ಹೋರಾಟ ಕೈಬಿಟ್ಟ ಹೆಗ್ಗಡೆ ಅಖಾಡಕ್ಕೆ
ಮತ್ತೀಕೆರೆ ಜಯರಾಮ್
ರಾಮನಗರ: ಹೋರಾಟ ಕೈಬಿಟ್ಟ ಸಿದ್ದರಾಮ ಹೆಗ್ಗಡೆ ಅಖಾಡಕ್ಕೆ ಇಳಿದರೆ, ಅಭ್ಯರ್ಥಿ ಎಂದು ಹಾರ ಹಾಕಿಸಿಕೊಂಡು ಸುದ್ದಿ ಮಾಡಿದ್ದ ಅಕ್ಮಲ್ ಷರೀಫ್ ನಾಮಪತ್ರ ಸಲ್ಲಿಸದೆ ನಾಪತ್ತೆ, ಹಿಂದೆ ಠೇವಣಿ ಜಪ್ತಿಯಾದರೂ ಬಿಡಲಿಲ್ಲ ಸ್ಪರ್ಧೆಯ ಖಯಾಲಿ.
-ಇದು, ನಾನಾ ವೈಶಿಷ್ಟ್ಯಗಳಿಂದ ಕೂಡಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಇಳಿದ ವಿಶಿಷ್ಟ ಸ್ಪರ್ಧಾಳುಗಳು ಮತ್ತು ಸ್ಪರ್ಧೆ ಘೋಷಿಸಿ ಬೆನ್ನು ತೋರಿದವರ ಕತೆ.
ಸಿದ್ದರಾಮ ಹೆಗ್ಗಡೆ: ರಾಮನಗರ ಜಿಲ್ಲೆಯ ಚನ್ನಪಟ್ಟಣದ ಶಿಂಷಾ ಮತ್ತು ಕಣ್ವ ನದಿ ಪಾತ್ರ, ಕಂದಾಯ ಜಮೀನಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಸತತ 50 ದಿನ ಸತ್ಯಾಗ್ರಹ ನಡೆಸಿ ಗಮನ ಸೆಳೆದ ಹೋರಾಟಗಾರ ಸಿದ್ದರಾಮ ಹೆಗ್ಗಡೆ. ಇವರ ಹೋರಾಟಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರೈತ ನಾಯಕ ಕಡಿದಾಳ್ ಶಾಮಣ್ಣ ಕೂಡ ಬೆಂಬಲಿಸಿದ್ದರು.
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಹೋರಾಟ ಕೈಬಿಡುವಂತೆ ಜಿಲ್ಲಾಡಳಿತ ಅದೆಷ್ಟೇ ಮನವೊಲಿಕೆ ಪ್ರಯತ್ನಿಸಿದರೂ ಜಗ್ಗದಿದ್ದ ಹೆಗ್ಗಡೆ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮಾತಿಗೆ ಮರುಳಾಗಿ ಹೋರಾಟ ಸ್ಥಗಿತಗೊಳಿಸಿದ್ದರು. ಕಡೆ ಕ್ಷಣದಲ್ಲಿ ಪಕ್ಷೇತರರಾಗಿ ಅಖಾಡಕ್ಕೆ ಇಳಿದು ಮತ್ತೆ ಸುದ್ದಿಯಾಗಿದ್ದಾರೆ.
ಚನ್ನಪಟ್ಟಣ ತಾ.ಪಂ.ಗೆ ಈ ಹಿಂದಿನ ಅವಧಿಯಲ್ಲಿ ಇಗ್ಗಲೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಅವರು ಕೆಲ ದಿನಗಳ ಮಟ್ಟಿಗೆ ಪ್ರಭಾರ ಅಧ್ಯಕ್ಷರಾಗಿದ್ದರು. ಬಳಿಕ ಪಕ್ಷಕ್ಕೆ ಸೆಡ್ಡು ಹೊಡೆದು, ಕಳೆದ ಉಪ ಚುನಾವಣೆಯಲ್ಲೂ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.
ನಾಮಪತ್ರವನ್ನೇ ಹಾಕಿಲ್ಲ: ರಾಮನಗರಕ್ಕೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದ್ದ ಕೆಜೆಪಿ ಸಂಸ್ಥಾಪಕ ಪ್ರಸನ್ನ ಪದ್ಮನಾಭ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕುವುದಾಗಿ ಹೇಳಿದ್ದರಲ್ಲದೆ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಯಾಗಿ ಕನಕಪುರ ಮೂಲದ ಉದ್ಯಮಿ ಅಕ್ಮಲ್ ಷರೀಫ್ ಹೆಸರು ಪ್ರಕಟಿಸಿದ್ದರು.
