ಜಿಲ್ಲೆಯೊಂದು ಮೂರು ಬಾಗಿಲು!
ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ವರಿಷ್ಠಾಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಟಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಬರ ಪರಿಹಾರ ನಿರ್ವಹಣೆ ಕುರಿತ ಸಭೆಯಲ್ಲಿ ಅಧಿಕಾರಿಗಳ ಮುಸುಕಿನ ಗುದ್ದಾಟ ಬಹಿರಂಗ
ಮತ್ತೀಕೆರೆ ಜಯರಾಮ್
ರಾಮನಗರ: ಜಿಲ್ಲೆಯಲ್ಲಿ ಚುನಾಯಿತ ಪ್ರತಿನಿಧಿಗಳ ನಡುವಿನ ಕಚ್ಚಾಟ ಹೊಸದಲ್ಲ. ಆ ಚಾಳಿ ಈಗ ಅಧಿಕಾರಿಗಳಿಗೂ ಅಂಟಿದೆ. ಅಧಿಕಾರಿಗಳಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದ್ದು, ಮೂರು ಪ್ರಮುಖ ಹುದ್ದೆಗಳಲ್ಲಿರುವ ಅಧಿಕಾರಿಗಳು ಮೂರು ದಿಕ್ಕಿಗೆ ಮುಖ ಮಾಡಿದ್ದಾರೆ.
ಯಾವುದೇ ಜಿಲ್ಲೆಯ ಆಡಳಿತ ಸುಸೂತ್ರವಾಗಿ ನಡೆಯಲು ಅಲ್ಲಿರುವ ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡುವೆ ಸಮನ್ವಯತೆ ಅತಿಮುಖ್ಯ. ಈ ಜಿಲ್ಲೆ ಮಟ್ಟಿಗೆ ಮೂವರು ಅಧಿಕಾರಿಗಳ ನಡುವೆ ಅಂತಹ ಹೊಂದಾಣಿಕೆ ಕಾಣದಾಗಿದೆ.
ಇದಕ್ಕೆ ಇಂಬು ನೀಡುವ ತಾಜಾ ನಿದರ್ಶನಗಳಿಗೆ ಕೊರತೆಯಿಲ್ಲ. ಶುಕ್ರವಾರವಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಬರ ಪರಿಹಾರ ನಿರ್ವಹಣೆ ಕುರಿತ ಸಭೆಯಲ್ಲಿ ಅಧಿಕಾರಿಗಳ ಮುಸುಕಿನ ಗುದ್ದಾಟವನ್ನು ಶಾಸಕ ಬಾಲಕೃಷ್ಣ ಹೊರಗೆಡವಿದ್ದೂ ಉಂಟು.
ಗೌಡ್ರ ಗದ್ದಲ ಇದ್ದಿದ್ದೆ
ರಾಮನಗರ ಜಿಲ್ಲೆ ಹೇಳಿ ಕೇಳಿ ರಾಜಕೀಯವನ್ನೇ ಹಾಸು, ಹೊದಿಕೆ ಮತ್ತು ಉಸಿರಾಗಿಸಿಕೊಂಡ ನೆಲ. ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಗೌಡ್ರ ಗದ್ದಲ ಇದ್ದಿದ್ದೇ. ಇವರಿಬ್ಬರೂ ಹಾವು-ಮುಂಗುಸಿಯಂತೆ ಕಚ್ಚಾಡಿಕೊಂಡೇ ಬರುತ್ತಿದ್ದಾರೆ. ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಒಂದೆಡೆ ಕುಮಾರಸ್ವಾಮಿ, ಮತ್ತೊಂದೆಡೆ ಶಿವಕುಮಾರ್ ವಿರುದ್ಧ ಸೆಣೆಸುತ್ತಲೇ ಬಂದವರು. ಕಳೆದ ಲೋಕಸಭೆ ಉಪ ಚುನಾವಣೆಯಿಂದ ಯೋಗೇಶ್ವರ್ ಮತ್ತು ಶಿವಕುಮಾರ್ ದೋಸ್ತಿಗಳಾಗಿದ್ದಾರೆ. ರಾಜಕಾರಣಿಗಳು ನೇರಾನೇರ ಜಗಳವಾಡುತ್ತಾರೆ. ಆದರೆ, ಇಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್, ಜಿಪಂ ಸಿಇಒ ಡಾ.ಎಂ.ವಿ. ವೆಂಕಟೇಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ನಡುವಿನ ಶೀಥಲ ಸಮರ ಜಿಲ್ಲೆ ಅಭಿವೃದ್ಧಿ ಮೇಲೆ ಅಡ್ಡಪರಿಣಾಮ ಬೀರುತ್ತಿದೆ.
