ಬೆಂಗಳೂರು ಗ್ರಾಮಾಂತರ

ಪಾನಮತ್ತ ಲಾರಿ ಚಾಲಕನಿಂದ ಸರಣಿ ಅಪಘಾತ

Published On :

ಆನೇಕಲ್ಲು: ತಮಿಳುನಾಡಿನ ಹೊಸೂರಿನಿಂದ ಆನೇಕಲ್ ಕಡೆಗೆ ಬರುತ್ತಿದ್ದ ಲಾರಿ ಚಾಲಕ ಪಾನ ಮತ್ತನಾಗಿದ್ದ ಕಾರಣ ಇಲ್ಲಿನ ಎಪಿಎಸ್ ಶಾಲೆ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದದ್ದರಿಂದ ಇಬ್ಬರು ಸವಾರರು ತೀವ್ರ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಹೊಂಪಲಘಟ್ಟ ಗ್ರಾಮದ ವಾಸಿಗಳಾದ ರೂಪ (26) ಮತ್ತು ಶಶಿಕುಮಾರ್ (15) ಎಂದು ಗುರುತಿಸಲಾಗಿದೆ.
 ಗುರುವಾರ ನಡೆದ ಈ ಘಟನೆಯಲ್ಲಿ ನಂತರ ಅದೇ ವೇಗದಲ್ಲಿ ಮುಂದೆ ಹೋದ ಲಾರಿ ಇನ್ನೊಂದು  ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸಿಂಡಿಕೇಟ್ ಬ್ಯಾಂಕ್ ಬಳಿ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ವಾಹನ ಸವಾರ ದಂಪತಿ ರಸ್ತೆಯ ಮತ್ತೊಂದು ಬದಿಗೆ ಹಾರಿ ಬಿದ್ದರು. ಗಾಯಗೊಂಡವರು ತಾಲೂಕಿನ ಚೆನ್ನೇನಗ್ರಹಾರದ ಮಲ್ಲಿಕಾ (45) ಹಾಗೂ ಗೋವಿಂದ ರಾಜು (50).
ನಂತರ ಎದುರಿಗೆ ಬರುತ್ತಿದ್ದ ಬಿಎಂಟಿಸಿ ವಾಹನಕ್ಕೆ ಲಾರಿ ಡಿಕ್ಕಿ ಹೊಡೆಯಿತು. ಇದರಿಂದ ಬಿಎಂಟಿಸಿ ಬಸ್ನ ಹಿಂಬದಿಗೆ ಇದ್ದ ಸರ್ಕಾರಿ ಜೀಪ್, ಮತ್ತೊಂದು ಬಸ್ ನಡುವೆ ಡಿಕ್ಕಿ ಸಂಭವಿಸಿತು. ಬಸ್ ಅನ್ನು ತಪ್ಪಿಸಲು ಹೋಗಿ ರಸ್ತೆ ಬದಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆಯಿತು. ಬಸ್ ಸ್ಟ್ಯಾಂಡ್ ಬಳಿ ನಿಂತಿದ್ದ ಜನ ದಿಕ್ಕಾಪಾಲಗಿ ಓಡಿ ಜೀವ ಉಳಿಸಿಕೊಂಡರು.
ವಾಹನವನ್ನು ನಿಲ್ಲಿಸುವಂತೆ ಮಾಡಿದ ಮನವಿಗೆ ಓಗೊಡದ ಚಾಲಕ ಲಾರಿಯ ವೇಗವನ್ನು ಮತ್ತಷ್ಟು ಹೆಚ್ಚಿಸಿ ತಾಲೂಕು ಕಚೇರಿ ರಸ್ತೆ ಕಡೆ ನುಗ್ಗಿದಾಗ ವಣಕನಹಳ್ಳಿ ಗ್ರಾಪಂ ಅಧ್ಯಕ್ಷ ರಘು, ಪತ್ರಕರ್ತ ನವೀನ್ ಮತ್ತು ರಾಜೇಶ್ ಅವರು ಜೀವದ ಹಂಗು ತೊರೆದು ದ್ವಿಚಕ್ರ ವಾಹನದಲ್ಲಿ ಬಂದು ಜನರಿಗೆ ರಸ್ತೆ ಬಿಟ್ಟು ಓಡಿ ಜೀವ ಉಳಿಸಿಕೊಳ್ಳವಂತೆ ಕೂಗಿ ಹೇಳಿದರು. ತಾಲೂಕು ಕಚೇರಿ ಮುಂದಿನ ರಸ್ತೆ ಉಬ್ಬು ಸಹ ಪಾನಮತ್ತ ಚಾಲಕನಿಗೆ ಕಾಣಲಿಲ್ಲ. ತಿಲಕ್ಚೌಕದ ಬಳಿ ಬಂದಾಗ ಹಲವು ಬೈಕ್ ಸವಾರರು ಅಡ್ಡಗಟ್ಟಿ ಲಾರಿಯನ್ನು ತಡೆದರು.
ಧರ್ಮದೇಟು: ಪಾನಮತ್ತ ಚಾಲಕ ಲಾರಿಯಿಂದ ಕೆಳಗೆ ಬರಲು ಒಪ್ಪದಿದ್ದಾಗ ಜನರು ಆತನನ್ನು ಕೆಳಗೆಳೆದು ಧರ್ಮದೇಟು ನೀಡಿದರು. ಲಾರಿಯ ಮುಂಭಾಗದ ಗಾಜಿಗೆ ಕಲ್ಲು ಎಸೆದು ಆಕ್ರೋಶ ವ್ಯಕ್ತ ಪಡಿಸಿದರು. ಯಾರು ಏನು ಹೇಳಿದರೂ ಕೇಳಲಾಗದ ಸ್ಥಿತಿಯಲ್ಲಿದ್ದ ಚಾಲಕ ನನ್ನದೇನು ತಪ್ಪಿಲ್ಲ ಬಿಟ್ಟು ಬಿಡಿ ಎಂದು ಹೇಳುತ್ತಿದ್ದ. ಕೂಡಲೇ ಧಾವಿಸಿ ಬಂದ ಪೊಲೀಸರು ಪಾನ ಮತ್ತ ಚಾಲಕ ರಾಜು ಹಾಗೂ ಲಾರಿಯನ್ನು ವಶಕ್ಕೆ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.