ಬೆಂಗಳೂರು ಗ್ರಾಮಾಂತರ

ಮೃತ್ಯುಕೂಪ ಈ ಮುರಿದ ಚಪ್ಪಡಿ

Published On :

ಇಲ್ಲಿನ ಕೆಎಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಂಪೌಂಡ್ ಪಕ್ಕದಲ್ಲೇ ಐಜೂರು ಬಡಾವಣೆಗೆ ಹೋಗುವ ರಸ್ತೆಯಿದೆ. ಆ ರಸ್ತೆಯು ಬೆಂಗಳೂರು-ಮೈಸೂರು ಹೆದ್ದಾರಿಗೆ ಕೂಡುವಲ್ಲಿ ಮೋರಿಗೆ ಅಡ್ಡಲಾಗಿ ಹಾಕಿರುವ ಚಪ್ಪಡಿ ಮುರಿದು, ಅದು ಮೃತ್ಯಕೂಪವಾಗಿ ಪರಿಣಮಿಸಿದೆ.  ಈ ಮೋರಿ ಅಷ್ಟಿಷ್ಟು ಚೆನ್ನಾಗಿಯೇ ಇತ್ತು. ಈಚೆಗೆ ಅದನ್ನು ದುರಸ್ತಿಪಡಿಸುವ ಕಾಮಗಾರಿ ನಡೆದಿದ್ದು, ಆ ವೇಳೆ ಚಪ್ಪಡಿ ಮುರಿದು ಹೋಗಿದೆ. ಇಂತಹ ಪ್ರಮುಖ ರಸ್ತೆಯಲ್ಲಿ ನಿತ್ಯ ಸಹಸ್ರಾರು ವಾಹನಗಳು, ಜನರು ತಿರುಗಾಡುತ್ತಿದ್ದಾರೆ. ಮುರಿದ ಚಪ್ಪಡಿಯಿಂದ ದ್ವಿಚಕ್ರ ವಾಹನಗಳವರು ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಸಾಕಷ್ಟು ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಇಲ್ಲೇ ಅಡ್ಡಾಡುತ್ತಾರಾದರೂ ಮುರಿದ ಚಪ್ಪಡಿ ಮತ್ತು ಅದರಿಂದಾಗುತ್ತಿರುವ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಸಂಬಂಧಿಸಿದವರು ಶೀಘ್ರವೇ ದುರಸ್ತಿಗೆ ಕ್ರಮ ಕೈಗೊಂಡು, ಅನಾಹುತ ತಪ್ಪಿಸಬೇಕಿದೆ.
ಟಿ ದೇವರಾಜು, ರಾಮನಗರ.


ಸರಿಪಡಿಸದ ಮೋರಿ: ಸಂಚಾರಕ್ಕೆ ಅನಾನುಕೂಲ
ಚನ್ನಪಟ್ಟಣ ತಾಲೂಕಿನ ಕೆಂಗಲ್ ಕಣ್ವ ರಸ್ತೆಯಲ್ಲಿ ಒಂದು ವರ್ಷಗಳ ಹಿಂದೆ ಮುರಿದಿರುವ ಮೋರಿಯನ್ನು ಲೋಕೋಪಯೋಗಿ ಇಲಾಖೆ ಇನ್ನೂ ಸರಿಪಡಿಸದಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲವಾಗಿದೆ. ಕಳೆದ ಒಂದು ವರ್ಷದ ಹಿಂದೆ  ಕಣ್ವ ಕೆಂಗಲ್ ಮಾರ್ಗದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಯಿತು. ರಸ್ತೆ ನಿರ್ಮಾಣ ಮಾಡಿದ ಮೂರು ತಿಂಗಳಲ್ಲಿ ಕೆಂಗಲ್  ಗ್ರಾಮದಿಂದ ಸ್ವಲ್ಪ ಮುಂದೆ ನಿರ್ಮಿಸಲಾಗಿದ್ದ ಮೋರಿ ಮುರಿದು ಹೋಗಿದೆ. ಅಂದಿನಿಂದ ಈ ಭಾಗದ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಗೆ ದೂರು ಸಲ್ಲಿಸುತ್ತಿದ್ದಾರಾದರೂ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.
ತಾಲೂಕಿನಲ್ಲಿ ಪ್ರಸಿದ್ಧ ಕಣ್ವ ಜಲಾಶಯ ಸೇರಿದಂತೆ ಸಾಕಷ್ಟು ಗ್ರಾಮಗಳಿಗೆ ಈ ರಸ್ತೆ ಸಂಪರ್ಕಕಲ್ಪಿಸಲಿದ್ದು, ಮೋರಿ ಬಹುಪಾಲು ಮುರಿದಿದ್ದು ಅಲ್ಪ ಭಾಗದಲ್ಲಿ ವಾಹನಗಳು ಸಂಚರಿಸುತ್ತಿವೆ. ಬಾರಿ ಪ್ರಮಾಣದ ವಾಹನ ಈ ಮಾರ್ಗದಲ್ಲಿ ಬಂದರೆ ಅಳಿದುಳಿದ ಮೋರಿಯೂ ಮುರಿದು ಬೀಳಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಮೋರಿ ಶಿಥಿಲಗೊಂಡಿದೆ ಎಚ್ಚರಿಕೆಯಿಂದ ಚಲಿಸಿ ಎಂದು ಫಲಕ ಹಾಕಿ ಸುಮ್ಮನಾಗಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗುವ ಮೂಲಕ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಬೇಕಿದೆ.
ಟಿ ದಿಲೀಪ್, ಪೌಳಿದೊಡಿ



