ಬೆಂಗಳೂರು ಗ್ರಾಮಾಂತರ

2ನೇ ದಿನವೂ ಮುಂದುವರಿದ ಪ್ರತಿಭಟನೆ

Published On :

ದೇವನಹಳ್ಳಿ: ನವಯುಗ ಟೋಲ್‌ವೇ ಸಂಸ್ಥೆಯವರು ಭಾನುವಾರ ಮಧ್ಯರಾತ್ರಿಯಿಂದ ನಾಲ್ಕು ಪಟ್ಟು ಶುಲ್ಕವನ್ನು ದಿಢೀರನೇ ಏರಿಸಿರುವುದರ ವಿರುದ್ಧ  ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರ ಸಂಘ ಹಾಗೂ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಸೋಮವಾರ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಈ ಹೊಸ ರಸ್ತೆ ನಿರ್ಮಾಣಕ್ಕೆ ಜಮೀನು ಕೊಟ್ಟಿರುವವರು ನಾವು. ನಮ್ಮ ಮೇಲೆ ಎಲ್ಲಿಂದಲೋ ಬಂದು ದಬ್ಬಾಳಿಕೆ ಮಾಡಲು ಇವರು ಯಾರು ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ  ನಾಗೇನಹಳ್ಳಿ ಕೃಷ್ಣಮೂರ್ತಿ ಪ್ರಶ್ನಿಸಿ, ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್‌ಗೆ ಒಂದು ಸ್ಥಾನವೂ ಬರುತ್ತಿರಲಿಲ್ಲ:  ಲೋಕಸಭಾ ಚುನಾವಣೆ ಮೊದಲು ಈ ರೀತಿ ಶುಲ್ಕ ಏರಿಸಿದ್ದರೆ ಕರ್ನಾಟಕದಲ್ಲಿ ಒಂದೂ ಸ್ಥಾನವೂ ಕಾಂಗ್ರೆಸ್ ಪಕ್ಷಕ್ಕೆ ದೊರೆಯುತ್ತಿರಲಿಲ್ಲ ಎಂದು ಟ್ಯಾಕ್ಸಿ ಚಾಲಕ ಸಂಘದವರು ತಿಳಿಸಿ ನಮಗೆ ತೀರ ಕಡಿಮೆ ಆದಾಯವಿದ್ದು ಅದರಲ್ಲಿ ನಾಲ್ಕುಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿರುವುದರಿಂದ ನಮ್ಮ ಹೆಂಡತಿ, ಮಕ್ಕಳು ಬೀದಿ ಪಾಲಾಗುತ್ತಾರೆ. ಜೀವನ ಪೂರ್ತಿ ಬಡತನದಲ್ಲೇ ಬದುಕಬೇಕು, ಇಲ್ಲವಾದರೆ ವಿಷ ಕುಡಿದು ಸಾಯಬೇಕು. ಮತ್ತೊಂದು ದಾರಿಯೆಂದರೆ ಸಮಾಜಕ್ಕೆ ಕಂಟಕರಾಗಿ ದೇಶ ದ್ರೋಹಿಗಳಾಗಿ ಅಡ್ಡದಾರಿ ಹಿಡಿದು ಬದುಕಬೇಕಾಗುತ್ತದೆ ಎಂದು ಕೆಲ ಮಂದಿ ಚಾಲಕರು ತಿಳಿಸಿದರು.
ಕಾರು ನಿಲ್ಲಿಸಿ ಪ್ರತಿಭಟನೆ: ಸೋಮವಾರ ಟೋಲ್ ಪ್ಲಾಜಾ ಬಳಿ ಸಾವಿರಾರು ಟ್ಯಾಕ್ಸಿ ಚಾಲಕರು ತಮ್ಮ ಕಾರುಗಳನ್ನು ನಿಲ್ಲಿಸಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚುಕಾಲ ಪ್ರತಿಭಟಿಸಿದರು. ಪೊಲೀಸರು ಬಲವಂತವಾಗಿ ವಾಹನಗಳನ್ನು ತೆರವುಗೊಳಿಸಿದರು. ನೂರಾರು ವಾಹನಗಳು ರಸ್ತೆಗೆ ಅಡ್ಡವಾಗಿ ಇಟ್ಟಿದ್ದ ಸಿಮೆಂಟ್ ದಿಮ್ಮಿಗಳನ್ನು ಸರಿಸಿ ಸುಂಕ ಕಟ್ಟೆ ತಪ್ಪಿಸಿ ಬೆಂಗಳೂರು ಕಡೆಗೆ ಹೊರಟವು. ಈ ಸಂದರ್ಭದಲ್ಲಿ ಸುಂಕ ಹೆಚ್ಚಳ ಬಗ್ಗೆ ಪ್ರಶ್ನೆ ಮಾಡಿದ ಅನೇಕ ಚಾಲಕರ ಮೇಲೆ ಸ್ಥಳದಲ್ಲಿಯೇ ದಂಡ ವಿಧಿಸುತ್ತಿದ್ದು ಸಾಮಾನ್ಯವಾಗಿತ್ತು.
ಟೋಲ್ ಪ್ಲಾಜಾದಲ್ಲಿ 20 ವಿಭಾಗ ಮಾಡಿದ್ದು 10 ಗೇಟ್‌ಗಳಲ್ಲಿಯೂ ವಾಹನಗಳು ಚಲಿಸದೇ ನಿಂತಿದ್ದವು.  ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ  ಹೋಗಬೇಕಾದರೆ ಒಂದು ಬಾರಿ ಶುಲ್ಕ ಕೊಡಬೇಕಾಗುತ್ತದೆ. ಆದರೆ ನಮ್ಮಿಂದ 2 ಕಡೆಯ ಶುಲ್ಕ ವಸೂಲು ಮಾಡಿರುವುದು ಕಾನೂನಿಗೆ ವಿರೋಧವಾಗಿದೆ ಎಂದು ದೆಹಲಿಯಿಂದ ಬೆಂಗಳೂ ನಗರಕ್ಕೆ ಹೋಗಬೇಕಿದ್ದ ಪ್ರಯಾಣಿಕನೊಬ್ಬ ಕೋಪ ತಾಪ ವ್ಯಕ್ತ ಪಡಿಸಿದ. ಡಿಸಿಪಿ ಅವರಲ್ಲಿ ಈ ಕುರಿತು ಅವರು ಪ್ರಶ್ನಿಸಿದರು.  
ರಾತ್ರಿಯೂ ಪ್ರತಿಭಟನೆ: ಸುವರ್ಣ ಕರ್ನಾಟಕ ಜನಶಕ್ತಿ ಕಾರ್ಯಕರ್ತರು ಸೋಮವಾರ ರಾತ್ರಿಯೂ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೋರಾಟ ಸಮಿತಿಯ ಬಿ.ಕೆ.ಶಿವಪ್ಪ ತಿಳಿಸಿ ಮಂಗಳವಾರ ದೇವನಹಳ್ಳಿ ತಾಲೂಕಿನ ಎಲ್ಲ ಹೋರಾಟ ಸಮಿತಿಗಳು ಅಲ್ಲದೆ ಮಹಿಳಾ ಘಟಕಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ದೇವನಹಳ್ಳಿ ತಾಲೂಕು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಅಧ್ಯಕ್ಷ ಟಿ.ರವಿ,  ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮಾತನಾಡಿ ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗ ಬೇಕಾಗುತ್ತದೆ. ಆದ್ದರಿಂದ ಕೂಡಲೇ ಶುಲ್ಕವನ್ನು ಹಿಂದಿನ ದರದಲ್ಲೇ ವಸೂಲು ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ ಸರ್ವೀಸ್ ರಸ್ತೆ ಆಗುವವರೆಗೂ ಯಾವುದೇ ಶುಲ್ಕ ವಸೂಲು ಮಾಡಬಾರದು ಎಂದು ತಿಳಿಸಿದರು. ದೇವನಹಳ್ಳಿ ಕಡೆ ಇರುವ ಟೋಲ್ ಬಳಿ ನೂರಾರು ವಾಹನಗಳು ಬೆಳಗಿನಿಂದಲೇ ಗಂಟೆಗಟ್ಟಲೆ ನಿಂತಿರುವುದು ಸಾಮಾನ್ಯವಾಗಿತ್ತು.