ನೋಟಿಸ್ ನೀಡಿದ್ದರೆ?
ಚುನಾವಣಾ ಸಂದರ್ಭದಲ್ಲಿ ಮೂವರು ಅಧಿಕಾರಿಗಳ ನಡುವಿನ ವೈಮನಸ್ಸು ಹೆಚ್ಚುತ್ತಾ ಹೋಯಿತು. ಇದಕ್ಕೆ ಕರ್ತವ್ಯಲೋಪ ಸಂಬಂಧ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಯು ಉಳಿದಿಬ್ಬರಿಗೆ ನೋಟಿಸ್ ಜಾರಿ ಮಾಡಿದ್ದೂ ಕಾರಣವೆನ್ನುವ ಮಾತುಗಳು ಜಿಲ್ಲಾಡಳಿತ ವಲಯದಲ್ಲಿ ಕೇಳಿ ಬರುತ್ತಿವೆ. ಕರ್ತವ್ಯ ಲೋಪದ ಬಗ್ಗೆ ಸಾಕಷ್ಟು ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದನ್ನು ಒಪ್ಪಿಕೊಂಡಿದ್ದ ಜಿಲ್ಲಾಧಿಕಾರಿ ವಿಶ್ವನಾಥ್, ಅಧಿಕಾರಿಗಳ ವಿವರವನ್ನು ಒಮ್ಮೆಯೂ ಬಹಿರಂಗಪಡಿಸಿಲ್ಲ. ಇದನ್ನು ಗಮನಿಸಿದರೆ, ಉಳಿದಿಬ್ಬರಿಗೆ ಅವರು ನೋಟಿಸ್ ನೀಡಿದ್ದಾರೆನ್ನುವುದಕ್ಕೆ ಪುಷ್ಠಿ ಸಿಕ್ಕಂತಾಗುತ್ತದೆ.
ಒಗ್ಗೂಡಿದ್ದು ವಿರಳ
ಚುನಾವಣಾ ಕರ್ತವ್ಯ, ಜಿಲ್ಲೆಯ ಆಗುಹೋಗು, ಪ್ರಮುಖ ಕಾರ್ಯಕ್ರಮಗಳಲ್ಲಿ ಮೂವರು ಅಧಿಕಾರಿಗಳು ಒಗ್ಗೂಡಿ ಭಾಗವಹಿಸಿದ್ದೂ ವಿರಳ. ಆಗೊಮ್ಮೆ ಹೀಗೊಮ್ಮೆ ಪಾಲ್ಗೊಂಡರೂ ಮುಖ ಕೊಟ್ಟು ಮಾತನಾಡದಷ್ಟು ಅಂತರ ಕಾಯ್ದುಕೊಂಡೇ ಬರುತ್ತಿದ್ದಾರೆ. ಹಾಗೆಂದು ಈ ಅಧಿಕಾರಿಗಳು ಪರಸ್ಪರರ ನಿಂದನೆ, ದೂಷಣೆ, ಆರೋಪ, ಪ್ರತ್ಯಾರೋಪಕ್ಕೆ ನೇರವಾಗೇನೂ ಇಳಿದಿಲ್ಲ. ಆದರೆ, ತಮ್ಮ ನಡುವೆ ಇರುವ ಹೊಂದಾಣಿಕೆ ಕೊರತೆ ಮತ್ತು ಅಸಮಾಧಾನವನ್ನು ಪರೋಕ್ಷವಾಗಿ ಹೊರಗೆಡವಿದ್ದನ್ನು ಅಲ್ಲಗಳೆಯುವಂತಿಲ್ಲ.
