ಬೆಂಗಳೂರು ಗ್ರಾಮಾಂತರ

ಚರಂಡಿ ನೀರು ನಿಂತು ನರಕ ಯಾತನೆ

Published On :

ಚನ್ನಪಟ್ಟಣ: ಅಧಿಕಾರಿಗಳ ಉದಾಸೀನತೆ, ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ತಾಲೂಕಿನ ದೇವರಹಳ್ಳಿ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ.
ಗ್ರಾಮದ ಹೆದ್ದಾರಿ ಬದಿಯಲ್ಲಿ ನಿರ್ಮಿಸಿರುವ ಚರಂಡಿ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಅಧಿಕಾರಿಗಳು ತಮಗಿಷ್ಟ ಬಂದಂತೆ ನಿರ್ವಹಿಸಿದ ಪರಿಣಾಮ ಇದರಿಂದಾಗಿ ಚರಂಡಿಯ ನೀರು ಗ್ರಾಮದ ಮಧ್ಯಭಾಗದಲ್ಲಿ ನಿಂತು ಗುಂಡಿಯಾಗಿದೆ. ಚರಂಡಿ ನೀರು ಗಬ್ಬೆದ್ದು ನಾರುತ್ತಿದ್ದು ಇದರಿಂದ ಸುತ್ತ ಮುತ್ತಲ ನಿವಾಸಿಗಳು ಮೂಗುಮುಚ್ಚಿ ವಾಸಿಸುವಂತಾಗಿದೆ. ಇಲ್ಲಿ ಸೊಳ್ಳೆ ನೊಣ ಮೊದಲಾದ ಕ್ರಿಮಿಕೀಟಗಳು ಸೇರಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ.
ಚರಂಡಿಯಿಂದ ನಿರ್ಮಾಣವಾಗಿರುವ ಗುಂಡಿಯ ಎದುರು ಶಾಲೆ ಇದ್ದು ಚಿಕ್ಕ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಅಕಸ್ಮಾತ್ ಚರಂಡಿಗೆ ಬಿದ್ದರೆ ಆಗುವ ಅನಾಹುತಕ್ಕೆ ಯಾರು ಹೊಣೆಯಾಗುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಇದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉತ್ತರ ಹೇಳಬೇಕಿದೆ.
ಚರಂಡಿಯೇ ಸಮಸ್ಯೆ: ಈ ಹಿಂದೆ ರಸ್ತೆಬದಿಯಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಚರಂಡಿಗಳಿಂದಾಗಿ ಮನೆಗಳ ಮುಂದೆಯೇ ನೀರು ನಿಂತು ನಿವಾಸಿಗಳಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿತ್ತು. ಈ ಸಮಸ್ಯೆಯನ್ನು ಸರಿಪಡಿಸುವಂತೆ ಹತ್ತಾರು ಬಾರಿ ಕಚೇರಿ ಅಲೆದು, ಕೊನೆಗೂ ಕಾಮಗಾರಿ ಮಂಜೂರು ಮಾಡಿಸಿಕೊಂಡು ಸಮಸ್ಯೆ ಬಗೆಹರಿಯಿತು ಎಂದು ನಿವಾಸಿಗಳು ನಿಟ್ಟುಸಿರು ಬಿಡುವಷ್ಟರಲ್ಲೇ, ಇದೀಗ ಹಿಂದಿನಕ್ಕಿಂತ ದುಪ್ಪಟ್ಟು ಸಮಸ್ಯೆ ಉಂಟಾಗಿದೆ.
ಗ್ರಾಮದ ಮಧ್ಯಭಾಗದಿಂದ 100ಮೀಟರ್ ಚರಂಡಿ ನಿರ್ಮಾಣಕ್ಕೆ ಅಧಿಕಾರಿಗಳು ಅನುದಾನ ಮಂಜೂರು ಮಾಡಿದ್ದು, ಕೇವಲ 50ಮೀ. ಬಾಕಿ ಉಳಿದಿದ್ದರೂ ಅದನ್ನು ಕಾಮಗಾರಿಗೆ ಸೇರ್ಪಡೆ ಮಾಡಿಲ್ಲ, ಈ ಯಡವಟ್ಟಿನಿಂದ 100ಮೀ. ವ್ಯಾಪ್ತಿಯಲ್ಲಿನ ಚರಂಡಿ ನೀರು ಮುಂದಕ್ಕೆ ಹೋಗದೆ ಇಡೀ ಚರಂಡಿ ಗಬ್ಬೆದ್ದು ನಾರುತ್ತಿದೆ.
ಅಧಿಕಾರಿಗಳ ಉದಾಸೀನ: ಅಧಿಕಾರಿಗಳ ಈ ಬೇಜವಾಬ್ದಾರಿಯನ್ನು ಪ್ರಶ್ನಿಸಿ ಸರಿಪಡಿಸುವಂತೆ ನಿವಾಸಿಗಳು ಹಲವು ಬಾರಿ ಒತ್ತಾಯ ಮಾಡಿದ್ದರೂ ಭರವಸೆ ಬಿಟ್ಟು ಏನೂ ಸಿಗುತ್ತಿಲ್ಲ. ಈ ಸಂಬಂಧ ಕಾಮಗಾರಿಗೆ ಸಂಬಂಧಿಸಿದ ಎಂಜಿನಿಯರ್ ಬೋರಯ್ಯ ಅವರ ಗಮನಕ್ಕೆ ತಂದಿದ್ದರೂ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕೇಳೋಣವೆಂದರೆ ಆತ ಕೈಗೇ ಸಿಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಅಧಿಕಾರಿಗಳು ಮನವಿಗೆ ಸ್ಪಂದಿಸದೆ ಇರುವುದರಿಂದ ಇದೀಗ ಪ್ರತಿಭಟನೆ ನಡೆಸಲು ನಿವಾಸಿಗಳು ನಿರ್ಧರಿಸಿದ್ದು, ಕೂಡಲೇ ಸಮಸ್ಯೆ ಸರಿಪಡಿಸದಿದ್ದರೆ ಚರಂಡಿಯಲ್ಲಿನ ಕೊಳಚೆ ನೀರನ್ನು ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ತಂದು ಸುರಿಯುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮುಂದಾಲೋಚನೆಯಿಲ್ಲದೆ ಇಷ್ಟ ಬಂದ ಅಳತೆಗೆ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಿದರೆ, ಇನ್ನೊಂದೆಡೆ ಸಮಸ್ಯೆ ಎದುರಾಗುತ್ತದೆ ಎಂದು ಗೊತ್ತಿದ್ದರೂ ಗೆರೆ ಎಳೆದಂತೆ ಅಷ್ಟೇ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಂದಾಗಿ ಬಿಕ್ಕಟ್ಟು ಎದುರಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸುವರೋ ಇಲ್ಲ ಗಬ್ಬು ವಾಸನೆ ಎದುರು ನೋಡುವರೋ ಎಂಬುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.