ಖಾಸಗಿ ಇಕ್ಕಟ್ಟಿಗೆ ಸರ್ಕಾರದ ಚೌಕಟ್ಟು
ಬೆಂಗಳೂರು: ಖಾಸಗಿ ಕಾಲೇಜುಗಳ ದರ್ಬಾರ್‌ಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.
ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಎಷ್ಟೇ ಹಠ ಸಾಧಿಸಿದರೂ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಕಾಯಿದೆ ಮೂಲಕವೇ ಅದನ್ನು ನಿಯಂತ್ರಿಸಲು ಮುಂದಾಗಿದೆ. ಈ ಮೂಲಕ ಕಳೆದ 7 ವರ್ಷಗಳಿಂದ ಕೇವಲ ಕಾಗದದಲ್ಲೇ ಉಳಿದಿದ್ದ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆಯನ್ನು ಜಾರಿಮಾಡಲು ಚಿಂತನೆ ನಡೆಸಿದೆ. ಈ ಮೂಲಕ ವೃತ್ತಿಪರ ಕೋರ್ಸ್‌ಗಳ ಶೇ.100 ಸೀಟುಗಳ ಮೇಲೂ ನಿಯಂತ್ರಣ ಸಾಧಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಚುನಾವಣೆ ವರ್ಷದಲ್ಲಿ ಶುಲ್ಕ ಹೆಚ್ಚಳದ ಪ್ರಸ್ತಾಪವಿಟ್ಟರೆ, ಇರುವ ಸೀಟುಗಳನ್ನು ಕಿತ್ತುಕೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಶೇ.50 ಸೀಟು ಮೀಸಲು ದೊರೆಯುತ್ತದೆ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಸೀಟುಗಳೇ ಇರುವುದಿಲ್ಲ. ಎಲ್ಲ ಸೀಟುಗಳಿಗೂ ನ್ಯಾ.ಪದ್ಮರಾಜ್ ವರದಿಯ ಪ್ರಕಾರವೇ ಶುಲ್ಕ ನಿಗದಿಯಾಗಲಿದೆ.
ಏನಿದು ನಿಯಂತ್ರಣ ಕಾಯಿದೆ?: ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆಯು ರಾಜ್ಯಕ್ಕೆ ಹೊಸತಲ್ಲ. 2006ರಲ್ಲಿ ಟಿ.ಎನ್.ಚತುರ್ವೇದಿ ಅವರು ರಾಜ್ಯಪಾಲರಾಗಿದ್ದಾಗ ಈ ಕಾಯಿದೆಗೆ ಅನುಮೋದನೆ ನೀಡಿದ್ದರು. ವಿಚಿತ್ರವೆಂದರೆ 2006ರಿಂದ 2012ರವರೆಗೆ ನಡೆದ 6 ಪ್ರವೇಶ ಪ್ರಕ್ರಿಯೆಯ ಸಂದರ್ಭದಲ್ಲಿ ಈ ಕಾಯಿದೆಯನ್ನು ಜಾರಿಗೆ ತರುವ ಪ್ರಯತ್ನ ಮಾಡಿರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಹಾಗೂ ಖಾಸಗಿ ಕಾಲೇಜುಗಳು ಸಹಿ ಹಾಕಿ ಸಲ್ಲಿಸುತ್ತಿದ್ದ ಒಪ್ಪಂದದ ಪ್ರಮಾಣಪತ್ರದಲ್ಲಿ ಇದರ ಪ್ರಸ್ತಾಪವನ್ನೇ ಮಾಡುತ್ತಿರಲಿಲ್ಲ. ಮತ್ತೊಂದು ನಗೆಪಾಟಲಿನ ವಿಷಯವೆಂದರೆ ಕಾಯಿದೆಯನ್ನು ಅನುಷ್ಠಾನಕ್ಕೆ ತಂದರೆ ಪ್ರತಿ ವರ್ಷ ನಡೆಯುತ್ತಿರುವ ಒಪ್ಪಂದದ ನಾಟಕಗಳೇ ಇರುವುದಿಲ್ಲ. ಇಲಾಖೆಯಲ್ಲಿ ಈ ಕಾಯಿದೆ ಜಾರಿಗೆ ತರಲು ಒತ್ತಾಯಿಸಿದ ಯಾವೊಬ್ಬ ಅಧಿಕಾರಿಯನ್ನೂ ಉಳಿಸಿಕೊಳ್ಳಲಾಗಿಲ್ಲ ಅಂದರೆ, ಇದರ ಜಾರಿ ತಡೆಯುವ ಲಾಬಿ ಎಷ್ಟು ಪ್ರಬಲವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ.
