ಬೆಂಗಳೂರು ಗ್ರಾಮಾಂತರ

ಅಂತೂ ಇಂತೂ ರಸ್ತೆಗೆ ಡಾಂಬರು ಬಂತು

Published On :

ದೊಡ್ಡಬಳ್ಳಾಪುರ: ಧೂಳುಮಯವಾಗಿದ್ದ ದೊಡ್ಡಬಳ್ಳಾಪುರ ನಗರದ ಕೆಲ ರಸ್ತೆಗಳಿಗೆ ಡಾಂಬರು ಭಾಗ್ಯ ಲಭ್ಯವಾಗಿದೆ. ಇಲ್ಲಿನ ಕೆಲ ರಸ್ತೆಗಳು ಸಂಪೂರ್ಣ ಧೂಳು ಮಯವಾಗಿದ್ದು, ವಾಹನ ಸವಾರರು, ಪಾದಚಾರಿಗಳು ಪರಿತಪಿಸುವ ಅನಿವಾರ್ಯತೆ ಉಂಟಾಗಿದೆ. ಜಲ್ಲಿ ಕಲ್ಲುಗಳನ್ನು ಹರಡಿ ತಿಂಗಳೇ ಉರುಳಿದರೂ ಕಾಮಗಾರಿ ನಡೆದಿಲ್ಲ ಎಂಬ ವಿಚಾರಕ್ಕೆ ಒತ್ತುಕೊಟ್ಟು ಕನ್ನಡಪ್ರಭ ಕಳೆದ ಏ.30ರಂದು ವಿಶೇಷ ವರದಿ ಪ್ರಕಟಿಸಿತ್ತು.
ಧೂಳ್‌ಬಳ್ಳಾಪುರ  ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವರದಿ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿತ್ತು. ಅದೇ ರೀತಿ ಸ್ಥಳೀಯ ಆಡಳಿತದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ವರದಿ ಪ್ರಕಟವಾದ 4 ದಿನಗಳಲ್ಲೇ ಸಮಸ್ಯೆ ಬಗೆಹರಿದಿದೆ. ಸಾರ್ವಜನಿಕವಾಗಿ ಕೇಳಿ ಬರುತ್ತಿದ್ದ ಟೀಕೆಗೆ ಕಾಮಗಾರಿಯ ಉತ್ತರ ದೊರೆತಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ವೃತ್ತದಿಂದ ಸಿದ್ಧಲಿಂಗಯ್ಯ ವೃತ್ತದವರೆಗೆ ಜಲ್ಲಿ ಕಲ್ಲುಗಳನ್ನು ರಸ್ತೆಯಲ್ಲಿ ಹರಡಿ ಒಂದೂವರೆ ತಿಂಗಳಾಗಿತ್ತು. ಆದರೆ ಡಾಂಬರು ಹಾಕಿರಲಿಲ್ಲ. ನಿತ್ಯ ಗಿಜಿಗುಡುವ ಅತ್ಯಂತ ಹೆಚ್ಚು ಟ್ರಾಫಿಕ್ ಹೊಂದಿರುವ ರಸ್ತೆಯೂ ಇದಾಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳೂ ಧೂಳಿನಿಂದ ಪರಿತಪಿಸುವಂತಾಗಿದೆ. ರೋಗಗಳನ್ನು ಹೆಚ್ಚಿಸುವ ತಾಣವಾಗಿ ರಸ್ತೆ ಮಾರ್ಪಾಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಅದೇ ರೀತಿ ಸೋಮೇಶ್ವರ ಬಡಾವಣೆಯ ಮುಖ್ಯರಸ್ತೆಯ ಸ್ಥಿತಿಯೂ ಇದೇ ಆಗಿತ್ತು. ಈಗ ಈ ಎರಡೂ ರಸ್ತೆಗಳ ಜೊತೆಗೆ ಅರೆಬರೆ ಕಾಮಗಾರಿಗೆ ನಿಂತಿದ್ದ ಹಲವು ರಸ್ತೆಗಳಿಗೆ ಡಾಂಬರು ಭಾಗ್ಯ ಬಂದಿದೆ. ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಸ್ಥಳೀಯ ಆಡಳಿತ ಕಾಮಗಾರಿಗಳನ್ನು ಮುಗಿಸುವಂತೆ ಹೇಳಿದೆ.
ಅದೇ ರೀತಿ ದೊಡ್ಡಬಳ್ಳಾಪುರ ನಗರದ ರೋಜಿಪುರ, ಸೋಮೇಶ್ವರ ಬಡಾವಣೆ, ಗಂಗಾಧರಪುರ ಸೇರಿದಂತೆ ಹಲವೆಡೆ ಕಾಮಗಾರಿಗಳು ಚಾಲನೆ ಪಡೆದುಕೊಂಡಿವೆ. ಅದೇನೇ ಇರಲಿ, ಜನರ ಕೆಲಸಕ್ಕೆ ಅಧಿಕಾರಿಗಳು ಈಗಲಾದರೂ ಮಹತ್ವ ಕೊಟ್ಟಿದ್ದಾರೆ ಎಂಬುದೇ ಸಮಾಧಾನಕರ ಅಂಶ. ಸಾರ್ವಜನಿಕರ ಸಮಸ್ಯೆ ಎತ್ತಿಹಿಡಿದು ಆಡಳಿತಯಂತ್ರವನ್ನು ಎಚ್ಚರಿಸುವ ಕೆಲಸ ಮಾಡಿದ ಕನ್ನಡಪ್ರಭದ ವರದಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.