ಬೆಂಗಳೂರು ನಗರ

ಮುಂದುವರಿದ ಭೂದಾನ

Published On :

ಕ.ಪ್ರ.ವಾರ್ತೆ, ಬೆಂಗಳೂರು, ಮಾ.19-
ಬಿಜೆಪಿ ಸರ್ಕಾರ ತನ್ನ ಅಧಿಕಾರದ ಅವಧಿ ಕೊನೆಗೊಳ್ಳುವ ದಿನಗಳಲ್ಲಿ ದಾಖಲೆ ಸೃಷ್ಟಿಸುವಂತೆ ಸಚಿವ ಸಂಪುಟ ಸಭೆಗಳನ್ನು ನಡೆಸುತ್ತಿದೆ.
ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಣೆಯನ್ನು ಕೇಂದ್ರ ಚುನಾವಣೆ ಆಯೋಗ ವಿಳಂಬ ಮಾಡುತ್ತಿರುವುದನ್ನೇ ಅಸ್ತ್ರವಾಗಿರಿಸಿಕೊಂಡಿರುವ ಸರ್ಕಾರ, ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಮೇಲೆ ವಾರಕ್ಕೆ ಎರಡು ಸಚಿವ ಸಂಪುಟ ಸಭೆ ನಡೆಸುತ್ತಿದೆ. ನೂರಾರು ವಿಷಯಗಳಿಗೆ ಸಮ್ಮತಿಯ ಮುದ್ರೆ ಹಾಕುತ್ತಿದೆ.
ಭೂದಾನ ಮುಂದುವರಿದಿದ್ದು, ಕೆಲವು ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನ ನೀಡಲಾಗಿದೆ. ರಾಜ್ಯ ಸಹಕಾರಿ ಮಾರಾಟ ಮಹಾಮಂಡಲದ ಬಾಕಿ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಿರುವ ಜನತೆಗೆ, ಬೆಂಗಳೂರಿನಲ್ಲಿ ಐದು ಸಿಗ್ನಲ್‌ಮುಕ್ತ ಕಾರಿಡಾರ್‌ಗಳಿಗೆ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದದವರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ವಿಸ್ತರಿಸಲಾಗಿದೆ.
ಎರಡು ದಿನದ ಹಿಂದಷ್ಟೇ ಅಂದರೆ ಶನಿವಾರ ಸಚಿವ ಸಂಪುಟ ಸಭೆ ನಡೆದಿತ್ತು. ಮಂಗಳವಾರವೂ ಸಚಿವ ಸಂಪುಟ ನಡೆದು 60ಕ್ಕೂ ಹೆಚ್ಚು ವಿಷಯಗಳಿಗೆ ಅನುಮೋದನೆ ನೀಡಲಾಯಿತು. ಸಚಿವ ಸಂಪುಟ ಸಭೆ ಸುಮಾರು ಮೂರು ತಾಸು ನಡೆದು ಮೊದಲೇ ನಿರ್ಧರಿತವಾಗಿದ್ದ ಕಾರ್ಯಸೂಚಿಯಲ್ಲಿನ 31 ವಿಷಯಗಳು ಸೇರಿದಂತೆ ಮತ್ತೆ 25ಕ್ಕೂ ಹೆಚ್ಚು ವಿಷಯಗಳಿಗೆ ಸಮ್ಮತಿ ಸೂಚಿಸಲಾಯಿತು.
ಸಚಿವ ಸಂಪುಟದ ಕಾರ್ಯಸೂಚಿ ಪ್ರಕಾರ, ಚಿಕ್ಕಬಳ್ಳಾಪುರದ ನಂದಿ ಹೋಬಳಿಯ ನೆಲಮಾಕನಹಳ್ಳಿಯಲ್ಲಿ ಕೃಷಿ ಇಲಾಖೆಯ ಬೀಜೋತ್ಪಾದನಾ ಕೇಂದ್ರಕ್ಕೆ ಸೇರಿದ 84.1 ಎಕರೆ ಗೋಮಾಳವನ್ನು ಜವಳಿ ಪಾರ್ಕ್ ಸ್ಥಾಪಿಸಲು ಹಸ್ತಾಂತರಿಸಲಾಗಿದೆ. ಬಿಜಾಪುರದ ಸಂಗಾಪುರದಲ್ಲಿ ಸೋಮೇಶ್ವರ ಶುಗರ್ಸ್ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಭಷ್ಟ್ರಾಚಾರ ನಿರ್ಮೂಲನಾ ಕಾಯ್ದೆಯಡಿ ಐಎಎಸ್ ಅಧಿಕಾರಿ ಬಲದೇವಕೃಷ್ಣ ಅವರನ್ನು ಅಭಿಯೋಜನೆಗೊಳಿಸಲು ಕೇಂದ್ರದ ಮಂಜೂರು ಕೋರಲು ಸಮ್ಮತಿ ನೀಡಲಾಗಿದೆ.
