ಬೆಂಗಳೂರು ನಗರ

ನೋಂದಣಿಗೆ ಬುನಾದಿ

Published On :

ಬೆಂಗಳೂರು: ನಿರೀಕ್ಷಿತ ಪ್ರಮಾಣದಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಆಗದ ಕಾರಣ ಈ ಕಾರ್ಯಕ್ಕಾಗಿ ಮೂರು ತಿಂಗಳ ಕಾರ್ಯಾಚರಣೆ ನಡೆಸಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ.
ಇದಕ್ಕಾಗಿ ಪ್ರತಿ ಜಿಲ್ಲೆಗೆ ಒಂದು ಹಾಗೂ ಬೆಂಗಳೂರಿಗೆ ನಾಲ್ಕು ಸಂಚಾರಿ ನೋಂದಣಿ ವಾಹನಗಳನ್ನು ಒದಗಿಸಲಿದೆ. ಈ ವಾಹನಗಳಲ್ಲಿ ಇಲಾಖೆ ಸಿಬ್ಬಂದಿ ಜತೆಗೆ ಕಟ್ಟಡ ಕಾರ್ಮಿಕರ ವಯಸ್ಸು ನಿರ್ಧರಿಸಲು ವೈದ್ಯರನ್ನೂ ನೇಮಿಸಲಾಗುತ್ತದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರೇಷ್ಮೆ ಮತ್ತು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ, ಎಲ್ಲಾ ಕಟ್ಟಡ ಕಾರ್ಮಿಕರನ್ನೂ ನೋಂದಣಿ ಮಾಡಿಸಿಕೊಂಡು ಅವರಿಗೆ ಇಲಾಖೆಯ ಸವಲತ್ತುಗಳನ್ನು ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದು, 2.45 ಲಕ್ಷ ಮಂದಿ ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 14,600 ಮಂದಿ ಸುಮಾರು 8.14 ಕೋಟಿ ನೆರವು ಪಡೆದುಕೊಂಡಿದ್ದಾರೆ. ಅಂದರೆ, ಬಹುತೇಕರು ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ಎಲ್ಲಾ ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಿಸಿ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರು 25 ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ನಂತರ ಪ್ರತಿ ಮೂರು ವರ್ಷಕ್ಕೊಮ್ಮೆ ನೋಂದಣಿಯೊಂದಿಗೆ 150 ಪಾವತಿಸಬೇಕು. ಅಂತಹ ಕಾರ್ಮಿಕರಿಗೆ ಒಳರೋಗಿ ಸಹಾಯಧನ, ಅಪಘಾತ ಪರಿಹಾರ, ಅಂಗವಿಕಲತೆ ಪರಿಹಾರ, ಪ್ರಮುಖ ಕಾಯಿಲೆಗಳಿಗೆ ಚಿಕಿತ್ಸಾ ನೆರವು, ಅಂಗವಿಕಲತೆ ಪಿಂಚಣಿ, ಅಂತ್ಯಕ್ರಿಯೆ ಮತ್ತು ಅನುಗ್ರಹ ರಾಶಿ, ಹೆರಿಗೆ ಸೌಲಭ್ಯ, ಮಕ್ಕಳಿಗೆ ಶೈಕ್ಷಣಿಕ ಸಹಾಯ ದೊರೆಯಲಿದೆ ಎಂದು ವಿವರಿಸಿದರು.
ನೋಂದಣಿ ಮಾಡಿಸಿದವರೊಂದಿಗೆ ನೋಂದಣಿ ಮಾಡಿಸಿಕೊಳ್ಳದವರಿಗೂ ಕೆಲವು ಸೌಲಭ್ಯ ಒದಗಿಸಲಾಗಿದೆ. ನೆರವಿನ ಮೊತ್ತವನ್ನು ಹೆಚ್ಚಿಸಲಾಗಿದೆ. ಮನೆ ಕಟ್ಟಲು 50 ಸಾವಿರವರೆಗೆ ನೆರವು ಒದಗಿಸಲಾಗುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಪೂರ್ಣಪ್ರಮಾಣದಲ್ಲಿ ಪಡೆಯಬೇಕಾದರೆ ನೋಂದಣಿ ಕಡ್ಡಾಯ ಎಂದರು.
ಇಲಾಖೆಗಳ ನೆರವು: ಇದುವರೆಗೆ ಕಾರ್ಮಿಕ ಸಂಘಟನೆಗಳು, ಎನ್‌ಜಿಓಗಳ ಮೂಲಕ ಮತ್ತು ಕಾರ್ಮಿಕ ಇನ್ಸ್‌ಪೆಕ್ಟರ್‌ಗಳ ಮೂಲಕ ಮಾತ್ರ ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆಗಳ ನೆರವನ್ನು ಇದಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಮಿಕರ ನೋಂದಣಿ ಕುರಿತಂತೆ ಈಗಾಗಲೇ ಮೆಟ್ರೋ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವವರು ಈ ಸಂದರ್ಭದಲ್ಲಿ ಗುತ್ತಿಗೆದಾರರ ಮೂಲಕ ಕಾರ್ಮಿಕರನ್ನು ನೋಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಕಾರ್ಮಿಕರನ್ನು ನೋಂದಣಿ ಮಾಡಿಸದೇ ಇದ್ದರೆ ಅಂತಹ ಗುತ್ತಿಗೆದಾರರ ಗುತ್ತಿಗೆ ರದ್ದುಪಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.