ಬೆಂಗಳೂರು ಗ್ರಾಮಾಂತರ

ಪತ್ನಿ ಗೆಲ್ಲಲಿಲ್ಲ ಎಂಬುದಕ್ಕೆ ಕಣ್ಣೀರು

Published On :

ಚನ್ನಪಟ್ಟಣ: ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಪತ್ನಿ ಗೆಲ್ಲಲಿಲ್ಲ ಎಂದು ಕಣ್ಣೀರಿಟ್ಟರೇ ಹೊರತು ಈ ಜಿಲ್ಲೆಯ ಜನತೆಗಾಗಿ ಕಣ್ಣೀರು ಸುರಿಸಿಲ್ಲ, ಅವರದು ಸ್ವಾರ್ಥಕ್ಕಾಗಿ ಹರಿದ ಕಣ್ಣೀರು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಲೇವಡಿ ಮಾಡಿದರು.
ತಾಲೂಕಿನ ಹನುಮಾಪುರ ದೊಡ್ಡಿಬಳಿ ನಡೆಯುತ್ತಿರುವ ಕಣ್ವ ಏತನೀರಾವರಿ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿ, ತನ್ನ ಹೆಂಡತಿಯನ್ನು ಗೆಲ್ಲಿಸಲಿಲ್ಲ ಎಂಬ ಕಾರಣಕ್ಕೆ ಜನ ಕತ್ತು ಕುಯ್ದರು ಎಂದು  ಕಣ್ಣೀರಾಕುತ್ತಿದ್ದಾರೆ, ಎಲ್ಲಿಂದಲೋ ಬಂದವರಿಗೆ ರಾಜಕೀಯ ಭವಿಷ್ಯ ನೀಡಿದ್ದು ಈ ಜಿಲ್ಲೆ ಎಂಬುದನ್ನು ಅವರು ಮರೆತಿರುವುದು ಯಾಕೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದಲ್ಲಿದ್ದಾಗ ಅವರು ಜಿಲ್ಲೆಗೆ ಅದರಲ್ಲೂ ನಮ್ಮ ತಾಲೂಕಿಗೆ ಏನೂ ಕೊಡುಗೆ ನೀಡದ್ದಾರೆ, ಇದೀಗ ಅಧಿಕಾರ ಇದಲ್ಲದೆ ಅಸಹಾಯಕರಾಗಿದ್ದಾರೆ. ಕೈಲಾಗದವರು ಕಣ್ಣೀರುಸುರಿಸಿ ಜನರ ಸಿಂಪತಿಗಿಟ್ಟಿಸಿ ಕೊಳ್ಳುವ ಕೆಲಸ ಮಾಡುತ್ತಿದ್ದು, ಇವರ ಸ್ವಾರ್ಥದ ಕಣ್ಣೀರಿಗೆ ಜಿಲ್ಲೆಯ ಜನತೆ ಮರುಳಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರಾಂತರವಲ್ಲ ಪಲಾಯನ: ಈ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಭವಿಷ್ಯವಿಲ್ಲ ಎಂಬುದನ್ನು ಮನಗಂಡು ಕುಮಾರಸ್ವಾಮಿ ಪಲಾಯನ ಮಾಡಿದ್ದಾರೆ ಎಂದು ಅಣಕವಾಡಿದ ಅವರು ಹೋಗುವಾಗ ಏನಾದರೂ ಮಾಡಿಕೊಳ್ಳಲಿ ಎಂದು ಅಶ್ವತ್ಥ್‌ಗೆ  ಎಲ್ಲಾ ಸಮಸ್ಯೆಯನ್ನು ಗಂಟುಹಾಕಿ ಹೋಗಿದ್ದಾರೆ. ಜೆಡಿಎಸ್ ನಾಯಕತ್ವ ವಹಿಸಿಕೊಂಡಿರುವ ಅಶ್ವತ್ಥ್‌ಗೆ ಒಳ್ಳೆಯದಾಗಲಿ ಎಂದು ಅವರು ವ್ಯಂಗವಾಡಿದರು.
ಕ್ಷೇತ್ರದ ಶಕ್ತಿ ಕಾಂಗ್ರೆಸ್‌ಗೆ ಗೊತ್ತಿದೆ: ಈ ಕ್ಷೇತ್ರದ ಮಹತ್ವ ಏನೆಂಬುದು ಕಾಂಗ್ರೆಸ್‌ಗೆ ಅರಿವಿದ್ದು ಅದಕ್ಕಾಗಿ ನನ್ನನ್ನು ಹೈಕಮ್ಯಾಂಡ್ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದೆ. ಪಕ್ಷದ ವರಿಷ್ಠರು ಈ ಚುನಾವಣೆಯಲ್ಲಿ ನನಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದು ಅವರ ನಂಬಿಕೆ ಹುಸಿಗೊಳಿಸುವುದಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಕ್ಷೇತ್ರದ ಅಭಿವೃದ್ಧಿಗೆ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ತಾಲೂಕಿನಲ್ಲಿ ನಾನು ಕೈಗೊಂಡಿರುವ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರ ಸಿಗಲಿದ್ದು ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
6ತಿಂಗಳಲ್ಲಿ ನೀರು ತುಂಬಿಸುತ್ತೇವೆ:  ಕಣ್ವ ಏತನೀರಾವರಿ ಯೋಜನೆ ಬಹುಪಾಲು ಪೂರ್ಣಗೊಂಡಿದೆ, ಪೈಪ್ ಲೈನ್ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ಯೋಜನೆಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ, ಈಗಾಗಲೇ ಯೋಜನೆಗೆ ಅಗತ್ಯವಾಗಿರುವ ಪವರ್ ಸ್ಟೇಷನ್ ಕಾಮಗಾರಿಗೂ ಆರಂಭವಾಗಿದೆ. ಮೇ ತಿಂಗಳಲ್ಲಿ ಪಂಪ್ ಹೌಸ್ ಕಾಮಗಾರಿ ಪೂರ್ಣವಾಗಲಿದೆ, ಪಂಪ್‌ಗಳನ್ನು ಮೇ ತಿಂಗಳ ಅಂತ್ಯದೊಳಗೆ ಅಳವಡಿಸಲಿದ್ದು ಮುಂದಿನ ಆಗಸ್ಟ್‌ನಲ್ಲಿ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಕಾಲ್ನಡಿಗೆ ಮೂಲಕ ಶಾಸಕ ಯೋಗೇಶ್ವರ್ ಕಾಮಗಾರಿ ಪರಿಶೀಲನೆ ನಡೆಸಿದರು. ಜತೆಯಲ್ಲಿ ಮುಖಂಡ ಹುಲುವಾಡಿ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.