ಬೆಂಗಳೂರು ಗ್ರಾಮಾಂತರ

ಬೊಂಬೆನಗರಿಯಲ್ಲೀಗ ಚುನಾವಣಾ ಅಬ್ಬರ

Published On :

ಸು.ನಾ. ನಂದಕುಮಾರ್
ಚನ್ನಪಟ್ಟಣ: ಬರದಿಂದ ಬಸವಳಿದಿರುವ ಬೊಂಬೆನಗರಿಯಲ್ಲೀಗ ಚುನಾವಣಾ ಅಬ್ಬರ, ಲೋಕಸಭಾ ಮೆಗಾ ಪೈಟ್.  ಉಳಿದ ವಿಧಾನ ಸಭಾ ಕ್ಷೇತ್ರಗಳಿಗಿಂತ ಹೆಚ್ಚು ಕಾವು ಪಡೆದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ಗಳ ಪಾಲಿಗೆ ಈ ನೆಲ ಪ್ರತಿಷ್ಠೆಯ ಅಖಾಡವಾಗಿ ಪರಿಣಮಿಸಿದೆ. ರಾಜಕೀಯವೇ ಸರ್ವಸ್ವ ಎಂದು ಕೊಂಡಿರುವ  ಇಲ್ಲಿನ ರಾಜಕಾರಣಿಗಳಿಂದ ಎಲ್ಲಾ ಚುನಾವಣೆಯೂ ಕಾವು ಪಡೆದುಕೊಳ್ಳುವುದು ಸಾಮಾನ್ಯ. ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಅಣಿಯಾಗಿದ್ದು  ಈ ಕ್ಷೇತ್ರದಲ್ಲಿ ತಮ್ಮ ಪಕ್ಷಕ್ಕೆ ಹೆಚ್ಚಿನ ಮತ ಕೊಡಿಸಬೇಕೆಂಬ ಛಲ ಎರಡೂ ಪಕ್ಷದ ರಾಜಕೀಯ ಮುಖಂಡರಲ್ಲಿ ತುಂಬಿದೆ.




ಒನ್ಮ್ಯಾನ್ ಆರ್ಮಿ- ಸಾಮೂಹಿಕ ನಾಯಕತ್ವ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕತ್ವವನ್ನು ಶಾಸಕ ಯೋಗೇಶ್ವರ್ಗೆ ವಹಿಸಲಾಗಿದೆ. ಇದೀಗ ತಾನೆ ಕಾಂಗ್ರೆಸ್ಗೆ ಜಿಗಿದಿರುವ ಯೋಗೇಶ್ವರ್ ಪಾಲಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಅತಿ ಹೆಚ್ಚು ಮತ ಪಡೆಯಲು ಸೈನಿಕನ  ಒನ್ಮ್ಯಾನ್ ಆರ್ಮಿ ಸನ್ನದ್ಧ ಗೊಳ್ಳಬೇಕಿದೆ. ಆದರೆ ಜೆಡಿಎಸ್ ಮೇಲ್ನೋಟಕ್ಕೆ  ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ಗೆ ನಾಯಕತ್ವ ವಹಿಸಿದೆಯಾದರೂ,  ಆಂತರ್ಯದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್. ಲಿಂಗೇಶ್ಕುಮಾರ್, ಪಕ್ಷದ ಅಧ್ಯಕ್ಷರು ಸೇರಿದಂತೆ ಸಾಮೂಹಿಕ ನಾಯಕತ್ವದ ಸೂತ್ರವನ್ನು ಮುಂದೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಕುಮಾರಸ್ವಾಮಿ ಕ್ಷೇತ್ರಾಂತರವನ್ನು ದೊಡ್ಡದು ಮಾಡುವ  ಕಾಂಗ್ರೆಸ್ಗೆ ತಕ್ಕಪಾಠ ಕಲಿಸಬೇಕಾದರೆ ನಿಮ್ಮ ಕ್ಷೇತ್ರದಲ್ಲಿ ಲೀಡ್ ಕೊಡಿಸಲೇಬೇಕೆಂದು ಕುಮಾರಸ್ವಾಮಿ ಹೊರಡಿಸಿರುವ ಹುಕುಂ ಜೆಡಿಎಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.



ಅಭಿವೃದ್ಧಿಗೆ ಶಾಪ...
ಕಣ್ವ ಏತನೀರಾವರಿ ಕಾಮಗಾರಿ ಚಾಲನೆಯಲ್ಲಿದೆಯಾದರೂ ಪಟ್ಟಣದ ಪ್ರದೇಶದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದು, ನಗರದ ಯಾವ ರಸ್ತೆಯೂ ಸರಿ ಇಲ್ಲದೆ ಜನತೆ ಪರಿಸತಪಿಸುವಂತಾಗಿದೆ. ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಬೇಕಿದೆಯಾದರೂ ಕಳೆದ 6 ವರ್ಷದಿಂದ  ಮಂದಗತಿಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿ, ಪಟ್ಟಣದ ಅಭಿವೃದ್ಧಿಗೆ ಶಾಪವಾಗಿ ಪರಿಣಮಿಸಿದೆ.


