ಬೆಂಗಳೂರು ಗ್ರಾಮಾಂತರ

ಚಂದ್ರ ದಾರುಣ ಕೊಲೆ: ಆರೋಪಿಗಳ ಬಂಧನ

Published On :

ಕನಕಪುರ: ಕ್ಷುಲ್ಲುಕ ಕಾರಣಕ್ಕೆ  ಕನಕಪುರ ತಾಲೂಕು ಕಲ್ಲಹಳ್ಳಿ ಗ್ರಾಮದಲ್ಲಿ ದಾರುಣವಾಗಿ ಕೊಲೆಯಾದ ಚಂದ್ರ ಉ.ಕೆಪಿಯ ಕೊಲೆಗಾರರನ್ನು ಕನಕಪುರ ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಉಮೇಶ, ಕುಮಾರ, ಪಾರ್ಥ ಹಾಗೂ ರಘು ಅವರು ಮಾ.5 ರಂದು ಕೊಲೆಗೀಡಾದ  ಚಂದ್ರನನ್ನು ಕಲ್ಲಹಳ್ಳಿ ಪೈಪ್‌ಲೈನ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಟಾಟಾ ಇಂಡಿಕಾ ಕಾರನ್ನು ಗುದ್ದಿಸಿ ಕೆಳಗೆ ಬೀಳಿಸಿ ಮಾರಕಾಸ್ತ್ರಗಳಿಂದ  ಹಲ್ಲೆನಡೆಸಿ ಕೊಲೆ ಮಾಡಿದ್ದಾರೆ ಎಂದು ಪೋಲೀಸರು ವಿವರ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠ ಅನುಪಮ್ ಅಗರ್ವಾಲ್, ಡಿವೈಎಸ್ಪಿ ಕುಲದೀಪಕುಮಾರ್ ಜೈನ್, ವೃತ್ತನಿರೀಕ್ಷಕ  ಸಿದ್ದೇಗೌಡ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಹದೇವಸ್ವಾಮಿ ಹಾಗೂ ಮಲ್ಲೇಶ್ ನೇತೃತ್ವದ ತಂಡವು ತೀವ್ರವಾದ ಶೋಧ ನಡೆಸಿ ರಾಮನಗರದ ಕೆಎಸ್‌ಆರ್‌ಟಿಸಿ ಡಿಪೋ ಬಳಿ ನಿಲ್ಲಿಸಿದ್ದ ಇಂಡಿಕಾ ಕಾರು ಹಾಗೂ ಸಮೀಪದ ವಸತಿನಿಲಯದಲ್ಲಿ ತಂಗಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲು ಮಾಡಿದ್ದಾರೆ. ಆರೋಪಿಗಳಿಂದ ಇಂಡಿಕಾ ಕಾರು, ಕಬ್ಬಿಣದ ರಾಡ್, ಲಾಂಗ್ ಹಾಗೂ ಚಾಕುವನ್ನು ವಶಪಡಿಸಿಕೊಂಡು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.
ವಾಹನ ಡಿಕ್ಕಿ: ಒಬ್ಬನ ಸಾವು, ಮತ್ತೊಬ್ಬನ ಸ್ಥಿತಿ ಚಿಂತಾಜನಕ
ಸೂಲಿಬೆಲೆ: ಹೊಸಕೋಟೆ, ಜಂಗಮಕೋಟೆ ರಸ್ತೆಯಲ್ಲಿ ಅಪರಿಚಿತ ವಾಹನ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮುತ್ಸಂದ್ರ ಗೇಟಿನಲ್ಲಿ ಕ್ಷೌರಿಕ ಅಂಗಡಿಯನ್ನು ಹೊಂದಿದ್ದ ಮಲ್ಲಿಮಾಕನಪುರ ನಿವಾಸಿ ಆಂಜಿನಪ್ಪ (19) ಸಾವನ್ನಪ್ಪಿದ್ದು, ಚೋಟುಸಾಬಿ ಹಾಗೂ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ನಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಅತಿವೇಗಕ್ಕೆ ಅಮಾಯಕ ಬಲಿ: ಹೊಸಕೋಟೆಯಿಂದ ಜಂಗಮಕೋಟೆ ರಸ್ತೆಯಲ್ಲಿ ಮುತ್ಸಂದ್ರ ಗ್ರಾಮದ ಕಡೆ ಬೈಕಿನಲ್ಲಿ ಆಂಜಿನಪ್ಪ ಹಾಗೂ ಚೋಟುಸಾಬಿ ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹಿಂದಿನಿಂದ ಅತಿವೇಗವಾಗಿ ಬಂದ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಬೈಕಿನ ಮುಂಭಾಗದಲ್ಲಿ ಆಂಜಿನಪ್ಪ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿಗೆ ವಾಹನ ಅದೇ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಜಿನಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಚೋಟು ಸಾಬಿ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಚೋಟು ಸಾಬಿ ಸ್ಥಿತಿ ಚಿಂತಾಜನಕವಾಗಿದ್ದು, ಸದ್ಯ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದ್ವಿಚಕ್ರ ವಾಹನ ಚಾಲಕ ಸಾವು
ಕನಕಪುರ: ಕನಕಪುರ ತಾಲೂಕಿನ ರಾವುಗೋಡ್ಲು ಗೇಟ್ ಬಳಿ ದ್ವಿಚಕ್ರ ವಾಹನವೊಂದಕ್ಕೆ ಬಿಎಂಟಿಸಿ ಸಾರಿಗೆ ಬಸ್ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಮೃತವ್ಯಕ್ತಿ ಕನಕಪುರದ ಕುಮಾರ್ (45) ಎಂದು ತಿಳಿದು ಬಂದಿದೆ.
ವೈಯಕ್ತಿಕ ದ್ವೇಷ: ಗುಡಿಸಲಿಗೆ ಬೆಂಕಿ
ಕನಕಪುರ: ತಾಲೂಕು ಅಳ್ಳಿಮಾರನಹಳ್ಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷದಿಂದ ಗುಡಿಸಲೊಂದಕ್ಕೆ ಬೆಂಕಿಹಾಕಿ ಸುಟ್ಟ ಪ್ರಕರಣ ನಡೆದಿದೆ. ಅಳ್ಳಿಮಾರನಹಳ್ಳಿ ಗ್ರಾಮದ ಮರಿಯಪ್ಪ ಎಂಬುವವರು ಅಳ್ಳಿಗುಡ್ಡೆಯ ಸಮೀಪ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು. ಪಕ್ಕದ ಜಮೀನಿನ ಶ್ರೀನಿವಾಸ್ ಹಾಗೂ ವೆಂಕಟೇಗೌಡ ಎಂಬುವವರು ತಮ್ಮನ್ನು ಒಕ್ಕಲೆಬ್ಬಿಸುವ ಸಲುವಾಗಿ ದುಷ್ಕೃತ್ಯ ನಡೆಸಿದ್ದಾರೆ  ಎಂದು ಮರಿಯಪ್ಪ ಕನಕಪುರ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕ್ರಿಕೆಟ್ ಟೂರ್ನಿ ಉದ್ಘಾಟನೆ
ಕನಕಪುರ: ಗ್ರಾಮೀಣ ಪ್ರದೇಶದ ಯುವಕರೂ ಕೂಡ ಪಂದ್ಯಾವಳಿಗಳಲ್ಲಿ ಗ್ರಾಮತಂಡಗಳನ್ನು ರಚಿಸಿಕೊಂಡು ಪಾಲ್ಗೊಳ್ಳುತ್ತಿರುವುದು ಸ್ವಾಗತಾರ್ಹ ಎಂದು ಜಿಪಂ ಸದಸ್ಯ ಇಕ್ಬಾಲ್ ಹುಸೇನ್ ಹೇಳಿದ್ದಾರೆ.  ಅವರು ಕನಕಪುರ ತಾಲೂಕು ಚಿಕ್ಕಕೊಪ್ಪ ಗ್ರಾಮದಲ್ಲಿ ವೀರಾಂಜನೇಯ ಗೆಳೆಯರ ಬಳಗ ಹಾಗೂ ಮಾರುತಿ ಕ್ರಿಕೆಟರ್ಸ್ ಸಂಯುಕ್ತವಾಗಿ ಆಯೋಜಿಸಿದ್ದ ಕ್ರಿಕೆಟ್  ಟೂರ್ನಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಪಂದ್ಯಾವಳಿಗಳಲ್ಲಿ ಹತ್ತಾರು ಗ್ರಾಮತಂಡಗಳು ಉತ್ಸಾಹದಿಂದ ಪಾಲ್ಗೊಂಡಿದ್ದವು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.