ಅನ್ಯಭಾಷಿಕರಿಂದ ರಾಜ್ಯದ ನೆಲ ಖರೀದಿ
ಚನ್ನಪಟ್ಟಣ: ಯುಗಾದಿ ಅಂಗವಾಗಿ ತಾಲೂಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡ ಭಾಷೆಗೆ ಒದಗಿರುವ ಅಪಾಯಗಳ ಕುರಿತಾದ ಚರ್ಚಾಗೋಷ್ಠಿ, ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಮತ್ತು ಹಿರಿಯ ರೈತ ಹೋರಾಟಗಾರ ಸಿ.ಪುಟ್ಟಸ್ವಾಮಿ ನಡುವಿನ ವೈಚಾರಿಕ ಸಂಘರ್ಷಕ್ಕೆ ಎಡೆಮಾಡಿ ಕೊಡುವ ಜತೆಗೆ ಈ ನೆಲದ ಚಳವಳಿಗಳ ಬಗ್ಗೆ ನಗ್ನ ಸತ್ಯಗಳನ್ನು ಅನಾವರಣ ಗೊಳಿಸಿತು.
ಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ, ಅನ್ಯಭಾಷಿಕರು ಇಲ್ಲಿನ ರೈತರಿಂದ ನೆಲವನ್ನು ಖರೀದಿಸುವ ಮೂಲಕ ನಮ್ಮ ನಾಡಿನ ರೈತರನ್ನು ಬೀದಿಗೆ ತರುತ್ತಿದ್ದಾರೆ.ಇಂತಹ ಗಂಭಿರ ಸಮಸ್ಯೆಗಳ ಸಮಯದಲ್ಲಿ ದನಿ ಎತ್ತಬೇಕಾದ ಸಂಘಟನೆಗಳು ಎಲ್ಲಿ ಹೋದವು. ರೈತಸಂಘ ಹಾಗೂ ಕನ್ನಡ ಪರ ಸಂಘಟನೆಗಳು ಏನು ಮಾಡುತ್ತಿವೆ. ಇವರು ತಮ್ಮ ಹೆಗಲ ಮೇಲಿನ ಶಾಲು ಕಳಚಲಿ ಎಂದು ಚಳವಳಿಗಾರರನ್ನು ಕೆಣಕಿದರು.
ತಾಳಿ ಮಾರಿದ ಹೋರಾಟಗಾರರಿದ್ದಾರೆ: ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ರೈತ ಹೋರಾಟ ಗಾರ ಸಿ.ಪುಟ್ಟಸ್ವಾಮಿ, ರೈತ ಸಂಘ ಈ ನಾಡಿನ ರೈತರ ಸಮಸ್ಯೆಗಳಿಗಾಗಿ 30 ವರ್ಷಗಳಿಂದ ಗಂಭೀರವಾದ ಹೋರಾಟ ಮಾಡುತ್ತಲೇ ಬಂದಿದೆ. ಆದರೆ ಇತ್ತೀಚಿನ ಕೆಲ ಕನ್ನಡ ಪರ ಸಂಘಟನೆಗಳು ಸ್ವಾರ್ಥಕ್ಕಾಗಿ ಚಳವಳಿಗೆ ಪ್ರವೇಶಿಸಿ ಹೋರಾಟಗಳ ಮೌಲ್ಯವನ್ನೇ ಹರಾಜಿಗಿಟ್ಟಿವೆ. ತಾಲೂಕಿನ ಕನ್ನಡ ಪರ ಸಂಘಟನೆಯ ಮುಖಂಡರೊಬ್ಬರು ಸಾಮೂಹಿಕ ವಿವಾಹ ಮಾಡಿಸುವುದಾಗಿ ದಾನಿಗಳಿಂದ ಮಾಂಗಲ್ಯ ಸಂಗ್ರಹಿಸಿ ಅದನ್ನೇ ಮಾರಾಟ ಮಾಡಿದ್ದಾರೆ ಎಂದರು.