ಪ್ರತ್ಯೇಕ ಸುದ್ದಿಗೋಷ್ಠಿ
ಸಾರ್ವತ್ರಿಕ ಚುನಾವಣೆಗಳ ವಿಷಯವಾಗಿ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಂಟಿ ಸುದ್ದಿಗೋಷ್ಠಿ ನಡೆಸುವುದು ವಾಡಿಕೆ. ರಾಮನಗರದಲ್ಲಿ ಈ ಸಂಪ್ರದಾಯ ಪಾಲನೆ ಆಗಿಲ್ಲ. ಇಬ್ಬರೂ ಪ್ರತ್ಯೇಕ ಗೋಷ್ಠಿ ಕರೆದು, ವಿವರ ನೀಡಿದ್ದಾರೆ. ಚುನಾವಣೆ ವಿಷಯವಾಗಿ ನಡೆಸಲಾದ ವಿವಿಧ ಸಭೆಗಳಲ್ಲೂ ಈ ಮೂವರು ಅಧಿಕಾರಿಗಳು ಒಗ್ಗೂಡಲಿಲ್ಲ. ಈ ಜಿಲ್ಲೆಯಲ್ಲಿ ಮತದಾನ ಹೆಚ್ಚಳಕ್ಕೆ ಸ್ವೀಪ್ ಸಮಿತಿ ಮೂಲಕ ಮೂಡಿಸಿದ ಜಾಗೃ ಕಾರಣವೆನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಇದರಿಂದ ಸಮಿತಿ ಅಧ್ಯಕ್ಷರೂ ಆದ ಜಿಪಂ ಸಿಇಒ ಡಾ.ವೆಂಕಟೇಶ್ ಕೊಂಚ ಹಿಗ್ಗಿದ್ದರು. ಆದರೆ, ಚುನಾವಣೆ ಯಶಸ್ಸಿನ ಖುಷಿ ಹಂಚಿಕೊಳ್ಳಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ವಿಶ್ವನಾಥ್, ಮತದಾನದ ಹೆಚ್ಚಳದ ಯಶಸ್ಸು ಯಾರೊಬ್ಬರದ್ದಲ್ಲ. ಹಾಗೆಂದುಕೊಂಡರೆ ಮೂರ್ಖತನವಾಗುತ್ತದೆ ಎಂದು ಕೊಂಕು ನುಡಿದಿದ್ದರು.
ಉದ್ದೇಶಪೂರ್ವಕ ತಡ
ಜಾನಪದ ಲೋಕದ ಬಳಿ ಜಿಪಂ ಮತ್ತು ತೋಟಗಾರಿಕೆ ಇಲಾಖೆಯಿಂದ ಮಾವು ಪರಿಷೆಯ ಉದ್ಘಾಟನೆ ಶುಕ್ರವಾರ ನಡೆಯಿತು. ಈ ಕಾರ್ಯಕ್ರಮವನ್ನು ಸಂಘಟಿಸಿದ್ದವರೇ ಡಾ. ವೆಂಕಟೇಶ್. ಆದರೆ, ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಟೇಪ್ ಕತ್ತರಿಸಿ ಪರಿಷೆ ಉದ್ಘಾಟಿಸುವಾಗ ವೆಂಕಟೇಶ್ ಗೈರು ಎದ್ದು ಕಂಡಿತು. ಕುಡಿಯುವ ನೀರಿನ ಸಮಸ್ಯೆ ಸಂಬಂಧ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯ ಸಭೆಯಲ್ಲಿ ಜಿಲ್ಲಾಧಿಕಾರಿ ಇರಲಿಲ್ಲ. ಅವರನ್ನು ಕರೆಸುವಂತೆ ಶಾಸಕ ಬಾಲಕೃಷ್ಣ ಮಾಡಿದ ಮನವಿಗೆ ಸಚಿವರು ಕಿವಿಗೊಡದಿದ್ದನ್ನು ಗಮನಿಸಿದರೆ, ಈ ಅಧಿಕಾರಿಗಳ ಮುಸುಕಿನ ಗುದ್ದಾಟ ಸಚಿವರ ಅರಿವಿಗಿರುವುದು ಸ್ಪಷ್ಟ.
ಡಿಸಿ ಡಾ.ಡಿ.ಎಸ್. ವಿಶ್ವನಾಥ್, ಜಿಪಂ ಸಿಇಒ ಡಾ.ಎಂ.ವಿ. ವೆಂಕಟೇಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ನಡುವಿನ ಶೀಥಲ ಸಮರ ಜಿಲ್ಲೆ ಅಭಿವೃದ್ಧಿ ಮೇಲೆ ಅಡ್ಡಪರಿಣಾಮ
ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಮುಸುಕಿನ ಗುದ್ದಾಟವನ್ನು ಶಾಸಕ ಬಾಲಕೃಷ್ಣ ಹೊರಗೆಡವಿದ್ದೂ ಉಂಟು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