ಮಡಿಕೇರಿ ನಗರ ಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ನಡೆದ ಗಲಭೆ, ಮಲೆಮಹದೇಶ್ವರ ಬೆಟ್ಟದಲ್ಲಿ ಮೂಲಸೌಕರ್ಯ ಬೇಡಿಕೆಗಾಗಿ ರಸ್ತೆ ತಡೆ ಚಳವಳಿ ನಡೆಸಿದವರ ಮೇಲಿನ ಮೊಕದ್ದಮೆ ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ.
ಸೇವಾನಿರತ ಸರ್ಕಾರಿ ವೈದ್ಯಾಧಿಕಾರಿಗಳನ್ನು ಸ್ನಾತಕೋತ್ತರ ವೈದ್ಯಕೀಯ ಪದವಿ, ಡಿಪ್ಲೊಮಾ ಉನ್ನತ ವ್ಯಾಸಂಗಕ್ಕೆ ನಿಯೋಜನೆ, ಬೆಳಗಾವಿಯ ವಡಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾಗಿಸಲು 50 ಕೋಟಿ ವೆಚ್ಚ, ಇವು ಇತರ ನಿರ್ಣಯಗಳು.
ಶಿವಮೊಗ್ಗ ಸಾಗರದ ಲಿಂಗದಹಳ್ಳಿಯಲ್ಲಿ 1.3 ಎಕರೆ ಜಮೀನು ನವೋದಯ ಐಟಿಐ ಸಂಸ್ಥೆ, ಸಂಜಯ ವಿದ್ಯಾಕೇಂದ್ರಕ್ಕೆ ಮಂಜೂರು. ದಿವಂಗತ ಕರ್ನಲ್ ವಸಂತ್ ಪತ್ನಿ ಸುಭಾಷಿಣಿ ವಸಂತ್ ಅವರಿಗೆ ದೇವನಹಳ್ಳಿಯಲ್ಲಿ ಐದು ಎಕರೆ ಜಮೀನು. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗೆ 528 ಎಲೆಕ್ಟ್ರಾನಿಕ್ ಟೋಟಲ್ ಸ್ಟೇಷನ್ ಯಂತ್ರಗಳನ್ನು 13.86 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಹಿಂಡಲಗಾ ಬುಡಾ ಯೋಜನೆಯಡಿ ಕುವೆಂಪುನಗರದಲ್ಲಿರುವ ಎರಡು ಎಕರೆ ಜಮೀನನ್ನು ಕೆಎಎಲ್‌ಇ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಬೀದರ್‌ನ ಕೇಶವ ಕಾರ್ಯ ಸಂವರ್ಧನ ಸಮಿತಿ ಮೈಲೂರು ಗ್ರಾಮದಲ್ಲಿ 2099 ಚ.ಮೀ, ಪಂಡಿತ ದೀನ ದಯಾಳ್ ಉಪಾಧ್ಯಾಯ ಟ್ರಸ್ಟ್ ಚಿದ್ರಿ ಗ್ರಾಮದಲ್ಲಿ 2636 ಚ.ಮೀ ಜಮೀನಿನ ಗುತ್ತಿಗೆ ದರ ಕಡಿತಗೊಳಿಸಲಾಗಿದೆ. ಹಾಸನದ ಹೊಳೆನರಸೀಪುರದ ಕಟ್ಟೆಬೆಳಗುಳಿ ಬಳಿ ಹೇಮಾವತಿ ನದಿಗೆ ನಿರ್ಮಿಸಿರುವ ಶ್ರೀರಾಮದೇವರ ಅಣೆಕಟ್ಟು ಆಧುನೀಕರಣ ಕಾಮಗಾರಿಗೆ 30.40 ಕೋಟಿ ಮಂಜೂರು ಮಾಡಲಾಗಿದೆ.