ಅದೇ ವೇಳೆ ಪ್ರಸನ್ನ ಪದ್ಮನಾಭ ಅವರಿಂದ ಮಾಲಾರ್ಪಣೆ ಮಾಡಿಸಿಕೊಂಡು, ಸುದ್ದಿ ಮಾಡಿದ್ದ ಅಕ್ಮಲ್ ಷರೀಫ್ ಇಲ್ಲಿ ತಾನು ಪ್ರಬಲ ಅಭ್ಯರ್ಥಿ ಎಂದಿದ್ದರು.
ಕಡೆಗೆ, ನಾಮಪತ್ರ ಸಲ್ಲಿಸುವುದಕ್ಕೆ ಬಾರದೆ ನಾಪತ್ತೆಯಾಗಿದ್ದಾರೆ.
ಠೇವಣಿ ಜಪ್ತಿಯಾದವರೇ: ಲೋಕಸಭೆ ಸಹಿತ ನಾನಾ ಚುನಾವಣೆಗಳಲ್ಲಿ ಠೇವಣಿ ಜಪ್ತಿಯಾದ ಹಳೆಯ ಮುಖಗಳು ಮತ್ತೆ ನಾಮ್ಕೇ ವಾಸ್ತೆ ಸ್ಪರ್ಧೆಗೆ ಇಳಿದಿದ್ದಾರೆ. ತಮ್ಮ ಪಾಲಿನ ಏಜೆಂಟ್ ಪಾಸು, ಸವಲತ್ತುಗಳನ್ನು ಧಾರೆ ಎರೆದುಕೊಡುವುದರಿಂದ ಆಗುವ ಲಾಭದ ರುಚಿ ನೋಡಿಯೂ ಕೆಲವರು ಹೀಗೆ ಮಾಡಿದ್ದಾರೆ.
ಕಳೆದ ಉಪ ಚುನಾವಣೆ ಜೆಡಿಯು ಅಭ್ಯರ್ಥಿಯಾಗಿ ಹೀನಾಯ ಸೋಲನುಭವಿಸಿದ ಮಾಜಿ ಶಾಸಕ ಬಿ.ಜೆ.ಲಿಂಗೇಗೌಡರ ಮೊಮ್ಮಗ, ವಕೀಲ ಜೆ.ಟಿ.ಪ್ರಕಾಶ್ ಈಗ ಪಕ್ಷೇತರ. ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲೂ ಅವರು ಮತದಾರರಿಂದ ತಿರಸ್ಕರಿಸಲ್ಪಟ್ಟಿದ್ದರು. ಮೋಹನ್, ಮಲ್ಲೇಶ್ ಕೂಡ ಅಖಾಡದಲ್ಲಿ ಹೊಸಬರಲ್ಲ.
ಬಿಎಸ್ಪಿ ಹುರಿಯಾಳು: ಟಿ.ಎಂ.ಮಂಚೇಗೌಡ ಅವರು 2009, 2013ರ ಉಪ ಚುನಾವಣೆ ಮತ್ತೆ ಈಗಲೂ ಪಕ್ಷೇತರ. ಇವರು ಇದುವರೆಗೆ ಗ್ರಾಮಪಂಚಾಯಿತಿಯಿಂದ ಹಿಡಿದು ಲೋಕಸಭೆ ಸೇರಿದಂತೆ ಒಟ್ಟು 8 ಬಾರಿ ಚುನಾವಣೆ ಎದುರಿಸಿದ್ದಾರೆ.
2009ರಲ್ಲಿ ತೋಪಾಗಿದ್ದ ತೋಪಯ್ಯ ಈಗ ಮತ್ತೆ ಬಿಎಸ್ಪಿ ಹುರಿಯಾಳು. ತಾವು ಅನುಮತಿ ಪಡೆದ 58 ವಾಹನಗಳನ್ನು ಕಾಂಗ್ರೆಸ್ ಅಭ್ಯರ್ಥಿ ಪರ ಜನರನ್ನು ಕರೆತರಲು ಕಳುಹಿಸಿ, ಕೇಸು ಜಡಿಸಿಕೊಂಡಿರುವ ಜೆ.ನಟರಾಜು ಕೂಡ ಪುನರಾವರ್ತಿತ ಅಭ್ಯರ್ಥಿಯೇ.
ಹೆಸರಲ್ಲೇ ಇವರು ಎಂಪಿ: ಮಂಡ್ಯ ಮೂಲದವರಾದ ಎಂ.ಪಿ.ಮುನಾವರ್ ಷರೀಫ್ ಅಲ್ಲೂ ನಗರಸಭೆ, ವಿಧಾನಸಭೆ, ಲೋಕಸಭೆ ಸಹಿತ ಸಾಕಷ್ಟು ಚುನಾವಣೆ ಎದುರಿಸಿದ್ದಾರೆ.
ಕಳೆದ ಬಾರಿ ವಿಧಾನಸಭೆಗೆ ರಾಮನಗರದಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದರು.
ಈಗ ಹಿಂದೂಸ್ಥಾನ ಜನತಾ ಪಾರ್ಟಿಯಿಂದ ಅಭ್ಯರ್ಥಿಯಾಗಿ ಇಲ್ಲಿಗೇ ವಕ್ಕರಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

