ಮಧುಸೂದನ್ರಿಂದ ಡಿಸಿಎಂ ಈಶ್ವರಪ್ಪಗೆ ಖಾರವಾದ ಪತ್ರ
ಬೆಂಗಳೂರು: ಮೈಸೂರಿನ ಭೂ ಹಗಣರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಕಾರಣಕ್ಕೆ ತಮ್ಮನ್ನು ಬಿಜೆಪಿ ರಾಜ್ಯ ವಕ್ತಾರ ಸ್ಥಾನದಿಂದ ವಿಮುಕ್ತಿಗೊಳಿಸಿದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ ಖಾರವಾದ ಪತ್ರ ಬರೆದಿರುವ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್, ಈ ಬಗ್ಗೆ ಆತ್ಮವಿಮರ್ಷೆ ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಭೂ ಹಗರಣದಲ್ಲಿ ಭಾಗಿಯಾದ ಆರೋಪಿಗೆ ಶಾಸನಾತ್ಮಕ ರಕ್ಷಣೆ ನೀಡಿರುವ ಸಚಿವ ರಾಮದಾಸ್ ಅವರ ನಡವಳಿಕೆಯಿಂದ ನಿಜವಾಗಲೂ ಪಕ್ಷಕ್ಕೆ ಮುಜುಗರವಾಗಬೇಕಿತ್ತು. ಆದರೆ, ಮೈಸೂರಿನ ಹಸಿರನ್ನು- ಉಸಿರನ್ನು ಮತ್ತು ಚಾಮುಂಡಿ ಮಾತೆಯ ಹಸಿರುಡುಗೆಯನ್ನು ರಕ್ಷಿಸಲು ನಾನು ಮಾಡಿದ ಭಾವನಾತ್ಮಕ ಪ್ರಯತ್ನವನ್ನು ಮುಜುಗರ ಎಂದು ಭಾವಿಸಿ, ನನ್ನನ್ನು ಹುದ್ದೆಯಿಂದ ಮುಕ್ತಗೊಳಿಸಿರುವುದು ನೈತಿಕವಾಗಿ ಮತ್ತು ನಮ್ಮ ಪಕ್ಷದ ಸಿದ್ಧಾಂತಗಳಿಗೆ ಎಷ್ಟು ಸರಿಹೊಂದುತ್ತದೆ ಎಂಬ ಬಗ್ಗೆ ಆತ್ಮವಿಮರ್ಷೆ ಮಾಡಿಕೊಳ್ಳಬೇಕು ಎಂದು ಪತ್ರದಲ್ಲಿ ಈಶ್ವರಪ್ಪ ಅವರನ್ನು ಕೋರಿದ್ದಾರೆ.
ತಮ್ಮ ಈ ನಡವಳಿಕೆಯಿಂದ ಕೊಂಚ ದುಃಖವಾದರೂ ಧೃತಿಗೆಡುವವನು ನಾನಲ್ಲ. ಹಾಗಾಗಿ ನಿರ್ಲಿಪ್ತವಾಗಿ, ನಿರ್ವಿಕಾರವಾಗಿ ರಾಜಿನಾಮೆ ಪತ್ರ ಸಲ್ಲಿಸುತ್ತಿದ್ದೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ. ಫೆ. 20ರಂದು ಗೋ. ಮಧುಸೂದನ್ ಅವರು ಈ ಪತ್ರವನ್ನು ಈಶ್ವರಪ್ಪ ಅವರಿಗೆ ಬರೆದಿದ್ದಾರೆ.
ಪತ್ರದ ಸಾರಾಂಶ: ಇಂದು (ಫೆ. 20) ಮಧ್ಯಾಹ್ನ ನಾನು ಆದಿಚುಂಚನಗಿರಿಯಲ್ಲಿದ್ದಾಗ ದೂರವಾಣಿ ಮೂಲಕ ಮಾತನಾಡಿ, ನನ್ನನ್ನು ರಾಜ್ಯ ವಕ್ತಾರ ಸ್ಥಾನದಿಂದ ವಿಮುಕ್ತಿಗೊಳಿಸುತ್ತಿರುವುದಾಗಿ ತಿಳಿಸಿರುತ್ತೀರಿ. ತಮ್ಮ ಆದೇಶವನ್ನು ಅತ್ಯಂತ ಗೌರವದಿಂದ ಸ್ವೀಕರಿಸಿದ್ದೇನೆ ಮತ್ತು ತಮ್ಮ ಕೆಲಸವನ್ನು ಹಗುರಗೊಳಿಸಲು ಈ ರಾಜಿನಾಮೆ ಪತ್ರವನ್ನು ಸಲ್ಲಿಸುತ್ತಿದ್ದೇನೆ.