ರಾಜ್ಯದಲ್ಲಿನ ಎಲ್ಲ ವೃತ್ತಿಪರ ಕಾಲೇಜುಗಳ ನಿಯಂತ್ರಣಕ್ಕಾಗಿ ಈ ಕಾಯಿದೆ ಜಾರಿಗೆ ತರಲಾಗಿದೆ. ಪ್ರವೇಶ ಪರೀಕ್ಷೆ, ಸೀಟು ಹಂಚಿಕೆ, ಪ್ರವೇಶ ಪ್ರಕ್ರಿಯೆ ಹಾಗೂ ಶುಲ್ಕದ ಬಗ್ಗೆ ವಿವರವಾಗಿ ಕಾನೂನಿಲ್ಲಿ ಹೇಳಲಾಗಿದೆ. ಇದು ರಾಜ್ಯದಲ್ಲಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳಿಗೆ ಅನ್ವಯವಾಗುತ್ತದೆ.
ಕಾಯಿದೆ ಪ್ರಕಾರ ಶೇ.50 ಸೀಟುಗಳು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಇನ್ನುಳಿದ ಶೇ.50 ಸೀಟುಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ ದೊರೆಯಲಿವೆ. ಇದರಲ್ಲಿ ಶೇ.15ರಷ್ಟು ಸೀಟಿನವರೆಗೆ ಎನ್‌ಆರ್‌ಐ ವಿದ್ಯಾರ್ಥಿಗಳಿಗೆ ನೀಡಬಹುದು.
ಪ್ರವೇಶ ಶುಲ್ಕಕ್ಕೂ ನಿಯಂತ್ರಣ: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ದುಪ್ಪಟ್ಟು ಮಾಡುವಂತೆ ಕಳೆದ 2 ಶೈಕ್ಷಣಿಕ ವರ್ಷಗಳಿಂದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಆದರೆ 2006ರಲ್ಲಿ ಜಾರಿಗೆ ಬಂದ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆಯಲ್ಲಿಯೇ ಶುಲ್ಕದ ಬಗ್ಗೆ ವಿವರವಾಗಿ ಹೇಳಲಾಗಿದೆ.
ಕಾಲೇಜಿನ ಸೌಕರ್ಯ, ಸ್ಥಳ, ಕೋರ್ಸ್ ಹಾಗೂ ಇತರ ಅಂಶಗಳನ್ನು ಗಮನಿಸಿ ಶುಲ್ಕ ನಿಗದಿ ಮಾಡಲಾಗುತ್ತದೆ. ಇದರ ಜವಾಬ್ದಾರಿಯನ್ನು ನ್ಯಾ.ಪದ್ಮರಾಜ್ ಆಯೋಗಕ್ಕೆ ನೀಡಲಾಗಿತ್ತು. ಈಗಾಗಲೇ ನ್ಯಾ.ಪದ್ಮರಾಜ್ ಆಯೋಗದ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆ ವರದಿ ಪ್ರಕಾರ ರಾಜ್ಯದ ಒಟ್ಟು ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಸುಮಾರು 10 ಕಾಲೇಜುಗಳ ಶುಲ್ಕದಲ್ಲಿ ಮಾತ್ರ ದೊಡ್ಡ ಪ್ರಮಾಣದ ಬದಲಾವಣೆಯಾಗಲಿದೆ. ಆದರೆ ಉಳಿದ ಕಾಲೇಜುಗಳ ಶುಲ್ಕ ಪ್ರಸ್ತುತ ಸಿಇಟಿ ಶುಲ್ಕದ ಆಸುಪಾಸಿನಲ್ಲಿಯೇ ಇರುತ್ತದೆ. ಶೇ.30ಕ್ಕೂ ಅಧಿಕ ಕಾಲೇಜುಗಳ ಶುಲ್ಕ 35 ಸಾವಿರಕ್ಕೂ ಕಡಿಮೆಯಾಗಲಿದೆ.