ರಸ್ತೆ ಅಗೆದು ಪ್ರಯಾಣಕ್ಕೆ ತೀವ್ರ ತೊಂದರೆ
ಮಾಗಡಿ ಪಟ್ಟಣದ ಪುರಸಭೆ ಎದುರಿನ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು, ಸಾರ್ವಜನಿಕರು ಸಂಚರಿಸುತ್ತಾರೆ. ಜತೆಗೆ ಸರ್ಕಾರಿ ಅಧಿಕಾರಿಗಳು ಇದೇ ರಸ್ತೆಯಲ್ಲಿಯೇ ಸಂಚರಿಸುವುದು. ಆದರೆ ನೀರಿನ ಪೈಪ್  ಅಳವಡಿಸುವ ನಿಟ್ಟಿನಲ್ಲಿ ರಸ್ತೆ ಅಗೆದು ಬಿಟ್ಟು ವಾರಗಳೇ ಕಳೆದಿದೆ. ಇದರಿಂದಾಗಿ ನಾಗರಿಕರಿಗೆ ತುಂಬ ಸಮಸ್ಯೆ ಉಂಟಾಗಿದೆ. ಸಾರ್ವಜನಿಕರು ಪುರಸಭೆ ಕಚೇರಿಯಲ್ಲಿನ ಕೆಲಸಕ್ಕೆ ಬರಬೇಕಾದರೆ, ಅಧಿಕಾರಿಗಳು ಸಂಚರಿಸಬೇಕಾದರೆ, ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಗೆಯಬೇಕಾದರೆ ಒಂದು ಬದಿ ರಸ್ತೆ ಬಿಟ್ಟು, ಕಾಮಗಾರಿ ಪೂರ್ಣವಾದ ಮೇಲೆ  ಮತ್ತೊಂದು ಬದಿ ರಸ್ತೆ ಅಗೆದು ಕಾಮಗಾರಿ ನಡೆಸಬೇಕಾದುದು ಸಾಮಾನ್ಯ ಕರ್ತವ್ಯವಾಗಬೇಕು. ಸಾರ್ವಜನಿಕರಿಗೆ ವಾಹನ ಚಾಲಕರಿಗೆ ಕಿರಿಕಿರಿ ಉಂಟು ಮಾಡಲೆಂದೇ ರಸ್ತೆ ಪೂರ್ಣ ಅಗೆದು ಬಿಡಲಾಗಿದೆ ಎನಿಸುತ್ತದೆ. ಸಾರ್ವಜನಿಕರಿಗೆ ಅನುಕೂಲ ಮಾಡಬೇಕಾದ ಪುರಸಭೆ ಸಮಸ್ಯೆ ಉಂಟು ಮಾಡುವುದು ಎಷ್ಟರ ಮಟ್ಟಿಗೆ ಸರಿ, ಅಗೆದಿರುವ ರಸ್ತೆ ಕಾಲುವೆ ಮುಚ್ಚಿ ಸಾರ್ವನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸದೆ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ವಾರಗಳಿಂದ ತುಂಬ ತೊಂದರೆಯಾಗಿದೆ. ಪುರಸಭೆ ಇತ್ತ ಕೂಡಲೆ ಗಮನ ಹರಿಸಿ, ಅಗೆದಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂಬುದು ನಾಗರಿಕರ ಆಗ್ರಹ. ಆದಷ್ಟು ಬೇಗ ಪುರಸಭೆ ಕಾರ್ಯೋನ್ಮುಖರಾಗುವುದೇ ಕಾದು ನೋಡೋಣ.
ಟಿ ರಂಗನಾಥ್, ಮಾಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.