕುಮಾರಸ್ವಾಮಿ ಅವರು ದುಡುಕಿನ ನಿರ್ಧಾರ ಕೈಗೊಳ್ಳಲು ಹೊರಟಿದ್ದಾರೆ. ಒಂದೊಮ್ಮೆ ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಮೂಲಕ ರಾಮನಗರ ಜಿಲ್ಲೆ ತೊರೆದಿದ್ದೇ ಆದರೆ ವ್ಯತಿರಿಕ್ತ ಪರಿಣಾಮ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಘಟಕ ವಿಸರ್ಜಿಸಿ, ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ಚಿಕ್ಕಬಳ್ಳಾಪುರ ಅಭ್ಯರ್ಥಿ ಖಚಿತ: ಕೃಷ್ಣಪ್ಪ
ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರನ್ನು ಅಭ್ಯರ್ಥಿಯಾಗಲು ಕ್ಷೇತ್ರದ ಮತದಾರರು ಒತ್ತಾಯ ಮಾಡುತ್ತಿರುವುದರಿಂದ ಅಭ್ಯರ್ಥಿಯಾಗಲು ಕುಮಾರಸ್ವಾಮಿ ಅವರು ಬಹುತೇಕ ಒಪ್ಪಿಗೆ ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ ದೇವನಹಳ್ಳಿ ಪಿಎಲ್‌ಡಿ ಬ್ಯಾಂಕ್ ಕಟ್ಟಡದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 ಅನಿತಾ ಕುಮಾರಸ್ವಾಮಿ ಅವರ ಅನಾರೋಗ್ಯ ಕಾರಣದಿದಾಗಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಲು ಕ್ಷೇತ್ರದ ಶಾಸಕರು ಹಾಗೂ ಎಲ್ಲ ಕಾರ್ಯಕರ್ತರ ಆಸೆಯಂತೆ ಕಣಕ್ಕೆ ಇಳಿಯಲಿದ್ದಾರೆ.
ಮಾ.20 ರಂದು ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಆಯೋಜಿಸಿದ್ದು,  ಅಂದು ನಡೆಯುವ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಕುಮಾರಸ್ವಾಮಿರವರನ್ನು ಈ ಕ್ಷೇತ್ರದಿಂದ ಆಯ್ಕೆಮಾಡಿ ಕಳುಹಿಸಿದರೆ ಬಯಲು ಸೀಮೆ ಜಿಲ್ಲೆಗಳ ಬಹುದಿನಗಳ ಶಾಶ್ವತ ನೀರಾವರಿ ಯೋಜನೆಯ ಬೇಡಿಕೆ ಈಡೇರಲಿದೆ ಎಂದರಲ್ಲದೆ ಈ ಭಾಗದ ಜನತೆ ಅವರಿಗೆ ಮತ್ತಷ್ಟು ಶಕ್ತಿ ನೀಡಬೇಕು ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಗೋವಿಂದರಾಜು, ಹೊಸಕೋಟೆ ಮುಖಂಡ ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜು, ಜಿಪಂ ಮಾಜಿ ಅಧ್ಯಕ್ಷೆ ಶಾಂತಮ್ಮ ಮದ್ದೂರಪ್ಪ, ತಾಲೂಕು ಸೊಸೈಟಿ ಅಧ್ಯಕ್ಷ ಗಂಗಾಧರ್, ಜಿಪಂ ಮಾಜಿ ಸದಸ್ಯರಾದ ಬಸವರಾಜು, ವೀರಪ್ಪ, ತಾಪಂ ಉಪಾಧ್ಯಕ್ಷ ಪಟಾಲಪ್ಪ, ಎ.ಶಿವರಾಮಯ್ಯ, ಯರಪ್ಪನಹಳ್ಳಿ ಪಿ. ಮಂಜುನಾಥ್, ಎ.ಶಿವರಾಮಯ್ಯ, ಗುರಪ್ಪ, ವಕೀಲ ಚಿಕ್ಕನಾರಾಯಣಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.