ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸೋತಿದ್ದರೂ, ದೊಡ್ಡಬಳ್ಳಾಪುರದಲ್ಲಿ ಗೆದ್ದಿದೆ
ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಆಕಸ್ಮಿಕ ಸೋಲುಂಟಾಗಿರಬಹುದು. ಆದರೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 6 ಸಾವಿರ ಮತಗಳ ಅಂತರದ ಮುನ್ನಡೆಯನ್ನು ಪಕ್ಷಕ್ಕೆ ನೀಡುವ ಮುಖಾಂತರ ಕ್ಷೇತ್ರದ ಜನ ಬಿಜೆಪಿಯನ್ನು ನಿಚ್ಚಳವಾಗಿ ಬೆಂಬಲಿಸಿದ್ದಾರೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಗೆದ್ದಿದೆ ಎಂದು ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಆಗಿದ್ದ ಹಿನ್ನಡೆಯಿಂದ ಚೇತರಿಸಿಕೊಂಡು ಇದೀಗ ನಂ.1 ಸ್ಥಾನಕ್ಕೆ ಬಂದಿದೆ. ಇದಕ್ಕೆ ಕಾರ್ಯಕರ್ತರ ವ್ಯವಸ್ಥಿತ ಸಂಘಟನೆ, ಯುವಕರ ಪರಿಶ್ರಮ, ಪಕ್ಷದ ಎಲ್ಲ ಘಟಕಗಳ ಕಾರ್ಯಕರ್ತರ ನಿಸ್ವಾರ್ಥ ಸೇವೆ ಕಾರಣ ಎಂದರು.
ವರ್ಷದ ಸಾಧನೆ ಏನು?: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷವಾಗಿದೆ. ದೊಡ್ಡಬಳ್ಳಾಪುರದಲ್ಲೂ ಕಾಂಗ್ರೆಸ್ ಶಾಸಕರಿದ್ದಾರೆ. ಅವರ ವರ್ಷದ ಸಾಧನೆ ಏನು ಎಂಬುದನ್ನು ಜನತೆಗೆ ಪ್ರಾಮಾಣಿಕವಾಗಿ ತಿಳಿಸಲಿ. ವಾಸ್ತವವಾಗಿ ಈ ಸರ್ಕಾರದಲ್ಲಿ ಯಾವುದೇ ಹೊಸ ಕಾರ್ಯಕ್ರಮಗಳು ಆರಂಭವಾಗಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ ಹಣ ಮತ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿಯೂ ಸರ್ಕಾರ ಸೋತಿದೆ. ನಗರೋತ್ಥಾನ ನಿಧಿಯಲ್ಲಿ 15 ಕೋಟಿ ಮಂಜೂರಾಗಿದ್ದು ಹಿಂದಿನ ಸರ್ಕಾರದಲ್ಲಿ. ಜಕ್ಕಲಮಡಗು ಯೋಜನೆ ಜಾರಿಯಲ್ಲಿ ಹಾಲಿ ಶಾಸಕರ ಪಾತ್ರ ಏನೂ ಇಲ್ಲ. ಹಲವು ಯೋಜನೆಗಳು ಶಂಕುಸ್ಥಾಪನೆಗೊಂಡಿದ್ದರೂ, ಅದಕ್ಕೆ ಮತ್ತೆ ಶಿಲಾನ್ಯಾಸ ಮಾಡಿ ಪ್ರಚಾರ ಪಡೆಯುತ್ತಿದ್ದಾರೆ. ಪ್ರವಾಸಿ ಮಂದಿರ, ರಸ್ತೆಗಳು, ಕೊಳಗೇರಿ ಅಭಿವೃದ್ಧಿ, ಮಹಿಳಾ ಕಾಲೇಜು ಸೇರಿದಂತೆ ಅಭಿವೃದ್ಧಿ ಯೋಜನೆಗಳ ದೊಡ್ಡ ಪರ್ವವೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ಅದು ಪೂರ್ಣಗೊಂಡಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂದ ಮಾತ್ರಕ್ಕೆ ಅದು ಅವರ ಸಾಧನೆಯಲ್ಲ. ಈ ಬಗೆಯ ವರ್ತನೆ ಸರಿಯಲ್ಲ ಎಂದರು.