ನ್ಯಾ.ಪದ್ಮರಾಜ್ ಆಯೋಗ ವರದಿ ಅನುಷ್ಠಾನ
ಒಂದೊಮ್ಮೆ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಹಾಗೂ ಶುಲ್ಕ ನಿಗದಿ ಕಾಯಿದೆ ಅನುಷ್ಠಾನ ಸಾಧ್ಯವಾಗದಿದ್ದರೆ ಕಾಲೇಜುಗಳ ನಿಯಂತ್ರಣಕ್ಕೆ ನ್ಯಾ.ಪದ್ಮರಾಜ್ ಆಯೋಗ ವರದಿ ಜಾರಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆಯೋಗದ ವರದಿ ಅನುಷ್ಠಾನ ಕೋರಿ ಖಾಸಗಿ ಕಾಲೇಜುಗಳು ಮೊದಲ ಹಂತದಲ್ಲಿ ಕಾನೂನು ಹೋರಾಟ ನಡೆಸಿದ್ದವು. ಆದರೆ ವರದಿಯಲ್ಲಿನ ಕೆಲ ಅಂಶಗಳು ಬಹಿರಂಗವಾದ ಬಳಿಕ ಅನುಷ್ಠಾನ ವಿಷಯದಿಂದಲೇ ಕಾಲೇಜು ಆಡಳಿತ ಮಂಡಳಿಗಳು ವಿಮುಖವಾದವು. ಮತ್ತೊಂದು ಪ್ರಮುಖ ವಿಷಯವೆಂದರೆ ಕಾಯಿದೆ ಅನುಷ್ಠಾನಕ್ಕೆ ನ್ಯಾ.ಪದ್ಮರಾಜ್ ಆಯೋಗದ ವರದಿ ಜಾರಿಗೆ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಳ್ಳುವುದು ಅನಿವಾರ್ಯ.
ಶಿಕ್ಷಣ ಲಾಬಿ ಸಾಬೀತು!
ಕಳೆದ 6 ಶೈಕ್ಷಣಿಕ ವರ್ಷಗಳ ಪ್ರವೇಶ ಪ್ರಕ್ರಿಯೆ ಮೇಲೆ ಶಿಕ್ಷಣ ಲಾಬಿ ಕೆಲಸ ಮಾಡಿರುವುದು ಈಗ ಸಾಬೀತಾಗಿದೆ. ಚುನಾವಣೆ ಬಂದ ಕೂಡಲೇ ಮತಬ್ಯಾಂಕ್ ಉಳಿಸಿಕೊಳ್ಳಲು 7 ವರ್ಷದ ಹಿಂದೆ ರೂಪುಗೊಂಡ ಕಾಯಿದೆಯನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ವಿಚಿತ್ರವೆಂದರೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಈ ಕಾಯಿದೆ ರೂಪುಗೊಂಡಿತ್ತು. ಆದರೆ ಕಳೆದ 7 ವರ್ಷಗಳಿಂದ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಖಾಸಗಿ ಕಾಲೇಜುಗಳು ಅದೇ ಸುಪ್ರೀಂಕೋರ್ಟ್‌ಗೆ ವಿಷಯ ಮರೆ ಮಾಚಿ ಪ್ರವೇಶ ಪ್ರಕ್ರಿಯೆಯ ಒಪ್ಪಂದಕ್ಕೆ ಸಹಿ ಹಾಕುತ್ತಿವೆ. ಆದರೆ ಇದಕ್ಕೆ ರಾಜ್ಯ ಸರ್ಕಾರ ಕಾರಣ ನೀಡಿದ್ದು ವಿದ್ಯಾರ್ಥಿಗಳ ಹಿತಾಸಕ್ತಿ ಎಂಬ ನೆಪ. ಚುನಾವಣೆ ಹಿತಾಸಕ್ತಿಯ ವಿಷಯ ಬಂದಾಗ ವಿದ್ಯಾರ್ಥಿಗಳ ಹಿತಾಸಕ್ತಿಗಳು ಬದಲಾಗುತ್ತವೆಯೇ?
- ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

