ಬೆಂಗಳೂರು ನಗರ

ಸ್ಥಳೀಯ ಸಂಸ್ಥೆ ಪ್ರಚಾರಕ್ಕೆ ಮೋದಿ: ಭಾಜಪ

Published On :

ಬೆಂಗಳೂರು: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಪಕ್ಷದ ರಾಷ್ಟ್ರೀಯ ಮಂಡಳಿ ಇನ್ನೂ ನಿರ್ಧರಿಸಿಲ್ಲ. ಆದರೆ, ರಾಜ್ಯ ಬಿಜೆಪಿ ಪಾಲಿಗೆ ನರೇಂದ್ರ ಮೋದಿ ಅವರೇ ಭಾವಿ ಪ್ರಧಾನಿ.
ಹೌದು, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರ ಗಮನ ಸೆಳೆಯಲು ಬಿಜೆಪಿ ನರೇಂದ್ರ ಮೋದಿ ಅವರನ್ನು ಭಾವಿ ಪ್ರಧಾನಿ ಎಂದು ಬಿಂಬಿಸುತ್ತಿದೆ.
ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಈಗಾಗಲೇ ಕಾರ್ಯಕ್ರಮ ರೂಪಿಸಿರುವ ಬಿಜೆಪಿ ಇದೀಗ ಫೇಸ್‌ಬುಕ್‌ಅನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ನಗರ ಪ್ರದೇಶದ ಬಹುತೇಕ ಮಂದಿ ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳನ್ನು ಹೆಚ್ಚಾಗಿ ಅವಲಂಬಿಸಿರುವುದನ್ನು ತಮ್ಮ ಅನುಕೂಲಕ್ಕೆ ಪರಿವರ್ತಿಸಿಕೊಂಡಿರುವ ಪಕ್ಷ, ಮೋದಿ ಅವರ ಹೆಸರನ್ನು ಬಳಸಿಕೊಂಡು ಮತದಾರರ ಬಳಿ ಹೋಗುತ್ತಿದೆ.

ಮತದಾರರೇ ಯೋಚಿಸಿ....
ನಿಮ್ಮ ಒಂದೊಂದು ಅಮೂಲ್ಯವಾದ ಮತವು ನಗರಸಭೆಯ ಸದಸ್ಯನಿಗಲ್ಲ..
ಭಾರತದ ಭರವಸೆಯ ಭಾವಿ ಪ್ರಧಾನಿಗೆ ಎಂಬ ಸಂದೇಶ ಹೊತ್ತಿರುವ ಭಾವಚಿತ್ರ ಮತ್ತು ಅದಕ್ಕೆ ಪೂರಕ ಮಾಹಿತಿಗಳನ್ನು ಫೇಸ್‌ಬುಕ್‌ನಲ್ಲಿ ಅಳವಡಿಸಿ,  ಮತದಾರರನ್ನು ಆಕರ್ಷಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈ ಭಾವಚಿತ್ರದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತ್ರದ ಎದುರು ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿ ಮುಂದಿನ ಪ್ರಧಾನಿ ಎಂಬಂತೆ ಬಿಂಬಿಸಲಾಗಿದೆ.

ಮೋದಿಯೇ ಕೇಂದ್ರಬಿಂದು:  ನಗರ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ವಿಧಾನಸಭೆ ಚುನಾವಣೆಯ ಸೆಮಿಫೈನಲ್ ಎಂದು ಭಾವಿಸಿರುವ ಬಿಜೆಪಿ, ಜತೆಗೆ ಮುಂದಿನ ಲೋಕಸಭೆ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಪ್ರಚಾರದ ರೂಪುರೇಷೆಗಳನ್ನು ಸಿದ್ಧಪಡಿಸಿದೆ.
ಇದಕ್ಕಾಗಿ ಯುಪಿಎ ಸರ್ಕಾರದ ವೈಫಲ್ಯಗಳು, ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕೈಗೊಂಡಿದ್ದ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸುತ್ತಿದೆ. ಗುಜರಾತ್ ರಾಜ್ಯದಲ್ಲಿ ಬಿಜೆಪಿ ಮಾಡಿರುವ ಸಾಧನೆ, ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ, ವಿಶ್ವದ ಗಮನ ಸೆಳೆದ ಅವರ ಆಡಳಿತವನ್ನು ವಿವರಿಸಲಾಗುತ್ತಿದೆ.

ಮೋದಿ ಅವರು ಪ್ರಧಾನಿಯಾಗಬೇಕಾದರೆ ಈಗಿನಿಂದಲೇ ಬಿಜೆಪಿಯನ್ನು ಸದೃಢವಾಗಿ ಬೆಳೆಸಬೇಕು. ನಗರ ಸ್ಥಳೀಯ ಸಂಸ್ಥೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಆ ಮೂಲಕ ಲೋಕಸಭೆ ಚುನಾವಣೆಗೆ ಸಿದ್ಧವಾಗಬೇಕು ಎಂಬ ಸಂದೇಶವನ್ನು ಮತದಾರರಿಗೆ ನೀಡಲಾಗುತ್ತಿದೆ.

ಗುಜರಾತ್ ಮಾದರಿ:  ಇದಿಷ್ಟೇ ಅಲ್ಲ, ಪ್ರಚಾರಕ್ಕೂ ಗುಜರಾತ್ ಮಾದರಿಯ ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿಪಕ್ಷಗಳ ವಿರುದ್ಧದ ಟೀಕೆ, ಅಭ್ಯರ್ಥಿಗಳ ಮೇಲೆ ಆರೋಪ ಮಾಡುವುದಕ್ಕೆ ಹೆಚ್ಚು ಆದ್ಯತೆ ನೀಡದೆ ರಾಜ್ಯ ಸರ್ಕಾರದ ಸಾಧನೆಗಳು ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನೇ ಪ್ರಧಾನವಾಗಿ ಹೇಳುತ್ತಾ ಜನರ ಬಳಿ ಹೋಗುತ್ತಿದೆ.
ಪಕ್ಷದ ಜಿಲ್ಲಾ ಮುಖಂಡರ ಜತೆಗೆ ಇದೀಗ ರಾಜ್ಯದ ಹಿರಿಯ ಮುಖಂಡರನ್ನೊಳಗೊಂಡ 40 ಸ್ಟಾರ್ ಪ್ರಚಾರಕರು ನಾನಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಪಾದಯಾತ್ರೆ, ಸಾರ್ವಜನಿಕ ಸಭೆ, ರೋಡ್‌ಶೋಗಳ ಮೂಲಕ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸಾರ್ವಜನಿಕ ಸಭೆಗಳಲ್ಲೂ ಟೀಕೆಗಳಿಗಿಂತ ಹೆಚ್ಚು ಸರ್ಕಾರದ ಸಾಧನೆ ಬಿಂಬಿಸುವುದೇ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.