ಪರಿಶಿಷ್ಟರ ಕಲ್ಯಾಣ ಅನುದಾನ ಪುನರ್ ಹಂಚಿಕೆಗೆ ಪಾಲಿಕೆ ಚಿಂತನೆ
ಬೆಂಗಳೂರು: ಪರಿಶಿಷ್ಟ ಜಾತಿ,್ತ ವರ್ಗಗಳ ಕಲ್ಯಾಣ ಅನುದಾನವನ್ನು ಪುನರ್ ಹಂಚಿಕೆ ಮಾಡುವ ಬಗ್ಗೆ ಪಾಲಿಕೆ ಚಿಂತನೆ ನಡೆಸಿದೆ.
ಬುಧವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಭಾರೀ ಗದ್ದಲವೇ ನಡೆದು, ಹಂಚಿಕೆಯಾಗಿರುವ ಅನುದಾನ ವಾಪಸ್ ಪಡೆದು ಪುನರ್ ಹಂಚಿಕೆ ಮಾಡುವ ಬಗ್ಗೆ ಚರ್ಚಿಸಲಾಯಿತು. ಅಷ್ಟೇ ಅಲ್ಲ, ಮೇಯರ್ ಮತ್ತು ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಿ, ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ನಿರ್ಣಯ ಮಾಡಲು ತೀರ್ಮಾನಿಸಲಾಯಿತು.
ಬಿಜೆಪಿಯ ಡಾ. ರಾಜು, ಜೆಡಿಎಸ್ನ ತಿಮ್ಮೇಗೌಡ ಸೇರಿದಂತೆ ಅನೇಕ ಮಂದಿ ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣ ಕಾರ್ಯಕ್ರಮ (ಶೇ.22.75)ದಲ್ಲಿ ಫಲಾನುಭವಿಗಳಿಗೆ ಇನ್ನೂ ಸವಲತ್ತು ವಿತರಿಸಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಸಿದ್ದಯ್ಯ, ಪಾಲಿಕೆ ಕಲ್ಯಾಣ ಕಾರ್ಯಕ್ರಮಗಳಡಿ ಬಜೆಟ್ನಲ್ಲಿ ಪರಿಶಿಷ್ಟರಿಗೆ 523 ಕೋಟಿ, ಹಿಂದುಳಿದವರಿಗೆ 207 ಕೋಟಿ ಮೀಸಲಿಡಲಾಗಿದೆ. ಆದರೆ, ವಾಸ್ತವ ಬಜೆಟ್ ರೂಪಿಸದ ಕಾರಣ ಪ್ರಸಕ್ತ ಸಾಲಿನ ಬಜೆಟ್ ಗಾತ್ರ ಶೇ. 35ಕ್ಕೆ ಕುಸಿದಿದೆ. ಆದರೂ ಕಲ್ಯಾಣ ಕಾರ್ಯಕ್ರಮಗಳಿಗೆ 420 ಕೋಟಿ ವೆಚ್ಚವಾಗಿದೆ ಎಂದರು.
ಬಿಜೆಪಿಯ ಬಿ.ವಿ. ಗಣೇಶ್, ಹಾಗಾದರೆ ಇದು ಸಿಕ್ಕಿದವರಿಗೆ ಸೀರುಂಡೆ ರೀತಿ ಆಗಿದೆಯೋ? ಇದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಆಗ ಬಿಜೆಪಿಯ ಸೋಮಶೇಖರ್, ಈ ಯೋಜನೆಯಡಿ ಹಂಚಿಕೆಯಾಗಿರುವ ಅನುದಾನವನ್ನು ವಾಪಸ್ ಪಡೆದು ಎಲ್ಲರಿಗೂ ಸಮವಾಗಿ ಹಂಚಿಕೆ ಮಾಡಿ ಎಂದರು. ಹೌದು ಈ ಅನುದಾನವನ್ನು ಪುನರ್ ಹಂಚಿಕೆ ಮಾಡಬೇಕೆಂದು ಗಣೇಶ್ ಮತ್ತೆ ದನಿ ಎತ್ತಿದರು. ಇದಕ್ಕೆ ಜೆಡಿಎಸ್ನ ತಿಮ್ಮೇಗೌಡ, ಪ್ರಕಾಶ್ ದನಿಗೂಡಿಸಿ ಅನುದಾನ ಪುನರ್ ಹಂಚಿಕೆಗೆ ಒತ್ತಾಯಿಸಿದರು.
ಆದರೆ, ಕಾಂಗ್ರೆಸ್ನ ಮುನಿರತ್ನ ಇದನ್ನು ಬಲವಾಗಿ ವಿರೋಧಿಸಿದರು. ಬಡವರಿಗೆ, ಕೊಳಗೇರಿ ಜನರಿಗೆ ಮನೆ ನಿರ್ಮಿಸಲು ವೆಚ್ಚ ಮಾಡುತ್ತಿರುವುದಕ್ಕೆ ಅಡ್ಡಿ ಮಾಡುತ್ತಿದ್ದೀರಿ. ಹಾಗಿದ್ದರೆ, ಇದೊಂದು ಯೋಜನೆಯಲ್ಲ. ಉಳಿದ ಯೋಜನೆಗಳಲ್ಲೂ ವಾರ್ಡ್ವಾರು ಹಂಚಿಕೆಯಾಗಿರುವ ಅನುದಾನವನ್ನು ವಾಪಸ್ ಪಡೆದು ಪುನರ್ ಹಂಚಿಕೆ ಮಾಡಬೇಕು ಎಂದು ವಾದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅದರಲ್ಲೂ ಮುನಿರತ್ನ ಮತ್ತು ಸೋಮಶೇಖರ್ ನಡುವೆ ಏಕವಚನ ಪ್ರಯೋಗವಾಗಿ ಭಾರೀ ಗದ್ದಲವೇ ಉಂಟಾಗಿ ಸಭೆ ನಿಯಂತ್ರಣ ತಪ್ಪಿತು.
ಮಧ್ಯೆ ಪ್ರವೇಶಿಸಿದ ಮೇಯರ್ ವೆಂಕಟೇಶ್ಮೂರ್ತಿ, ಕಲ್ಯಾಣ ಕಾರ್ಯಕ್ರಮ ಅನುದಾನ ವಾರ್ಡ್ಗಳಿಗೆ ಸಮನಾಗಿ ಹಂಚಿಕೆಯಾಗಿರುವುದರಲ್ಲಿ ಸ್ಪಷ್ಟತೆ ಇಲ್ಲ. ಆದ್ದರಿಂದ ಆಯುಕ್ತರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವರದಿ ಸಿದ್ಧಪಡಿಸಲಾಗುತ್ತದೆ. ನಂತರ ಅದನ್ನು ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ರೂಲಿಂಗ್ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

