ಬೆಂಗಳೂರು ಗ್ರಾಮಾಂತರ

ಬ್ಯಾಂಕ್ ಹಣಕಾಸು ವ್ಯವಹಾರದ ಮೇಲೆ ಹದ್ದಿನ ಕಣ್ಣು

Published On :

ರಾಮನಗರ: ಲೋಕಸಭೆ ಚುನಾವಣೆ ವೇಳೆ ನಡೆಯಬಹುದಾದ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಬ್ಯಾಂಕ್ಗಳಲ್ಲಿ ಪ್ರತಿ ದಿನ ನಡೆಯುವ ಹಣಕಾಸಿನ ವ್ಯವಹಾರ ಹಾಗೂ ವಸತಿ ಗೃಹಗಳಲ್ಲಿ ತಂಗುವ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ.  ಈ ಹಿಂದಿನ ಚುನಾವಣೆಗಳಲ್ಲಿ ಆಂಬುಲೆನ್ಸ್ ಮತ್ತು ಪ್ರೆಸ್ಬೋರ್ಡ್ ವಾಹನಗಳಲ್ಲಿ ರಾಜಕೀಯ ಪಕ್ಷಗಳು ಹಣ ಸೇರಿದಂತೆ ಮತ್ತಿತರ ವಸ್ತುಗಳನ್ನು ಸಾಗಿಸಿರುವ ಉದಾಹರಣೆಗಳು ಸಾಕಷ್ಟಿರುವುದರಿಂದ ಈ ಬಾರಿ ಆಂಬುಲೆನ್ಸ್ ಹಾಗೂ ಪ್ರೆಸ್ ಬೋರ್ಡ್ ವಾಹನಗಳನ್ನೂ ಸಂಪೂರ್ಣ ತಪಾಸಣೆಗೊಳಪಡಿಸಲು ತೀರ್ಮಾನಿಸಲಾಗಿದೆ.
ಹಣದ ಮೇಲೆ ಗಮನ: ರಾಷ್ಟ್ರೀಕೃತ, ಖಾಸಗಿ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿ ದಿನಂಪ್ರತಿ ಹಣದ ವಹಿವಾಟಿನ ಮೇಲೆ ಜಿಲ್ಲಾಡಳಿತ ಗಮನಹರಿಸಿದೆ. ಜಿಲ್ಲಾ ಕೇಂದ್ರ ಮಾತ್ರವಲ್ಲದೆ ತಾಲೂಕು ಹಂತ, ಹೋಬಳಿ ಮಟ್ಟದ ಬ್ಯಾಂಕ್ಗಳ ವ್ಯವಹಾರದ ಮೇಲೂ ಕಣ್ಣಿಟ್ಟಿದೆ. ದೊಡ್ಡ ಮೊತ್ತದ ಹಣದ ವ್ಯವಹಾರ ನಡೆಸಿದ ಗ್ರಾಹಕರ ಮಾಹಿತಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ರು.1 ಲಕ್ಷಕ್ಕಿಂತ ಹೆಚ್ಚು ಹಣ ಡ್ರಾ ಮಾಡುವ ವ್ಯಕ್ತಿಗಳ ವಿವರವನ್ನು ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರು ಕಡ್ಡಾಯವಾಗಿ ಸ್ಥಳೀಯ ಚುನಾವಣಾಧಿಕಾರಿಗೆ ಸಲ್ಲಿಸಬೇಕು ಹಾಗೂ ಯಾವುದೇ ವ್ಯಕ್ತಿಯ ಖಾತೆಗೆ ಭಾರಿ ಮೊತ್ತದ ಸಂದಾಯವಾದರೂ ಅಂತಹವರ ವ್ಯವಹಾರದ ಮೇಲೆ ನಿಗಾ ಇಡುವಂತೆ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ.
ಬ್ಯಾಂಕುಗಳ ಎಟಿಎಂಗೆ ಹಣ ಪಾವತಿಸುವ ಏಜೆನ್ಸಿಗಳೂ ಸೂಕ್ತ ದಾಖಲೆಗಳೊಂದಿಗೆ ಹಣ ಸಾಗಿಸುವುದು ಕಡ್ಡಾಯವಾಗಿದೆ. ಈ ಕುರಿತು ಸಂಬಂಧಿಸಿದ ಏಜೆನ್ಸಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಡಳಿತ  ಬ್ಯಾಂಕ್ಗಳಿಗೆ ಸೂಚಿಸಿದೆ.  ಯಾವುದೇ ವ್ಯಕ್ತಿಯು ರು.50 ಸಾವಿರಕ್ಕಿಂತ ಹೆಚ್ಚು ಹಣ ಕೊಂಡೊಯ್ಯುವ ವೇಳೆ ಆ ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ಹೊಂದಿರಬೇಕು. ಒಂದು ವೇಳೆ ಸೂಕ್ತ ದಾಖಲೆ ಇಲ್ಲದೆ ಹಣ ಕೊಂಡೊಯ್ಯುತ್ತಿದ್ದುದು ಪತ್ತೆಯಾದರೇ ಹಣವನ್ನು ವಶಕ್ಕೆ ಪಡೆಯಲಾಗುತ್ತದೆ.
ಹಲವು ತಂಡ ರಚನೆ: ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತವು ಮಾದರಿ ನೀತಿ ಸಂಹಿತೆ, ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರ, ಎಂಸಿಎಂಸಿ ಲೈಸನ್ಸಿಂಗ್ ಅಧಿಕಾರಿ, ಅಕೌಂಟಿಂಗ್, ವೀಡಿಯೋ ಕಣ್ಗಾವಲು ಮತ್ತು ಅವಲೋಕನ ತಂಡ, ಸ್ಪಾಟಿಕ್ ಸರ್ವೈವಲ್ ತಂಡ,  ಫ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ ಮಾಡಿದೆ. ಜತೆಗೆ ಪ್ರಮುಖ ರಸ್ತೆಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ವಾಹನ ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದಲ್ಲದೆ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಗೆ ಜಿಲ್ಲಾಡಳಿತ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಚುನಾವಣೆಯು ಶಾಂತಿಯುತವಾಗಿ ನಡೆಸಲು  ಸಿದ್ಧತೆಯಲ್ಲಿ ತೊಡಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.