ಮೈಕೊಡವಿ ಎದ್ದ ಪಕ್ಷಗಳು
ಕಳೆದ ಎರಡು ಚುನಾವಣೆಯಲ್ಲಿ ಸತತ ಸೋಲಿನಿಂದ ಕಂಗಾಲಾಗಿರುವ ಜೆಡಿಎಸ್ ಮೈಕೊಡವಿ ಎದ್ದಿದೆ. ಇತ್ತ ಯೋಗೇಶ್ವರ್ ಸೇರ್ಪಡೆಯಿಂದಾಗಿ ಕಾಂಗ್ರೆಸ್ಸಿಗರಲ್ಲೂ ಸಾಕಷ್ಟು ಹುಮ್ಮಸ್ಸು ತುಂಬಿದೆ. ಇತ್ತ ಬಿಜೆಪಿ ಮೋದಿ ನಾಮ ಬಲದ ಮೇಲೆ ಪಕ್ಷವನ್ನು ಬಲಪಡಿಸಿಕೊಳ್ಳಲು ಶ್ರಮಿಸುತ್ತಿದ್ದು ಎಲ್ಲಾ ಪಕ್ಷಗಳು ಮೈಕೊಡವಿ ಅಖಾಡಕ್ಕಿಳಿಯಲು ಸನ್ನದ್ಧಗೊಂಡಿವೆ.  ರಾಜಕೀಯವನ್ನೇ ಉಸಿರಾಡಿ ಅದನ್ನೇ ಹೊದ್ದು ಮಲಗುವ ಬೊಂಬೆನಗರಿಯಲ್ಲೀಗ ಸಹಜವಾಗೇ ಲೋಕಸಭಾ ಚುನಾವಣಾ ಕಾವು ಬಿಸಿಲ ಬೇಗೆಯನ್ನೂ ಮೀರಿಸುತ್ತಿದ್ದು, ಕೇವಲ ರಾಜಕಾರಣಿಗಳನ್ನು ಮಾತ್ರವಲ್ಲದೆ  ಶ್ರೀಸಾಮನ್ಯನಿಗೂ ಎಲೆಕ್ಷನ್ ಫೀವರ್ ಹಬ್ಬಿದೆ. ಕುಮಾರಸ್ವಾಮಿ ಸಾರಿರುವ ಧರ್ಮಯುದ್ಧದಲ್ಲಿ  ಇಲ್ಲಿನ ಮತದಾರರು ಯಾರ ಪಕ್ಷ ವಹಿಸಲಿದ್ದಾರೆ ಎಂದು ಕಾಯ್ದು ನೋಡಬೇಕಿದೆ.




ಅಭಿವೃದ್ಧಿಯ ಬಡಬಡಿಕೆ
ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಭಿವೃದ್ಧಿಯ ತುಪ್ಪವನ್ನು ಮೂಗಿಗೆ ಸವರುವ ಕೆಲಸ ಮಾಡುತ್ತಲೇ ಇವೆ. ಕಣ್ವ ಏತನೀರಾವರಿ ಯೋಜನೆಯನ್ನು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ಸಚಿವರಾಗಿದ್ದಾಗ ಯೋಗೇಶ್ವರ್ ಹೇಳಿದ್ದರಾದರೂ ಕೊನೆಕ್ಷಣದಲ್ಲಿ ಕಾಮಗಾರಿಗೆ ಚಾಲನೆ ದೊರಕಿದ್ದು ಮಾತ್ರ ಕೆಲತಿಂಗಳ ಹಿಂದೆ. ನೀರಾವರಿ ಯೋಜನೆಯ ಹಕ್ಕುಸ್ವಾಮ್ಯಕ್ಕಾಗಿ ಮೂರೂ ಪಕ್ಷಗಳಲ್ಲೂ ಕಿತ್ತಾಟ ನಡೆಯುತ್ತಿದೆ. ಯೋಗೇಶ್ವರ್ ಈ ತಾಲೂಕಿನ ಸಮಗ್ರ ನೀರಾವರಿ ಯೋಜನೆ ನನ್ನದು ಎನ್ನುತ್ತಿದ್ದರೆ, ಜೆಡಿಎಸ್ ಗರಕಹಳ್ಳಿ ಏತನೀರಾವರಿ ಯೋಜನೆ ದೇವೇಗೌಡರು ಮತ್ತು ವರದೇಗೌಡರ ಕೊಡುಗೆ ಎಂದು, ಇತ್ತ ಬಿಜೆಪಿ ಮಂದಿ ಕಣ್ವ  ಏತನೀರಾವರಿ ಯೋಜನೆ, ಗ್ರಾಮೀಣ ರಸ್ತೆಗಳನ್ನು ಸಿಮೆಂಟ್ ರಸ್ತೆಗಳಾಗಿ ಮಾಡಿದ್ದು ನಮ್ಮ ಪಕ್ಷದ ಸದಾನಂದ ಗೌಡರ ಸರ್ಕಾರ ಎಂದು ಹೇಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.