ಗದ್ದಲ: ಜೆಡಿಎಸ್ ಸಭೆ ಬರಕಾಸ್ತು
ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರಾಂತರ ನಿರ್ಧಾರದಿಂದ ರೊಚ್ಚಿಗೆದ್ದಿರುವ ಸ್ವಕ್ಷೇತ್ರ ರಾಮನಗರದ ಜೆಡಿಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಎಬ್ಬಿಸಿದ ಗದ್ದಲದಿಂದ ನಗರದಲ್ಲಿ ಶುಕ್ರವಾರ ಕರೆದಿದ್ದ ಪಕ್ಷದ ಪೂರ್ವಭಾವಿ ಸಭೆ ಬರಕಾಸ್ತುಗೊಂಡಿತು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಈ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಭಾಷಣ ಪ್ರಾರಂಭಿಸುತ್ತಿದ್ದಂತೆಯೇ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತು.
ವೇದಿಕೆಗೆ ನುಗ್ಗಿದರು: ವೇದಿಕೆಗೆ ನುಗ್ಗಿದ ಕಾರ್ಯಕರ್ತರ ಗುಂಪು ಕುಮಾರಸ್ವಾಮಿ ತಮ್ಮ ನಿಲುವು ಸ್ಪಷ್ಟಪಡಿಸುವವರೆಗೆ ಇಲ್ಲಿ ಯಾವ ಸಭೆಯೂ ನಡೆಯಕೂಡದು. ಅದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಪ್ರಾಣ ಕೊಟ್ಟರೂ ಕುಮಾರಣ್ಣನನ್ನು ಇಲ್ಲಿಂದ ಬಿಡೆವು ಎಂದು ಕೂಗಾಡಿದರು. ಕಾರ್ಯಕರ್ತರ ಆಕ್ರೋಶ ತಣ್ಣಗಾಗಿಸಲು ಶಾಸಕ ಬಾಲಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಸಹಿತ ಮುಖಂಡರು ನಡೆಸಿದ ಯಾವ ಪ್ರಯತ್ನವೂ ಫಲಿಸಲಿಲ್ಲ. ಕಡೆಗೆ, ಮುಖಂಡರು ದೂರವಾಣಿ ಮೂಲಕ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದರು.
ಸಭೆ ನಡೆಸಲು ಬಿಡೆವು: ಕುಮಾರಸ್ವಾಮಿ ಅವರೇನಾದರೂ ವ್ಯತಿರಿಕ್ತ ತೀರ್ಮಾನ ಕೈಗೊಂಡಿದ್ದೇ ಆದರೆ ಇದೊಂದು ಸಭೆ ಮಾತ್ರವಲ್ಲ, ರಾಮನಗರ ಮತ್ತು ಜಿಲ್ಲೆಯಲ್ಲಿ ಜೆಡಿಎಸ್ನ ಯಾವೊಂದು ಸಭೆ ನಡೆಸುವುದಕ್ಕೂ ನಾವು ಬಿಡುವುದಿಲ್ಲ ಎಂದು ಕಾರ್ಯಕರ್ತರು ಧಮಕಿ ಹಾಕಿದರು.
ಇಲ್ಲಿನ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿಯವರಿಂದ ನಾಮಪತ್ರ ಸಲ್ಲಿಕೆ ಆಗದಂತೆ ತಡೆಯುತ್ತೇವೆ. ಪಕ್ಷದ ಪರ ಇನ್ನು ಯಾವುದೇ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಮತ ಚಲಾಯಿಸಲು ಮತಗಟ್ಟೆಗೆ ಹೋಗದೆ, ತಟಸ್ಥರಾಗುತ್ತೇವೆ ಎಂದು ಆಕ್ರೋಶದ ಮಾತುಗಳನ್ನಾಡಿದರು.
ನಾವು ವಿಷ ಕುಡಿಯುತ್ತೇವೆ
ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಬೆಳೆಸಿ, ಎತ್ತರಕ್ಕೆ ಕೊಂಡೊಯ್ದವರು ನಾವು. ಈಗ ಅವರೇನಾದರೂ ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಇಳಿಯುವುದಾದರೆ ನಾವು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೂ ಕುಮಾರಸ್ವಾಮಿ ಗೆಲವು ನಿಶ್ಚಿತ. ಅವರಿಗಾಗಿ ನಾವು ತನು, ಮನ, ಧನ ಅರ್ಪಿಸಿ ಕೆಲಸ ಮಾಡುತ್ತೇವೆ. ಸ್ಪರ್ಧಿಸುವುದೇ ಆದರೆ ಇಲ್ಲಿಂದಲೇ ಸ್ಪರ್ಧಿಸಲಿ ಎಂದು ಅವರು ಆಗ್ರಹಿಸಿದರು.
ಇಂದು ಎಚ್ಡಿಕೆ ಭೇಟಿ
ಕಾರ್ಯಕರ್ತರ ಗದ್ದಲ ಮತ್ತು ಸಭೆ ಬರಕಾಸ್ತು ಬಗ್ಗೆ ಮಾಹಿತಿ ಪಡೆದ ಕುಮಾರಸ್ವಾಮಿ, ಚಿಕ್ಕಬಳ್ಳಾಪುರದಿಂದ ತಮ್ಮ ಸ್ಪರ್ಧೆ ಸಂಬಂಧ ಅನುಮತಿ ಪಡೆಯುವುದಕ್ಕಾಗಿ ನಾಳೆ (ಮಾ.22) ರಾಮನಗರಕ್ಕೆ ಭೇಟಿ ನೀಡುವುದಾಗಿ ಮುಖಂಡರಿಗೆ ಸಂದೇಶ ರವಾನಿಸಿದ್ದಾರೆ.
ಪೂರ್ವಭಾವಿ ಸಭೆಗೆ ಕುಮಾರಸ್ವಾಮಿ ಆಗಮಿಸಬೇಕಿತ್ತಾದರೂ ಅನ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾದ ಪರಿಣಾಮ ಗೈರಾದರು. ಅವರ ಸೂಚನೆಯಂತೆ ನಗರದ ಕಂದಾಯ ಭವನ ಎದುರು ಇರುವ ಜೆಡಿಎಸ್ ಜಿಲ್ಲಾ ಕಚೇರಿ ಆವರಣದಲ್ಲಿ ಶನಿವಾರ ಬೆಳಗ್ಗೆ 11ಕ್ಕೆ ಸಭೆ ಆಯೋಜಿಸಲಾಗಿದೆ.
ಈ ವಿಷಯವನ್ನು ಪಕ್ಷದ ಜಿಲ್ಲಾಧ್ಯಕ್ಷ ಕೆ.ರಾಜು ಮತ್ತು ಶಾಸಕ ಎಚ್.ಸಿ. ಬಾಲಕೃಷ್ಣ ಸುದ್ದಿಗಾರರಿಗೆ ತಿಳಿಸಿದ್ದು, ಕಾರ್ಯಕರ್ತರನ್ನು ಸಮಾಧಾನ ಪಡಿಸಲು ತಮ್ಮಿಂದ ಸಾಧ್ಯವಾಗಿಲ್ಲ. ಆ ಕೆಲಸವನ್ನು ಕುಮಾರಸ್ವಾಮಿ ಅವರೇ ಮಾಡಿ, ತಮ್ಮಿಷ್ಟದ ತೀರ್ಮಾನ ಕೈಗೊಳ್ಳಲಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

