ಸಿಬಿಐ ತನಿಖೆಗೆ ನಾಗರಾಜ್ ಆಗ್ರಹ
ಬೆಂಗಳೂರು: ಎಚ್‌ಎಂಟಿ ಕಾರ್ಖಾನೆಗೆ ಸೇರಿದ 202 ಎಕರೆ ಸರ್ಕಾರಿ ಜಾಗ ಅಕ್ರಮ ಮಾರಾಟ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಿಬಿಎಂಪಿ ಆಡಳಿತ ಪಕ್ಷ ನಾಯಕ ಎನ್.ನಾಗರಾಜ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಈ ಹಗರಣದಲ್ಲಿ ಅನೇಕ ರಾಜಕೀಯ ನಾಯಕರೂ ಭಾಗಿಯಾಗಿದ್ದು, ಪಾಲಿಕೆಗೆ ಕೊಟ್ಯಂತರ ನಷ್ಟವಾಗಿದೆ. ಆದ್ದರಿಂದ ಈ ಹಗರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆ ವಹಿಸಿ ತಪ್ಪಿತಸ್ಥರನ್ನು ಪತ್ತೆ ಮಾಡಬೇಕೆಂದು ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಅಕ್ರಮವಾಗಿ ಖರೀದಿಸಿರುವ ಈಜಾಗಕ್ಕೆ ಪಾಲಿಕೆ ಅಧಿಕಾರಿಗಳು ಖಾತೆ ನೀಡಿದ್ದಾರೆ. ಅಲ್ಲದೆ, ಕಟ್ಟಡ ನಿರ್ಮಿಸುವುದಕ್ಕೂ ನಕ್ಷೆ ಮಂಜೂರು ಮಾಡಿದ್ದಾರೆ. ಆದ್ದರಿಂದ ಈ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಎನ್.ಆರ್.ರಮೇಶ್, ಮೈಸೂರು ಮಹಾರಾಜರು 1953 ಮಾರ್ಚ್ 9ರಲ್ಲಿ ಪೀಣ್ಯಾ ಮತ್ತು ಜಾಲಹಳ್ಳಿ ಮಧ್ಯ ಭಾಗದಲ್ಲಿ ಎಚ್‌ಎಂಟಿ ಕಾರ್ಖಾನೆ ಪ್ರಾರಂಭಿಸಲು 631 ಎಕರೆ ಜಾಗವನ್ನು ಉಚಿತವಾಗಿ ಕೇಂದ್ರ ಸರ್ಕಾರಕ್ಕೆ ನೀಡಿದ್ದರು. ಇದರಲ್ಲಿ 200 ಎಕರೆ ಜಾಗ ಮಹಾರಾಜರ ಮಾಲೀಕತ್ವಕ್ಕೆ ಸೇರಿದ್ದರೆ, ಉಳಿದ 431 ಎಕರೆ ಜಾಗವನ್ನು ಸರ್ಕಾರ ಆ ಭಾಗದ ರೈತರಿಂದ ಪಡೆದು ತನ್ನ ವಶದಲ್ಲಿಟ್ಟುಕೊಂಡಿತ್ತು.ಬೆಂಗಳೂರಿನ ನಿವೇಶನ ಬೆಲೆ ಏರುತ್ತಿದ್ದಂತೆ ಈ ಜಾಗದ ಮೇಲೆ ರಿಯಲ್ ಎಸ್ಟೇಟ್ ಮಾಫಿಯಾ ಕಣ್ಣು ಬಿತ್ತು. ನಂತರ 1999ರಲ್ಲಿ ಈ ಜಾಗವನ್ನು ಎಚ್‌ಎಂಟಿ ಕಾರ್ಖಾನೆ ಅಧಿಕಾರಿಗಳು ಹಾಗೂ ಕೆಲವು ರಾಜಕಾರಣಿಗಳ ಜತೆ ಖಾಸಗಿ ಬಿಲ್ಟರ್‌ಗಳು ಮತ್ತು ರೀಯಲ್ ಎಸ್ಟೇಟ್ ಮಾಲೀಕರಿಗೆ ಮಾರಾಟ ಮಾಡಿದ್ದರು. ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು. ಆದರೆ, ಈ ಜಾಗ ಯಾರಿಗೆಲ್ಲಾ ಮಾರಾಟವಾಗಿದೆ ಎಂದು ತಿಳಿಯಲು ದಾಖಲೆ ಪಡೆದಾಗ, ಅನೇಕ ರಾಜಕಾರಣಿಗಳು ಮತ್ತು ಬಿಲ್ಡರ್‌ಗಳಿರುವುದು ಗೊತ್ತಾಯಿತು ಎಂದು ರಮೇಶ್ ವಿವರಿಸಿದರು.
ಕಾರ್ಖಾನೆಗೆ ಸೇರಿದ 202 ಎಕರೆ ಜಾಗವನ್ನು ಅಧಿಕಾರಿಗಳು ಸರ್ಕಾರದ ಅನುಮತಿ ಇಲ್ಲದೆ ಖಾಸಗಿ ಬಿಲ್ಡರ್‌ಗಳು, ರೀಯಲ್ ಎಸ್ಟೇಟ್‌ನವರಿಗೆ ಮಾರಾಟ ಮಾಡಿದ್ದು, ಭೂ ಸ್ವಾದೀನ ಕಾಯ್ದೆ 1894ರ ಕಲಂ 44ಎ ಅನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.
ಸುಮಾರು 3000 ಕೋಟಿ ಮೌಲ್ಯದ ಈ ಜಾಗದ ಅಕ್ರಮ ಖರೀದಿ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಅವರ ಅಳಿಯ ಸಿದ್ದಾರ್ಥ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಮೋಟಮ್ಮ, ಕೇಂದ್ರ ಸಚಿವ ಜಯಪಾಲ್ ರೆಡ್ಡಿ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ಪ್ರಮುಖ ಪಾತ್ರವಿರುವುದೂ ಗೊತ್ತಾಗಿದೆ. ಆದ್ದರಿಂದ ಈ ಬಗ್ಗೆ ಸಿಬಿಐ ತನಿಖೆಯೂ ಸೂಕ್ತ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

