ಬೆಂಗಳೂರು ಗ್ರಾಮಾಂತರ

ಬಾಜಿದಾರರ ಭವಿಷ್ಯವೂ ನಿರ್ಧಾರ

Published On :

ಮತ್ತೀಕೆರೆ ಜಯರಾಮ್
ರಾಮನಗರ:  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಹಣೆ ಬರಹದ ಜತೆಗೆ ಭಾರಿ ಮೊತ್ತವನ್ನು ಹೂಡಿರುವ ಬಾಜಿದಾರರ ಭವಿಷ್ಯವೂ ಶುಕ್ರವಾರ ನಡೆಯಲಿರುವ ಫಲಿತಾಂಶದಲ್ಲಿ ನಿರ್ಧಾರವಾಗಲಿದೆ.
ಕಳೆದ ಉಪ ಚುನಾವಣೆಯಲ್ಲಿ ನೇರ ಹಣಾಹಣಿಯಿದ್ದ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪಧೆ ಏರ್ಪಟ್ಟಿದೆ. ಸಾಕಷ್ಟು ಚುನಾವಣೆಗಳಲ್ಲಿ ರಾಜಕೀಯ ಲೆಕ್ಕಾಚಾರ, ಸಮೀಕ್ಷೆಗಳನ್ನೇ ತಲೆಕೆಳಗಾಗಿಸಿದ ನಿದರ್ಶನಗಳು ಇಲ್ಲುಂಟು.   ಮತದಾನ ಮುಗಿದಾದ ನಂತರ ವಿಧಾನಸಭಾ ಕ್ಷೇತ್ರವಾರು ಲೀಡ್ ಮೇಲಷ್ಟೇ ಬೆಟ್ಟಿಂಗ್ ನಡೆಯುತ್ತಿತ್ತು.  ಎಣಿಕೆ ದಿನ ಸಮೀಪಿಸುತ್ತಿದ್ದಂತೆಯೇ ಬೆಟ್ಟಿಂಗ್ ದಂಧೆ ಜೋರಾಗಿದ್ದು, ತರಾವರಿ ರೀತಿಯಲ್ಲಿ ಬಾಜಿ ಕಟ್ಟಿರುವ ಮಾಹಿತಿಯಿದೆ.
 ಸುರೇಶ್ ಫೇವರಿಟ್
ಬಾಜಿದಾರರ ಪಾಲಿಗೆ ಹಾಲಿ ಸಂಸದ ಡಿ.ಕೆ.ಸುರೇಶ್ ಅವರೇ ಹಾಟ್ ಫೇವರಿಟ್ ಅಭ್ಯರ್ಥಿ. ಇವರ ಗೆಲವಿನ ವಿಷಯವಾಗಿ ಬಾಜಿದಾರರು ರು.1ಕ್ಕೆ 10 ಪೈಸೆಯಂತೆ ಬೆಟ್ಟಿಂಗ್ ಕರೆದಿದ್ದಾರೆ. ಇಷ್ಟು ದೊಡ್ಡ ಮಟ್ಟದ ಸೋಡಿ ಸಿಕ್ಕರೆ ಒಂದು ಕೈ ನೋಡಿಯೇ ಬಿಡೋಣವೆಂದು ಕೆಲವರು ಪಣ ಕಟ್ಟಿದ್ದಾರೆ.   ವಿಧಾನಸಭಾ ಕ್ಷೇತ್ರವಾರು ಮುನ್ನಡೆ ವಿಷಯದಲ್ಲಿ ಚನ್ನಪಟ್ಟಣ, ಮಾಗಡಿ, ಕುಣಿಗಲ್ ಜೊತೆಗೆ ಇದೀಗ  ಬೆಂಗಳೂರು ದಕ್ಷಿಣ, ರಾಮನಗರ ಕ್ಷೇತ್ರವೂ ಸೇರಿಕೊಂಡಿದೆ. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ, ಉಳಿದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಾಜಿ ನಡೆದಿದೆ.
 ಅಂತರಕ್ಕೂ ಬೆಟ್ಟಿಂಗ್
ಕಳೆದ ಉಪ ಚುನಾವಣೆಯಲ್ಲಿ ಸುರೇಶ್ 1.37 ಲಕ್ಷ ಮತಗಳಿಂದ ಗೆಲವು ಸಾಧಿಸಿದ್ದರು. ಈ ಬಾರಿ 1.70 ಸಾವಿರ ಮುನ್ನಡೆಗೆ ಸಮಬಲದ ಬೆಟ್ಟಿಂಗ್ ಪ್ರಾರಂಭಗೊಂಡಿತ್ತು. ಎಣಿಕೆಯ ಮುನ್ನಾ ದಿನ ಬಾಜಿದಾರರೇ ಅಂತರವನ್ನು 1.40 ಲಕ್ಷಕ್ಕೆ ಇಳಿಸಿ, ಬೆಟ್ಟಿಂಗ್ ಕಟ್ಟುತ್ತಿದ್ದಾರೆ.  ರಾಮನಗರ ಜಿಲ್ಲೆಯಲ್ಲಿ ಪ್ರತಿ ಚುನಾವಣೆಯಲ್ಲೂ ಬಾಜಿ ಕಟ್ಟುವ ಒಂದು ವರ್ಗವೇ ಇದೆ. ಅದರಲ್ಲಿ ಕನಕಪುರ ಭಾಗದ ಕೆಲ ಬಾಜಿದಾರರು ಮೊತ್ತ ಎಷ್ಟಾದರೂ ಸೈ ಎನ್ನುವರು. ಈಗಲೂ ಕನಕಪುರ ಕಡೆಯಿಂದಲೇ ಹೆಚ್ಚು ಆಫರ್ ಬರುತ್ತಿದ್ದು, ಬಾಜಿ ವ್ಯವಹಾರವೆಲ್ಲ ಅಲ್ಲೇ ಕುದುರುತ್ತಿದೆ.
