ಎಂಡೋ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸದ ಪಕ್ಷಗಳು
ಬೆಂಗಳೂರು: ರಾಜ್ಯದ ಎಲ್ಲಾ ಪ್ರಮುಖ ಪಕ್ಷಗಳು ಎಂಡೋಸಂತ್ರಸ್ತರ ಬೇಡಿಕೆಗಳ ಕುರಿತು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು ಎಂದು ಎಂಡೋ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಅವರು, ಎಂಡೋ ಸಂತ್ರಸ್ತರಿಗೆ ಈ ವೆರೆಗೂ ಸೂಕ್ತ ಪರಿಹಾರ ದೊರೆತಿಲ್ಲ. ದಕ್ಷಿಣಕನ್ನಡದಲ್ಲಿ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಈ ಪ್ರದೇಶದಿಂದ ವಿವಾಹವಾಗಿ ಹೊರಹೋದ ಕುಟುಂಬಗಳಲ್ಲಿ ಎಂಡೋ ಪೀಡಿತರನ್ನು ಗುರುತಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5231 ಎಂಡೋ ಪೀಡಿತರಿದ್ದಾರೆ ಎಂದು ಈ ಸಮೀಕ್ಷೆ ತಿಳಿಸಿದೆ. ಆದರೆ ಇದೇ ಇಲಾಖೆ ನಡೆಸಿದ ತಜ್ಞವೈದ್ಯಕೀಯ ಶಿಬಿರದಲ್ಲಿ 1906 ಜನರನ್ನು ಮಾತ್ರ ಎಂಡೋ ಸಂತ್ರಸ್ತರೆಂದು ಗುರುತಿಸಲಾಗಿದೆ. ಆರೋಗ್ಯ ಇಲಾಖೆ ಎಂಡೋ ಪೀಡಿತರನ್ನು ಪರೀಕ್ಷಿಸುತ್ತಿರುವ ರೀತಿಯೂ ಉತ್ತಮವಾಗಿಲ್ಲ. ಈ ಪ್ರದೇಶದ ಮಹಿಳೆಯರು ಗರ್ಭಧರಿಸಲು ಯೋಗ್ಯರಾಗಿದ್ದಾರೆ ಅಥವಾ ಇಲ್ಲ ಎಂಬುದನ್ನು ಸರಿಯಾಗಿ ಪರೀಕ್ಷಿಸುತ್ತಿಲ್ಲ ಎಂದರು.
ರಾಜ್ಯದಲ್ಲಿರುವ ಎಂಡೋ ಸಂತ್ರಸ್ತರನ್ನು ರಾಜ್ಯ, ಕೇಂದ್ರ ಸರ್ಕಾರಗಳು ಹಾಗೂ ರಾಷ್ಟ್ರ ಮಾನವ ಹಕ್ಕುಗಳ ಆಯೋಗ ಮಲತಾಯಿ ಧೋರಣೆಯಿಂದ ನೋಡುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇರಳ ಸರ್ಕಾರಕ್ಕೆ ಎಂಡೋ ಸಂತ್ರಸ್ತರಿಗೆ 5ಲಕ್ಷ ಪರಿಹಾರ ಹಾಗೂ ಮಾಸಾಶನ ನೀಡುವಂತೆ ಆದೇಶಿಸಿದೆ. ಆದರೆ ನಾವು ಎಷ್ಟೇ ಮನವಿ ಸಲ್ಲಿಸಿದರೂ ನಮ್ಮ ರಾಜ್ಯ ಸರ್ಕಾರಕ್ಕೆ ಯಾವುದೇ ಸೂಚನೆ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.
ರಾಜ್ಯ ಸರ್ಕಾರ ಎಂಡೋ ಸಂತ್ರಸ್ತರಿಗೆ ಕೇವಲ ವಿಕಲಚೇತನರು ಎಂಬ ಪ್ರಮಾಣ ಪತ್ರ ನೀಡುತ್ತಿದೆ. ಆದರೆ ವಿಕಲಚೇತನರಾಗುವುದನ್ನು ತಪ್ಪಿಸಲು ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪ್ರತಿ ಸಂತ್ರಸ್ತರಿಗೆ ತಲಾ 5ಲಕ್ಷ ಪರಿಹಾರ ಮತ್ತು ಪ್ರತಿ ತಿಂಗಳು 5ಸಾವಿರ ಪಿಂಚಣಿ ನೀಡಬೇಕು. ಪ್ರತಿ ತಾಲೂಕಿಗೊಂದು ಶಾಶ್ವತ ಪುನರ್ವಸತಿ ಕೇಂದ್ರ ಮತ್ತು 5 ಗ್ರಾಮಗಳಿಗೊಂದು ಸುಸಜ್ಜಿತ ಡೇ ಕೇರ್ ಸೆಂಟರ್ ಸ್ಥಾಪಿಸಬೇಕು. ಅವಿವಾಹಿತರಿಗೆ ವಂಶವಾಹಿ ಪರೀಕ್ಷೆ ಮತ್ತು ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್, ಸಂತ್ರಸ್ತರ ಮನೆಗೊಂದು ಉದ್ಯೋಗ, ವಿಕಲಚೇತನರಿಗೆ ಸಲಕರಣೆಗಳು ಮತ್ತು ನಿರಂತರ ಕೌಶಲ್ಯವೃದ್ಧಿಗೆ ತರಬೇತಿ ನೀಡುವಂತಹ ಎಂಡೋ ಸಂತ್ರಸ್ತರ ಅಭಿವೃದ್ಧಿಪರ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವಂತೆ ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಟಿ ಶುಭಾ ಪೂಂಜಾ ಹಾಗೂ ನಟ ಚೇತನ್ ಭಾಗವಹಿಸಿ ಎಂಡೋ ಸಂತ್ರಸ್ತರಿಗೆ ಸರ್ಕಾರ ಮಾತ್ರವಲ್ಲದೇ ಎಂಡೋ ಸಲ್ಫಾನ್ ತಯಾರಿಸುವ ಕಂಪನಿಗಳೂ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