ಸಚಿವರ ಸಮರ್ಥನೆ
- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಏರ್‌ಪೋರ್ಟ್ ರಸ್ತೆ ಟೋಲ್‌ದರ ಏರಿಕೆಯನ್ನು ಲೋಕೋಪಯೋಗಿ ಸಚಿವ ಮಹಾದೇವಪ್ಪ ಸಮರ್ಥಿಸಿಕೊಂಡಿದ್ದಾರೆ. ಟೋಲ್‌ದರ ನಿಗದಿಗೆ ರಾಷ್ಟ್ರೀಯ ನೀತಿ ರೂಪಿಸಲಾಗಿದೆ. ನೀತಿಯಡಿ ರಚಿಸಲಾಗಿರುವ ಮಾರ್ಗಸೂಚಿಗಳನ್ವಯ ಟೋಲ್ ದರ ಪರಿಷ್ಕರಿಸಲಾಗಿದೆ ಎಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ರಸ್ತೆ ನಿರ್ಮಿಸಿರುವ ಸಂಸ್ಥೆಯು ಹೂಡಿಕೆ ಮಾಡಿರುವ ಹಣವನ್ನು ಟೋಲ್‌ದರದ ಮೂಲಕ ವಾಪಸ್ ಸಂಗ್ರಹಿಸಿಕೊಳ್ಳಬೇಕು. ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಟೋಲ್‌ದರವನ್ನು ನಿಗದಿ ಮತ್ತು ಪರಿಷ್ಕರಣೆ ಮಾಡಲಾಗುತ್ತದೆ. ಹೂಡಿಕೆ ಮಾಡಿದ ಹಣ, ಸಂಚಾರ ಸಾಂದ್ರತೆಯನ್ನು ಗಮನಿಸಿ ಟೋಲ್‌ದರ ನಿಗದಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.