 ಏಜೆಂಟರ ಹಾವಳಿ
ಇಲ್ಲಿ ಬಾಜಿದಾರರಿಗಿಂತಲೂ ಏಜೆಂಟರ ಅಬ್ಬರ, ಹಾವಳಿಯೇ ಜೋರಾಗಿದೆ. ರಿಯಲ್  ಎಸ್ಟೇಟ್ ಗಾಳಿ ಬೀಸಿದ ನಂತರ ಸಾಕಷ್ಟು ಹಣ ಜೇಬಿಗಿಳಿಸಿಕೊಂಡಿರುವ ದಲ್ಲಾಳಿಗಳು ಅದೇ ನಂಟನ್ನು  ಬೆಟ್ಟಿಂಗ್ ದಂಧೆಯಲ್ಲೂ ಮುಂದುವರೆಸಿದ್ದಾರೆ.  ಬಾಜಿ ಕಟ್ಟುವವರನ್ನು ಪುಸಲಾಯಿಸಿ, ಪಣ ಕಟ್ಟಿಸಿದರೆ ಶೇಕಡ 2 ರಿಂದ 5ರವರೆಗೆ ಕಮೀಷನ್ ಸಿಗುತ್ತದೆ. ಹೀಗಾಗಿ ದಲ್ಲಾಳಿಗಳು ಹಾದಿ ಬೀದಿಗಳಲ್ಲೆಲ್ಲಾ ಅಡ್ಡಾಡಿ, ಬೆಟ್ಟಿಂಗ್ ಬಗ್ಗೆ ದೊಡ್ಡ ಮಟ್ಟದ ಆಸೆ ಮೂಡಿಸಿ ಖೆಡ್ಡಕ್ಕೆ ಬೀಳಿಸಿರುವುದೂ ಉಂಟು.
 ಬೂತ್‌ವಾರು ಬೆಟ್ಟಿಂಗ್
ಚುನಾವಣಾ ರಾಜಕಾರಣ ನಗರ, ಪಟ್ಟಣಗಳಿಗಿಂತಲೂ ಹಳ್ಳಿಗಳಲ್ಲೇ ಹೆಚ್ಚು ಜಿದ್ದಾಜಿದ್ದಿ. ಅಂತಹ ಗ್ರಾಮಗಳಲ್ಲಿ ಮತಗಟ್ಟೆವಾರು ಮುನ್ನಡೆ ವಿಷಯವಾಗಿ ನಗದು ಮಾತ್ರವಲ್ಲದೆ ಕುರಿ, ರಾಸುಗಳನ್ನೂ ಪಣಕ್ಕೆ ಒಡ್ಡಲಾಗಿದೆ.  ಇಲ್ಲೊಂದು ಗ್ರಾಮದಲ್ಲಿ ಮುನ್ನಡೆ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಲಾ 15 ಗುಂಟೆ ಜಮೀನನ್ನೇ ಬಾಜಿ ಕಟ್ಟಿದ್ದಾರೆ. ಬಹಿರಂಗಕ್ಕೆ ಬಂದಿರುವ ಇಂತಹ ಪ್ರಕರಣಗಳು ಬೆರಳೆಣಿಕೆ. ಆದರೆ, ಸದ್ದಿಲ್ಲದೆ ಸ್ಥಳೀಯವಾಗಿ ನಡೆದ ಬಾಜಿ ವ್ಯವಹಾರಗಳು ಇನ್ನೆಷ್ಟೋ.
 20 ಕೋಟಿ ವಹಿವಾಟು
ಬೆಟ್ಟಿಂಗ್ ವ್ಯವಹಾರವನ್ನು ಸಾಕಷ್ಟು ಹತ್ತಿರದಿಂದ ಬಲ್ಲಂತಹ ವ್ಯಕ್ತಿಗಳು ಹೇಳುತ್ತಿರುವ ಪ್ರಕಾರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ರು.20 ಕೋಟಿಗೂ ಮಿಗಿಲಾದ ಬಾಜಿ ವ್ಯವಹಾರ ನಡೆದಿದೆ  ಎನ್ನುವುದು ಹೌಹಾರುವ ಸಂಗತಿಯೇ ಸರಿ.  ಪ್ರಮುಖವಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಮುನ್ನಡೆಗೇ ಅತ್ಯಧಿಕ ಮೊತ್ತವನ್ನು ಬಾಜಿಗೆ ಹೂಡಲಾಗಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಗೆಲವಿನ ಅಂತರದ ಬೆಟ್ಟಿಂಗ್ ಮೊತ್ತ ಸಿಂಹಪಾಲು ಆಗಿದೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.