ಚಾಮುಂಡಿ ಬೆಟ್ಟದ ತಪ್ಪಲಿನ ಭೂ ಹಗರಣದ ಬಗ್ಗೆ ಪ್ರಾದೇಶಿಕ ಆಯುಕ್ತರು ಸಲ್ಲಿಸಿದ್ದ ವರದಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಹಿಂದಿರುವ ಪ್ರಭಾವಿ ರಾಜಕಾರಣಿಗಳು ಮತ್ತು ಭೂಮಾಫಿಯಾಗಳನ್ನು ಪತ್ತೆಹಚ್ಚಲು ಸಿಬಿಐ ಇಲ್ಲವೇ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಈ ಹಿಂದೆ ಹಗರಣ ಬಯಲಾದ ಮರುದಿನವೇ ಕಂದಾಯ ಸಚಿವರಾದ ತಮಗೆ ಪತ್ರ ಬರೆದು, ಪ್ರಶ್ನಿತ ಜಮೀನು ಮಹಾರಾಜರ ಸ್ವಂತ ಆಸ್ತಿ ಎಂದು, ಅದನ್ನು ಮಹಾರಾಜರಿಗೆ ಒಪ್ಪಿಸುವುದು ಸೂಕ್ತ ಎಂದು ಮನವಿ ಸಲ್ಲಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಅವರ ಕೈವಾಡವಿದೆಯೇ ಎಂದು ಪತ್ರಕರ್ತರು ನನ್ನಲ್ಲಿ ಪ್ರಶ್ನಿಸಿದರು. ಆಗ ನಾನು ನಿರ್ದಿಷ್ಟ ದಾಖಲೆಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ. ಆದರೆ, ಸಚಿವರ ನಡವಳಿಕೆ ಪ್ರಶ್ನಾತೀತವಲ್ಲ ಎಂದು ನನ್ನ ಅಭಿಪ್ರಾಯ ತಿಳಿಸಿದೆ. ಉಳಿದ ಪ್ರಶ್ನೆಗಳಿಗೆ ಸಚಿವರಿಂದಲೇ ಸ್ಪಷ್ಟನೆ ಪಡೆಯಿರಿ ಎಂದು ಹೇಳಿದ್ದೆ.
ಬಹುಶಃ ಈ ಹಿನ್ನೆಲೆಯಲ್ಲಿ ತಮಗಾದ ಅವಮಾನವನ್ನು ರಾಮದಾಸ್ ಅವರು ತಮ್ಮಲ್ಲಿ ತೋಡಿಕೊಂಡು, ವಕ್ತಾರರಾಗಿ ನಾನೇ ಸಚಿವರ ವಿರುದ್ಧ ಹೇಳಿಕೆ ನೀಡಿರುವ ಬಗ್ಗೆ ದೂರು ನೀಡಿರುತ್ತಾರೆ ಎಂದು ನಂಬುತ್ತೇನೆ. ಅಲ್ಲದೆ ಜಿಲ್ಲಾಧಿಕಾರಿಯಾಗಿದ್ದ ವಸ್ತ್ರದ್ ಅವರನ್ನು ಕಂದಾಯ ಸಚಿವರಾದ ತಮ್ಮ ಆದೇಶದ ವಿರುದ್ಧ ಮೈಸೂರಿನಲ್ಲೇ ಉಳಿಸಿಕೊಂಡಿರುವುದು ನಿಮಗೆ ಗೊತ್ತಿರುವ ಸಂಗತಿ.
ಪ್ರಾದೇಶಿಕ ಆಯುಕ್ತರು ನೀಡಿರುವ ವರದಿಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನೀಡಿದ್ದ 10 ಪಿರ್ಯಾದಿ ಅರ್ಜಿಗಳು ಕಡತದಿಂದ ನಾಪತ್ತೆಯಾಗಿರುವ ಬಗ್ಗೆ ಗಂಭೀರವಾದ ಆರೋಪ ಮಾಡಿದ್ದಾರೆ. ಇದಕ್ಕೆ ವಸ್ತ್ರದ್ ಅವರಿಗೆ ಅವಕಾಶ ಲಭಿಸಿದ್ದು ರಾಮದಾಸ್ ನೀಡಿದ್ದ ರಕ್ಷಣೆಯಿಂದಾಗಿ.
ಜಿಲ್ಲಾಧಿಕಾರಿ ವಸ್ತ್ರದ್ ವರ್ಗಾವಣೆಗೊಂಡರೂ ಪುರಾತತ್ವ ಇಲಾಖೆ ಆಯುಕ್ತರಾಗಿ ಮೈಸೂರು ನಗರದಲ್ಲೇ ನೆಲೆಸಿದ್ದು, ತನಿಖೆ ಮೇಲೆ ಪ್ರಭಾವ ಬೀರುವ ಮತ್ತು ಕಡತಗಳನ್ನು ನಾಶ ಮಾಡುವ ಅವಕಾಶಗಳನ್ನು ಈಗಲೂ ಹೊಂದಿದ್ದಾರೆ. ಇದಕ್ಕೆ ಕಾರಣ ರಾಮದಾಸರ ಶ್ರೀರಕ್ಷೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಪತ್ರದ ಪ್ರತಿಗಳನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್. ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಮತ್ತು ಆರ್ಎಸ್ಎಸ್ ಮುಖಂಡ ಮೈ.ಚ. ಜಯದೇವ್ ಅವರಿಗೂ ಕಳುಹಿಸಿಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

