ಬಡ ಬೋರೇಗೌಡನ ಬವಣೆ ಕೇಳುವವರಿಲ್ಲ
ರಾಮನಗರ: ರೈತ ದೇಶದ ಬೆನ್ನೆಲುಬು ಎನ್ನುವುದು ಘೋಷಣೆಗೆ ಸೀಮಿತ. ಸರ್ಕಾರಿ ಕಚೇರಿಗಳಲ್ಲಿ ಅತ್ಯಂತ ನಿಕೃಷ್ಟವಾಗಿ ಕಾಣಲ್ಪಡುವುದೇ ರೈತ ವರ್ಗ. ರಿಯಲ್ ಎಸ್ಟೇಟ್ ಹಾವಳಿ ಮಿತಿ ಮೀರಿದ ಬಳಿಕವಂತೂ ಕಂದಾಯ ಇಲಾಖೆಗಳಲ್ಲಿ ಬಡ ಬೋರೇಗೌಡನ ಬವಣೆ ಕೇಳುವವರಿಲ್ಲ. ಈ ವ್ಯವಸ್ಥೆಯ ಲೋಪ ಇಲ್ಲೊಬ್ಬ ವೃದ್ಧ ರೈತನ ಬಲಿ ತೆಗೆದುಕೊಂಡಿದೆ.
ರಾಮನಗರದ ಮಿನಿ ವಿಧಾನಸೌಧ ಕಚೇರಿ ಮೇಲಿಂದ ಹಾರಿದ ರೈತ ಗಂಗಯ್ಯ ಪ್ರಕರಣ ಆತ್ಮಹತ್ಯೆಗೆ ಬದಲಾಗಿ ಸರ್ಕಾರಿ ವ್ಯವಸ್ಥೆಯಿಂದ ಆದ ಕಗ್ಗೋಲೆಯೇ ಸರಿ. ಜಮೀನಿನ ಸರ್ವೆ, ಪೋಡಿ ಮತ್ತು ಭೂ ದಾಖಲೆಗಾಗಿ ಕಂದಾಯ ಇಲಾಖೆ ಕಚೇರಿಗೆ ವರ್ಷಾನುಗಟ್ಟಲೆ ಅಲೆದು ಬಸವಳಿದ ಈ ರೈತನ ಬದುಕು ಘೋರ ದುರಂತ ಅಂತ್ಯ ಕಂಡಿರುವುದು ವಿಪರ್ಯಾಸದ ಸಂಗತಿ.
ಅಲೆದದ್ದು ಆರು ವರ್ಷ: ಸಕಾಲ ಯೋಜನೆಯಡಿ ಪಹಣಿ, ಭೂ ದಾಖಲೆ, ಸರ್ವೆ, ಪೋಡಿ ಸಮೇತ ಕಂದಾಯ ಇಲಾಖೆಯ ವಿವಿಧ ಕೆಲಸಗಳನ್ನು 7 ರಿಂದ ಗರಿಷ್ಠ 45 ದಿನದ ಮಿತಿಯೊಳಗೆ ನಿಗದಿಪಡಿಸಲಾಗಿದೆ. ಆದರೆ, ಮೃತ ಗಂಗಯ್ಯ ಅಲೆದಿದ್ದು ದಿನ, ತಿಂಗಳುಗಟ್ಟಲೆ ಅಲ್ಲ. ಬರೋಬ್ಬರಿ ಆರು ವರ್ಷ ಕಡತ ಹಿಡಿದು ಅಲೆದು, ಅದೆಷ್ಟೋ ಜೋಡುಗಳನ್ನು ಸವೆಸಿದರು.
ಶಿರಸ್ತೇದಾರ್, ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಸಾಲದೆನ್ನುವಂತೆ ಮುಖ್ಯಮಂತ್ರಿ ಸಚಿವಾಲಯಕ್ಕೂ ಗಂಗಯ್ಯ ಮನವಿ ಸಲ್ಲಿಸಿದ್ದರು. ಕಂದಾಯ ಕಚೇರಿಯಲ್ಲಿ ಅವರ ಅರ್ಜಿಗಳು ಟಿಪ್ಪಣಿ, ಹಿಂಬರಹ, ಭರವಸೆ ನೀಡಿಕೆಗೆ ಸೀಮಿತವಾದವೇ ಹೊರತು ಕಡೆಗೂ ಕಡತ ವಿಲೇವಾರಿ ಆಗಲಿಲ್ಲ. ಅರ್ಜಿಯನ್ನು ಸಕಾಲ ಯೋಜನೆ ವ್ಯಾಪ್ತಿಗೆ ಪರಿಗಣಿಸಿಯೇ ಇಲ್ಲ.
ಕಂದಾಯ ಕಚೇರಿಗಳು ಪ್ರಭಾವಿಗಳು ಮತ್ತು ರಿಯಲ್ ಎಸ್ಟೇಟ್ ದಂಧೆಕೋರರ ಮುಷ್ಟಿಗೆ ಸಿಲುಕಿವೆ. ಇವರ ಅರ್ಜಿಗಳ ಬರುವಿಕೆಯನ್ನೇ ಕಾದು ಕುಳಿತ ಅಧಿಕಾರಿ ಮತ್ತು ಸಿಬ್ಬಂದಿ ಲಂಚದಾಸೆಯಿಂದ ದಿನ, ಒಪ್ಪತ್ತಿನೊಳಗೆ ವಿಲೇವಾರಿ ಮಾಡಿ ಬಿಡುತ್ತಾರೆ. ಈ ಕೆಲಸದಲ್ಲೇ ಬ್ಯುಸಿಯಾದವರಿಗೆ ರೈತರ ಅರ್ಜಿಗಳ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ.
