ಬೆಂಗಳೂರು ಗ್ರಾಮಾಂತರ

ವೈಯಕ್ತಿಕ ಫಲಾನುಭವಿಗಳಿಗೆ ಆದ್ಯತೆ

Published On :

ರಾಮನಗರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮುದಾಯ ಆಧರಿತ ಕಾರ್ಯಕ್ರಮಗಳಿಗಿಂತ ವೈಯಕ್ತಿಕ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು ಎಂದು ರಾಜ್ಯ ನರೇಗಾ ಯೋಜನೆಯ ಆಯುಕ್ತ ಮನೀಷ್ ಮೌದ್ಗಿಲ್ ತಿಳಿಸಿದರು.
ಕೃಷಿ ಕಾರ್ಮಿಕರಿಗೆ ಮಾಸಿಕ ಕನಿಷ್ಠ 15 ದಿನಗಳ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲೆಯ ವಿವಿಧ ಗ್ರಾ.ಪಂ.ಗಳಿಗೆ ಭೇಟಿ ನೀಡಿ ನರೇಗಾ ಯೋಜನೆ
ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ನರೇಗಾ ಯೋಜನೆಯಡಿ ಉದ್ಯೋಗ ಪಡೆದುಕೊಳ್ಳಲು ಫಲಾನುಭವಿಗಳು ಕಡ್ಡಾಯವಾಗಿ ಜಾಬ್ ಕಾರ್ಡ್ ಹೊಂದಿರಬೇಕು. ಈ ಜಾಬ್ ಕಾರ್ಡ್‌ಗಳು ಫಲಾನುಭವಿಗಳೇ ಇಟ್ಟುಕೊಳ್ಳಬೇಕು. ಆದರೆ, ರಾಜ್ಯದ ಬಹುತೇಕ ಕಡೆಗಳಲ್ಲಿ ಗ್ರಾ.ಪಂ. ಅಧಿಕಾರಿಗಳೇ ಜಾಬ್ ಕಾರ್ಡ್‌ಗಳನ್ನು ಇರಿಸಿಕೊಂಡು ದುರುಪಯೋಗ ಪಡಿಸಿಕೊಳ್ಳಲಾಗುತ್ತಿರುವ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪ್ರತಿ 25 ಕಾರ್ಮಿಕರಿಗೆ ಒಬ್ಬರು ಕಾಯಕ ಬಂಧುವನ್ನು ನೇಮಿಸಲಾಗುತ್ತದೆ. ಅದೇ ರೀತಿ ಕಾಯಕ ಸಂಘವನ್ನು ರಚಿಸಿ, ಪ್ರತಿ ವಾರ ಈ ಸಂಘ ಸಭೆ ಸೇರಿ ಉದ್ಯೋಗಿಗಳಿಂದ ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ. ಉದ್ಯೋಗ ಬಯಸುವ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡುವುದು ಕಾಯಕ ಬಂಧುವಿನ ಕರ್ತವ್ಯವಾಗಿದೆ ಎಂದು ಮೌದ್ಗಿಲಲ್ಹೇಳಿದರು. ಸಮುದಾಯ ಆಧರಿತ ನರೇಗಾ ಕಾಮಗಾರಿಗಳಲ್ಲಿ ಮಾನವ ಶಕ್ತಿಗೆ ಬದಲಾಗಿ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾರ್ಮಿಕರ ಫೋಟೋ ತೆಗೆದು ಅದನ್ನು ಅಲ್ಲಿಂದಲ್ಲೇ ನರೇಗಾ ಕಚೇರಿಗೆ ಅಪಲೋಡ್ ಮಾಡಿದರೆ ಮಾತ್ರ ಹಣ ಬಿಡುಗಡೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಟೋಲ್ ಪ್ರೀ ನಂಬರ್: ನರೇಗಾದಡಿ ಉದ್ಯೋಗ ಬೇಕಾದಲ್ಲಿ ಜಾಬ್ ಕಾರ್ಡ್‌ದಾರರು ನರೇಗಾ ಇಲಾಖೆ ಸ್ಥಾಪಿಸಿರುವ ದೂರವಾಣಿ ಸಂಖ್ಯೆ 1800 425 8666ಗೆ ಕರೆ ಮಾಡಿದರೆ ಬೇಡಿಕೆ ದಾಖಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಕನಿಷ್ಠ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಎದುರಾಗಬಹುದಾದ ಎಲ್ಲ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬೇಡಿಕೆ ಸಲ್ಲಿಸಬಹುದು: ಉದ್ಯೋಗಾಕಾಂಕ್ಷಿಗಳು ಈ ಸಂಖ್ಯೆಗೆ ಉಚಿತ ಕರೆ ಮಾಡಿ ತಮ್ಮ ಹಾಗೂ ಇತರ ಉದ್ಯೋಗಿಗಳ ಬೇಡಿಕೆಯನ್ನು ಸಲ್ಲಿಸಬಹುದು ಎಂದರು. ಹೊಸ ಉದ್ಯೋಗ ಚೀಟಿ ಬೇಕಾದವರು ಇದೇ ಸಂಖ್ಯೆಗೆ ಕರೆ ಮಾಡಿದರೆ, ಕರೆಯನ್ನೇ ಅರ್ಜಿಯನ್ನಾಗಿ ಪರಿಗಣಿಸಿ ಅವರಿಗೆ ಉದ್ಯೋಗ ಚೀಟಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ನರೇಗಾದಡಿಯಲ್ಲಿ ದೂರು, ದುಮ್ಮಾನಗಳನ್ನು ದಾಖಲಿಸಲು ಇದೇ ಸಂಖ್ಯೆಯನ್ನು ಬಳಸಬಹುದು ಎಂದು ನರೇಗಾ ಇಲಾಖೆಯಿಂದ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಬಗ್ಗೆ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.