ಪ್ರಶ್ನಿಸಬೇಕಿದೆ: ಹೈಟೆಕ್ ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ನಗರಕ್ಕೆ ಆಗಬೇಕಿರುವ ಯೋಜನೆಗಳು ಯಾವ ಹಂತದಲ್ಲಿವೆ. ಎಷ್ಟರ ಮಟ್ಟಿಗೆ ಪ್ರಗತಿಯಲ್ಲಿದೆ ಎಂಬುದನ್ನು ಶಾಸಕರು ಹೇಳಲಿ ಎಂದ ಅವರು, ಇಲ್ಲಿಯವರೆಗೆ ಶಾಸಕರ ವಿರುದ್ಧ ಮಾತನಾಡದೆ ಅವರ ಕಾರ್ಯಯೋಜನೆಗಳನ್ನು ವೀಕ್ಷಿಸುತ್ತಾ ಬಂದಿದ್ದೇನೆ. ವರ್ಷವಾದರೂ ಅವರು ಪ್ರಜ್ಞಾವಂತಿಕೆ ಪ್ರದರ್ಶಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಪ್ರಶ್ನಿಸುವಂತಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬಿಜೆಪಿ ಬೆಂ.ಗ್ರಾ.ಜಿಲ್ಲಾಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಮುಖಂಡರಾದ ಜೋ.ನಾ.ಮಲ್ಲಿಕಾರ್ಜುನ್, ಮುನಿರಾಮೇಗೌಡ, ಕೆ.ಮೋಹನ್ಕುಮಾರ್, ಎಚ್.ಎಸ್.ಶಿವಶಂಕರ್, ಪುಷ್ಪಾಶಿವಶಂಕರ್, ವತ್ಸಲ, ಕಂಬಿ ನಂಜಪ್ಪ, ವೆಂಕಟರಾಜು, ಡಿ.ಎಲ್.ಸತ್ಯನಾರಾಯಣ್,ಮುತ್ತಣ್ಣ ಮತ್ತಿತರರು ಹಾಜರಿದ್ದರು.
ಚುನಾವಣಾ ಅಕ್ರಮ: ಆಯೋಗಕ್ಕೆ ದೂರು
ದೊಡ್ಡಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 225ರಲ್ಲಿ ವ್ಯಾಪಕ ಚುನಾವಣಾ ಅಕ್ರಮ ನಡೆದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಇಲ್ಲಿ ಬಿಜೆಪಿಗೆ 5, ಜೆಡಿಎಸ್ಗೆ 4 ಮತ್ತು ಕಾಂಗ್ರೆಸ್ಗೆ 350ಕ್ಕೂ ಹೆಚ್ಚು ಮತಗಳು ಬಂದಿವೆ. ಇಲ್ಲಿ ಒಬ್ಬರೇ ವ್ಯಕ್ತಿ ತನ್ನ ಪ್ರಭಾವ ಬಳಸಿ ಅವಕಾಶ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಕಾರ್ಯಕರ್ತರಿಂದ ಕೇಳಿ ಬಂದಿವೆ. ಹೀಗಾಗಿ ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿಯಿಂದ ಮಂಗಳವಾರ ದೂರು ಸಲ್ಲಿಸಲಾಗುತ್ತಿದೆ ಎಂದು ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ತಿಳಿಸಿದರು.
ಶಿಸ್ತು ಕ್ರಮ: ತಾಲೂಕು ಪಂಚಾಯಿತಿಯ ಮುಂದಿನ ಅವಧಿಯ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿಯ 12 ಸದಸ್ಯರಿದ್ದು, 5 ಮಂದಿ ವಿವಿಧ ಬಗೆಯ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದು, ಪಕ್ಷದಿಂದ ಹೊರಗಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪಕ್ಷದ ವರಿಷ್ಠರ ಸಲಹೆ ಕೇಳಲಾಗಿದೆ. ಈ ಬಗ್ಗೆ ಕೂಡ ಗಂಭೀರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಎಚ್ಡಿಕೆಯಿಂದ ಬಿಜೆಪಿ ಸೋಲು
ಕ್ಷೇತ್ರದಲ್ಲಿ ಪರಾಜಿತ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯಿಂದಾಗಿ ಬಿಜೆಪಿ ಅಭ್ಯರ್ಥಿ ಸೋಲುವಂತಾಯಿತು. ಇದೊಂದು ವ್ಯವಸ್ಥಿತ ರಾಜಕಾರಣ. ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬರುವ ಅಗತ್ಯ ಇರಲಿಲ್ಲ. ಆದಾಗ್ಯೂ ಬಚ್ಚೇಗೌಡರು ತೀವ್ರ ಪ್ರತಿಸ್ಪರ್ಧೆ ನೀಡಿ ಸೋತಿದ್ದಾರೆ. ಇಡೀ ದೇಶದಲ್ಲಿ ಬಿಜೆಪಿ ಇರುವಾಗ ಇಲ್ಲೂ ನಮ್ಮ ಅಭ್ಯರ್ಥಿ ಗೆದ್ದಿದ್ದರೆ ಉತ್ತಮ ಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದವು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