ಮೊದಲೇ ಎಚ್ಚರಿಸಿದ್ದರು: 2009ರ ಜೂ.1ರಲ್ಲೇ ರೈತ ಗಂಗಯ್ಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಚಾಕುವಿನಿಂದ ಕೈ ಕೊಯ್ದುಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಪೊಲೀಸರು ಗಂಗಯ್ಯ ವಿರುದ್ಧ ಆತ್ಮಹತ್ಯೆ ಯತ್ನದ ಪ್ರಕರಣ ದಾಖಲಿಸಿಕೊಂಡು, 5 ದಿನ ಜೈಲಿಗಟ್ಟಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡರು.
ಆಗ ತಹಸೀಲ್ದಾರ್ ಆಗಿದ್ದವರು ನರಸಿಂಹಪ್ಪ. ಗಂಗಯ್ಯ ಅವರನ್ನು ಕಚೇರಿಯಲ್ಲಿ ಕೂರಿಸಿಕೊಂಡು, ಸರ್ವೆ ಸಹಿತ ಎಲ್ಲ ದಾಖಲೆ ಒದಗಿಸುವ ಭರವಸೆ ನೀಡಿದ್ದರು. ಕೆಲಸ ಆಗದಿದ್ದರೆ ಇದೇ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗಂಗಯ್ಯ ಎಚ್ಚರಿಸಿದ್ದರು. ಕಡೆಗೆ, ಬೇಸತ್ತ ಅವರು ಹೇಳಿದ್ದಂತೆಯೇ ಆತ್ಮಹತ್ಯೆ ಮೊರೆ ಹೋಗಿದ್ದಾರೆ.
ತಹಸೀಲ್ದಾರ್ ಕಚೇರಿಯಲ್ಲಿ ಗಂಗಯ್ಯ ಅವರಿಗೆ ಭರವಸೆ ನೀಡಲಾದ ಬಳಿಕ ಮೂವರು ಮುಖ್ಯಮಂತ್ರಿಗಳು, ತಲಾ ನಾಲ್ವರು ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್ಗಳು ಬದಲಾಗಿದ್ದಾರೆ. ಇವರಾರಿಗೂ ಗಂಗಯ್ಯ ಅವರ ಕೂಗು ಕೇಳದಾಯಿತು. ಯಾವೊಬ್ಬ ಅಧಿಕಾರಿ ಕಿಂಚಿತ್ ಗಮನ ಹರಿಸಿದ್ದರೆ, ಅಮಾಯಕ ರೈತನ ಪ್ರಾಣ ಉಳಿಯುತ್ತಿತ್ತು.
ಚಿಕಿತ್ಸೆಯೂ ವಿಳಂಬ: ಕಂದಾಯ ಇಲಾಖೆ ನಿರ್ಲಕ್ಷ್ಯ, ಲಂಚಾವತಾರದಿಂದ ರೋಸಿ ಹೋದ ಗಂಗಯ್ಯ ಮಿನಿ ವಿಧಾನಸೌಧ ಮೇಲಿಂದ ಹಾರಿದಾಗ ಚಿಕಿತ್ಸೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಆಗಮನ ಕೂಡ ವಿಳಂಬವಾಯ್ತು. ಅತ್ತ ಜಿಲ್ಲಾಸ್ಪತ್ರೆಗೆ ದಾಖಲಾದ ಮೇಲೆ ಸಿಕ್ಕಿದ್ದು ಹೇಳಿ ಕೇಳಿ ಸರ್ಕಾರಿ ಚಿಕಿತ್ಸೆಯೇ ಹೊರತು ಸೂಕ್ತ ವೈದ್ಯಕೀಯ ಸೌಲಭ್ಯವಂತೂ ಅಲ್ಲ.
ಗಂಗಯ್ಯ ಹಾರಿದ ತಕ್ಷಣವೇ ಸ್ಥಳದಲ್ಲಿದ್ದವರು ಆಂಬ್ಯುಲೆನ್ಸ್ಗೆ ಕರೆ ಮಾಡಿದರಾದರೂ ಆಗಮನ ಆದದ್ದು 20 ನಿಮಿಷ ಬಳಿಕ. ಆಸ್ಪತ್ರೆಯಲ್ಲಿ ದಾಖಲಿಸಿಕೊಂಡ ವೈದ್ಯರು ನೋವು ನಿವಾರಕ ಔಷಧ, ಗ್ಲೂಕೋಸ್ ಏರಿಸಿ ಮತ್ತೆ ಗಂಗಯ್ಯ ಇದ್ದ ಹಾಸಿಗೆಯತ್ತ ಸುಳಿಯಲೇ ಇಲ್ಲ. ಈ ಬಗ್ಗೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗವಾಗಿ ಕಿಡಿ ಕಾರಿದ್ದೂ ಉಂಟು.
2008ರ ಆ.6ರಂದು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಎಸ್. ದಯಾನಂದ್ ಪ್ರಕರಣ ಕುರಿತು ವಿವರಣೆ ಕೇಳಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. 2009ರ ನ.23ರಂದು ಮತ್ತೊಂದು ಪತ್ರ ಬರೆದು, ಅರ್ಜಿದಾರರ ಕೋರಿಕೆ ಮಾನ್ಯ ಮಾಡುವಂತೆ ಸೂಚಿಸಿದ್ದರು. ಇಷ್ಟಾಗಿಯೂ ಗಂಗಯ್ಯ ಕಡತಕ್ಕೆ ಮುಕ್ತಿ ಸಿಕ್ಕಿರಲಿಲ್ಲ.
- ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