ಹೋರಾಟದ ಹೆಸರಿನಲ್ಲಿ ಎಸಿ ಕಾರಿನಲ್ಲಿ ತಿರುಗಾಡುತ್ತಾ, ತಮ್ಮ ಸಂಘಟನೆಯ ಬ್ಯಾನರ್ಗಳಲ್ಲಿ ದಾರ್ಶನಿಕರ ಪೋಟೋ ಹಾಕಿಕೊಂಡು ಸರ್ಕಾರಿ ಅಧಿಕಾರಿಗಳು ಮತ್ತು ಅಮಾಯಕ ಜನರನ್ನು ಎದುರಿಸಿ ಕಾಸು ವಸೂಲಿ ಮಾಡುವ ಐಷಾರಾಮಿ ಹೋರಾಟಗಾರರಿದ್ದಾರೆ. ಗಾಂಧಿ, ಲೋಹಿಯಾ ಮೊದಲಾದ ಮಹನೀಯರ ವಿಚಾರಗಳೇನು ಗೊತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಕರ ಕ್ಷೇತ್ರದ ಚುನಾವಣೆಯ ಸಮಯಲ್ಲಿ ಶಿಕ್ಷಕರು ಮದ್ಯದ ಬಾಟಲಿ ಹಿಡಿದು ಹೊಡೆದಾಡುತ್ತಾರೆ. ವ್ಯವಸ್ಥೆಯ ಹುಳುಕುಗಳನ್ನು ಪ್ರಶ್ನಿಸುವ ವಿದ್ಯಾರ್ಥಿಯನ್ನು ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಉಪನ್ಯಾಸಕರು ಮತ್ತು ಶಿಕ್ಷಕರು ಸೋತಿದ್ದಾರೆ ಎಂದರು.
ಕನ್ನಡಪರ ಹೋರಾಟಗಾರ ಸಿಂ.ಲಿಂ.ನಾಗರಾಜು ಮಾತನಾಡಿ, ನಮ್ಮನ್ನಾಳುವ ಎಲ್ಲ ಸರ್ಕಾರಗಳು ಮತಕ್ಕಾಗಿ ಕನ್ನಡ ಬಲಿಕೊಡುತ್ತಿದ್ದಾರೆ. ಹಣ ಮಾಡು ದಂಧೆಗೆ ಹೋರಾಟನ್ನು ಬಳಸಿಕೊಳ್ಳುವ ಬೋಗಸ್ ಕನ್ನಡ ಚಳವಳಿಗಾರರಿಂದ ಕನ್ನಡಕ್ಕೆ ಇತ್ತೀಚಿನ ದಿನಗಳಲ್ಲಿ ಅಪಾಯ ಎದುರಾಗಿದೆ ಎಂದರು.
ಜನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸು.ತ.ರಾಮೇಗೌಡ ಗೋಷ್ಠಿಯನ್ನು ಉದ್ಘಾಟಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಶಿವಮಾದು, ಡಿ.ಆರ್. ದೇವರಾಜು, ಸಿ.ಸಿ.ರಾಮಲಿಂಗೇಶ್ವರ, ದೇ.ನಾರಾಯಣಸ್ವಾಮಿ, ಸಿ. ಚನ್ನವೀರೇಗೌಡ, ವಸಂತಕುಮಾರ್, ಸಿ.ಜಿ. ಸುರೇಶ್ಕುಮಾರ್, ಎಂ.ಟಿ.ನಾಗರಾಜು, ಕೂರಣಗೆರೆ ಕೃಷ್ಣಪ್ಪ, ಯು.ಸಿ. ಪ್ರವೀಣ್ಕುಮಾರ್, ಎಚ್.ನಾಗರಾಜು, ಓಂಕಾರಪ್ರಿಯ, ವಿನಯಕುಮಾರ್, ಪ್ರವೀಣ್, ಕಸಾಪ ಕಾರ್ಯದರ್ಶಿ ಬ್ರಹ್ಮಣೀಪುರ ರಾಮಕೃಷ್ಣಯ್ಯ ಮುಂತಾದವರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

