23 ಸಾವಿರ ದಿನಗೂಲಿ ನೌಕರರು ಕಾಯಂ
ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ದಿನಗೂಲಿ ನೌಕರರಿಗೊಂದು ಸಿಹಿ ಸುದ್ದಿ. ಸುಮಾರು 23 ಸಾವಿರ ದಿನಗೂಲಿ ನೌಕರರನ್ನು ಕಾಯಂಗೊಳಿಸುವ ಮಸೂದೆಗೆ ರಾಜ್ಯಪಾಲರಿಂದ ಅಂಕಿತ ದೊರಕಿದೆ.
ಇದನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸಮಾರಂಭವೊಂದರಲ್ಲಿ ಪ್ರಕಟಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಚುನಾಯಿತ ಪ್ರತಿನಿಧಿಗಳ ಸಮಾವೇಶ ಹಾಗೂ ಸಕಾಲ ಯೋಜನೆಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗಾವಿ ಅಧಿವೇಶನದಲ್ಲಿ ಮಂಜೂರಾಗಿದ್ದ ವಿವಿಧ ಇಲಾಖೆಯ ದಿನಗೂಲಿ ನೌಕರರನ್ನು ಕಾಯಂಗೊಳಿಸುವ ಮಸೂದೆಗೆ ರಾಜ್ಯಪಾಲರ ಅಂಕಿತ ದೊರಕಿದ್ದು, ಅದೀಗ ಕಾಯ್ದೆಯಾಗಿ ರೂಪುಗೊಳ್ಳಲಿದೆ. ಇದರಿಂದ ದಿನಗೂಲಿ ನೌಕರರಿಗೆ ಸೇವಾ ಭದ್ರತೆ ದೊರೆಯುತ್ತದೆ ಎಂದರು.
ತಾವು ಸಚಿವರಾಗಿದ್ದ ಅವಧಿಯಲ್ಲೇ ಈ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದೆ. ಆದರೆ, ಕೆಲ ಕಾನೂನು ತೊಡಕುಗಳು ಹಾಗೂ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದು ನೆನೆಗುದಿಗೆ ಬಿದ್ದಿತ್ತು. ಆದರೆ, ತಾವು ಮುಖ್ಯಮಂತ್ರಿ ಹುದ್ದೆಗೇರಿದ ಮೇಲೆ ಹಠ ಹಿಡಿದು ಈ ಕಾಯ್ದೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು.
ಸರ್ಕಾರಿ ನೌಕರರಿಗೆ ಪ್ರಶಸ್ತಿ: ತಮ್ಮ ಸರ್ಕಾರ ಬಂದ ಮೇಲೆ ಸರ್ಕಾರಿ ನೌಕರರಿಗೆ ಉತ್ತಮ ಸೌಲಭ್ಯ ಒದಗಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದು, ಪ್ರಥಮ ಬಾರಿಗೆ ಉತ್ತಮ ಸೇವೆ ನೀಡಿದ ನೌಕರರಿಗೆ ಸೇವಾ ಪುರುಷೋತ್ತಮ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಕಾರ್ಯಾಂಗದ ಪ್ರಮುಖ ಅಂಗವಾಗಿರುವ ಸರ್ಕಾರಿ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಹಾಗೂ ತನ್ಮೂಲಕ ಸರ್ಕಾರವನ್ನು ಯಶಸ್ವಿಗೊಳಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರ ಮಹತ್ವದ್ದು ಎಂದರು.
ಶೇ.98ರಷ್ಟು ಯಶಸ್ವಿ: ಜನಸಾಮಾನ್ಯರಿಗೆ ಸುಲಭದಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಪ್ರಾರಂಭಿಸಿದ್ದ ಸಕಾಲ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು, ನಾಗರಿಕರು ಇದರ ಲಾಭ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಸಕಾಲದಲ್ಲಿ 1.63 ಕೋಟಿ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಶೇ.98ರಷ್ಟು ಅರ್ಜಿಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ. ಇಷ್ಟರಲ್ಲಿ ಕೇವಲ ಶೇ.5ರಿಂದ ಶೇ6ರಷ್ಟು ಅರ್ಜಿಗಳನ್ನು ಮಾತ್ರ ತಿರಸ್ಕರಿಸಲಾಗಿದೆ. ಇದು ಉತ್ತಮ ಬೆಳವಣಿಗೆ ಎಂದರು.
ಸಕಾಲ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ಮಾತನಾಡಿದ ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ದೇಶದಲ್ಲೇ ಅತ್ಯುತ್ತಮ ಯೋಜನೆಯಾಗಿ ಸಕಾಲ ಹೊರಹೊಮ್ಮಿರುವುದು ಉತ್ತಮ ಸಂಗತಿ. ಇದನ್ನು ಇನ್ನಷ್ಟು ಉತ್ತಮಗೊಳಿಸುವುದು ಸರ್ಕಾರಿ ನೌಕರರ ಕೈಯಲ್ಲಿದೆ.
ವಸತಿ ಸಚಿವ ವಿ.ಸೋಮಣ್ಣ, ಸಂಘದ ಅಧ್ಯಕ್ಷ ಎಲ್.ಭೈರಪ್ಪ, ಗೌರವಾಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಉಪಸ್ಥಿತರಿದ್ದರು.
ಬೇಡಿಕೆಗಳ ಕುರಿತು ಚರ್ಚೆಯ ಭರವಸೆ
2012ರ ಜನವರಿಯಿಂದಲೇ ಪರಿಷ್ಕೃತ ವೇತನವನ್ನು ಜಾರಿಗೊಳಿಸಬೇಕು. ಸಕಾಲ ಯೋಜನೆಗೆ ಸೂಕ್ತ ಸಿಬ್ಬಂದಿಯ ನೇಮಕ, ಮಾಹಿತಿ ಹಕ್ಕಿನಲ್ಲಿ ಅನಗತ್ಯ ಮಾಹಿತಿ ಕೋರಿ ತೊಂದರೆ ನೀಡುವರ ವಿರುದ್ಧ ಕ್ರಮ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಭದ್ರತೆ, ಮನೆ ಬಾಡಿಗೆಯ ಭತ್ಯೆ ಹೆಚ್ಚಳ, ಜ್ಯೋತಿ ಸಂಜೀವಿನಿ ಯೋಜನೆ ಅನುಷ್ಠಾನ, ಅಗತ್ಯವಿರುವ ಎಲ್ಲಾ ಜಿಲ್ಲೆಗಳಿಗೂ ಗಿರಿ ಭತ್ಯೆ ಯೋಜನೆ ವಿಸ್ತರಣೆ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1 ಲಕ್ಷ ಹುದ್ದೆಗಳ ಭರ್ತಿ, ಗ್ರಾಮೀಣ ಭತ್ಯೆ ಸೇರಿದಂತೆ ಸಂಘದ ಬೇಡಿಕೆಗಳ ಕುರಿತು ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪ್ರತಿಕ್ರಯಿಸಲು ನಿರಾಕರಿಸಿದ ಮುಖ್ಯಮಂತ್ರಿಗಳು, ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

