ರಾಜ್ಯಕ್ಕೆ 68 ಸಾವಿರ ಕೋಟಿ ನಬಾರ್ಡ್ ಸಾಲ
ಬೆಂಗಳೂರು: ರಾಜ್ಯದ ಕೃಷಿ ಕ್ಷೇತ್ರಕ್ಕೆ ಸಿಂಹಪಾಲು ಮೀಸಲಿರುವ 68 ಸಾವಿರ ಕೋಟಿ ಸಾಲವನ್ನು 2013-14ನೇ ಸಾಲಿಗೆ ನಬಾರ್ಡ್ ಮಂಜೂರು ಮಾಡಿದೆ.
ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ವಿಧಾನಸೌಧದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 2013-14ನೇ ಸಾಲಿನ ರಾಜ್ಯ ಸಾಲ ಯೋಜನೆ ಪತ್ರವನ್ನು ಬುಧವಾರ ಬಿಡುಗಡೆ ಮಾಡಿದರು. ಸಾಲ ಒದಗಿಸುವ ಬ್ಯಾಂಕ್ಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ ರಾಜ್ಯದ ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಯಿತು.
ನಬಾರ್ಡ್ ರಾಜ್ಯಕ್ಕೆ 68,172 ಕೋಟಿ ಸಾಲ ನೀಡಲಿದೆ. ಇದರಲ್ಲಿ 44,210 ಕೋಟಿ ಕೃಷಿ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತದೆ. ಇನ್ನುಳಿದ ಸಾಲವನ್ನು ಜಲಸಂಪನ್ಮೂಲ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ. ಈ ಸಾಲದ ಮೊತ್ತದ ಕಳೆದ ಸಾಲಿಗಿಂತ ಶೇ.31ರಷ್ಟು ಹೆಚ್ಚಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ತಿಳಿಸಿದರು.
ಕೃಷಿ ಕ್ಷೇತ್ರ ತಲಾ ಆದಾಯಕ್ಕೆ ನೀಡುವ ಕೊಡುಗೆ ಕಡಿಮೆಯಾಗುತ್ತಿದೆ. ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳುಗಳ ಉತ್ಪಾದನೆ ಇಳಿಕೆಯಾಗಿದೆ. ಹೀಗಾಗಿ ಸಣ್ಣ ಹಿಡುವಳಿದಾರರಿಗೆ ಉಪಯೋಗವಾಗುವಂತಹ ಸಾಲ ಸೌಲಭ್ಯಗಳನ್ನು ಬ್ಯಾಂಕ್ಗಳು ಹೆಚ್ಚು ನೀಡಬೇಕು. ಮೂರ್ನಾಲ್ಕು ಎಕರೆ ಜಮೀನುಳ್ಳ ರೈತರಿಗೆ ಸಾಲ ನೀಡಿ ಅವರು ಆಧುನಿಕ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹ ನೀಡಬೇಕು ಎಂದು ಬ್ಯಾಂಕ್ಗಳಿಗೆ ಸಲಹೆ ನೀಡಿದರು.
ತೋಟಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಅಗತ್ಯ. ಭೂಚೇತನ ಯೋಜನೆಯಂತೆಯೇ ಇದನ್ನು ನಿರ್ವಹಿಸಬೇಕು. ತೋಟಗಾರಿಕೆಗೆ ಪ್ರಾತಿನಿಧ್ಯ ನೀಡಿ ಸಾಲ ಮಂಜೂರು ಮಾಡಬೇಕು. ಭೂಮಿ ಫಲವತ್ತತೆ ಹಾಗೂ ಹವಾಮಾನಕ್ಕನುಗುಣವಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಬೇಕು. ಇದರ ಜತೆಗೆ ತುಂತುರು ಹನಿ ನೀರಾವರಿ, ಸಾವಯವ ಕೃಷಿ ಹಾಗೂ ಇತರೆ ಯೋಜನೆಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಹೆಚ್ಚಿನ ಆದ್ಯತೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ಉತ್ತರ ಹಾಗೂ ದಕ್ಷಿಣ ಕರಾವಳಿ ಪ್ರದೇಶಗಳಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಜಲಾನಯನ ಅಭಿವೃದ್ಧಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದ್ದು, ಜಲಾಶಯಗಳಲ್ಲಿ ಹೂಳೆತ್ತುವ ಯೋಜನೆಗೆ ಸಹಕರಿಸಲಾಗುತ್ತದೆ. ಗ್ರಾಮೀಣ ರಸ್ತೆಗಳು ಹಾಗೂ ಹಳ್ಳಿಗಾಡಿನಲ್ಲಿ ಮೂಲಸೌಕರ್ಯ ಒದಗಿಸಲು ನಬಾರ್ಡ್ ಹೆಚ್ಚಿನ ಸಾಲ ಕಲ್ಪಿಸುತ್ತದೆ ಎಂದು ನಬಾರ್ಡ್ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಎ. ಜಿನ್ನಾ ತಿಳಿಸಿದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ವಿಜಯಾ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ಉಪೇಂದ್ರಕಾಮತ್, ಸಿಂಡಿಕೇಟ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ರವಿಚಟರ್ಜಿ, ಆರ್ಬಿಐನ ಪ್ರಧಾನ ವ್ಯವಸ್ಥಾಪಕರಾದ ಎಸ್. ಸರಸ್ವತಿ, ಎಸ್ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಅಶ್ವಿನ್ ಮೆಹ್ರಾ, ಎಸ್ಬಿಎಂ ವ್ಯವಸ್ಥಾಪಕ ನಿರ್ದೇಶಕ ಶರತ್ಶರ್ಮಾ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

