ಭಾರತದ ಭವಿಷ್ಯ ಯುವ ಶಕ್ತಿಯ ಮೇಲಿದೆ
ಚನ್ನಪಟ್ಟಣ: ಅಭಿವೃದ್ಧಿ ಪಥದಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಅಚ್ಚರಿ ಮೂಡಿಸುತ್ತಿರುವ ಭಾರತದ ಭವಿಷ್ಯವನ್ನು ಮತ್ತಷ್ಟು ಉಜ್ವಲ ಗೊಳಿಸುವುದು ಯುವ ಶಕ್ತಿಯ ಗುರುತರ ಜವಾಬ್ದಾರಿಯಾಗಿದ್ದು ಪ್ರತಿಯೊಬ್ಬ ಯುವಕನೂ ದೇಶದ ಆಸ್ತಿಯಾಗಬೇಕೆಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಿವರಾಜೇಗೌಡ ತಿಳಿಸಿದರು.
ತಾಲೂಕಿನ ಎಚ್. ಬ್ಯಾಡರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯುವ ಶಕ್ತಿ ಸರಿಯಾದ ಮಾರ್ಗದಲ್ಲಿ ನಡೆಯಬೇಕಿದೆ. ದುಶ್ಚಟಗಳಿಗೆ ಬಲಿಯಾಗಿ ತಾವು ಹಾಳಾಗುವ ಜತೆಗೆ ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯದೆ ಸದ್ವಿಚಾರಗಳನ್ನು ಗ್ರಹಿಸುವ ಮೂಲಕ ಉತ್ತಮ ಪ್ರಜೆಗಳಾಗಿ ಎಂದು ಕರೆ ನೀಡಿದರು.
ನಮ್ಮ ದೇಶದ ಸಮಕಾಲೀನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ವಿಭಿನ್ನವಾಗಿದ್ದು, ಸಾಕಷ್ಟು ಸವಾಲುಗಳ ನಡುವೆ ದೇಶವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವಕರು ಸಮಕಾಲೀನ ಸಂಗತಿಗಳನ್ನು ತಿಳಿದು ದಿಕ್ಕುತಪ್ಪಿರುವ ದೇಶದ ರಾಜತಂತ್ರ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು.
ನಮ್ಮ ದೇಶದಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದರೂ ಅಭಿವೃದ್ಧಿಯ ಹಾದಿಯಲ್ಲಿ ನಾವಿನ್ನೂ ಕ್ರಮಿಸಬೇಕಾದ ಹಾದಿ ಸಾಕಷ್ಟಿದೆ. ನಾವು ಎಡವಿದ್ದೆಲ್ಲಿ ಎಂಬ ಬಗ್ಗೆ ಅವಲೋಕನ ನಡೆಯಬೇಕಿದ್ದು, ಸಮಸ್ಯೆಯ ಮೂಲವನ್ನು ಕಂಡು ಹಿಡಿದು ಆ ಸಮಸ್ಯೆಗೆ ತಲಸ್ಪರ್ಶಿ ಪರಿಹಾರ ಕೊಡುವ ಕಾರ್ಯಕ್ಕೆ ಯುವ ಸಮುದಾಯ, ಪ್ರಜ್ಞಾವಂತ ಜನತೆ ಕೈ ಜೋಡಿಸಿದಾಗ ಮಾತ್ರ ಮಹನೀಯರು ಕಂಡ ಭವ್ಯ ಭಾರತದ ಕನಸು ನನಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಂಗಣ್ಣಯ್ಯ 10 ದಿನಗಳ ಎನ್ಎಸ್ಎಸ್ ಶಿಬಿರ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಮಸ್ಥರ ಪ್ರೀತಿ ವಿಶ್ವಾಸ ಗೆದ್ದಿರುವ ವಿದ್ಯಾರ್ಥಿಗಳು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಾಗ ಎನ್ಎಸ್ಎಸ್ ಶಿಬಿರದ ನಿಜವಾದ ಉದ್ದೇಶ ಈಡೇರಿದಂತಾಗುತ್ತದೆ ಎಂದರು.
ಎನ್ಎಸ್ಎಸ್ ಶಿಬಿರಾಧಿಕಾರಿ ಶ್ರೀಕಾಂತ್ ವರದಿ ಮಂಡಿಸಿದರು. ಮತ್ತೊಬ್ಬ ಶಿಬಿರಾಧಿಕಾರಿ ಮಹೇಶ್ ಶಿಬಿರದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು. ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