ಸಿಗ್ನಲ್‌ಮುಕ್ತ ಕಾರಿಡಾರ್ ಸಮ್ಮತಿ
ಬೆಂಗಳೂರಿನಲ್ಲಿ ಸಾಕಷ್ಟು ದಿನಗಳಿಂದ ಅನುಮೋದನೆಗಾಗಿ ಕಾಯುತ್ತಿದ್ದ ಐದು ಸಿಗ್ನಲ್‌ಮುಕ್ತ ಕಾರಿಡಾರ್ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚುವರಿ ಟೆಂಡರ್ ಪ್ರೀಮಿಯಂಗೆ ಅನುಮೋದನೆ ನೀಡಲಾಗಿದೆ. ರಾಜಾಜಿನಗರ 2ನೇ ಬ್ಲಾಕ್‌ನಲ್ಲಿರುವ ಬಿಬಿಎಂಪಿಯ ಆಟದ ಮೈದಾನವನ್ನು ಕೆಎಲ್‌ಇ ಸಂಸ್ಥೆ ನಿರ್ವಹಣೆಗೆ ನೀಡಲಾಗಿದೆ.
ಸುಂಕೇನಹಳ್ಳಿಯ ಶ್ರೀ ಗೊಮ್ಮಟೇಶ ವಿದ್ಯಾಪೀಠಕ್ಕೆ ನೀಡಲಾಗಿರುವ ಸಿಎ ನಿವೇಶನದ ಗುತ್ತಿಗೆ ಮುಂದುವರಿಕೆ, ಗುತ್ತಿಗೆ ಮೌಲ್ಯ ಕಡಿತಗೊಳಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಪಿಎಲ್‌ಯೇತರ ಕುಟುಂಬಗಳಿಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ವಿಸ್ತರಣೆ. ಬ್ಯಾಟರಾಯನಪುರ ಎಪಿಎಂಸಿ ವತಿಯಿಂದ ಮಾರುಕಟ್ಟೆ ಪ್ರಾಂಗಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಎನ್‌ಜಿಇಎಫ್‌ನಲ್ಲಿ ಸ್ವಯಂ ನಿವೃತ್ತಿ ಪಡೆಯದ 122 ನೌಕರರಿಗೆ ದಯಾಪರಿಹಾರಾತ್ಮಕ ಸೌಲಭ್ಯ. ಎಸ್‌ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಮತ್ತು ರಾಜೀವ್‌ಗಾಂಧಿ ಎದೆರೋಗಗಳ ಸಂಸ್ಥೆ ಅವರಣದಲ್ಲಿ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಘಟಕ ಪ್ರಾರಂಭ ಮಾಡಲು ಸಚಿವ ಸಂಪುಟ ಅನುಮತಿ ನೀಡಿದೆ.

ಮಾಧ್ಯಮಗಳಿಗೆ ವಿವರ ನೀಡಿಕೆ ರದ್ದು
ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅದರ ವಿವರಣೆ ನೀಡುವುದು ವಾಡಿಕೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಅವರು ಸಾಮಾನ್ಯವಾಗಿ ಆ ಕೆಲಸ ಮಾಡುತ್ತಿದ್ದರು. ಅವರು ಇಲ್ಲದಿದ್ದಾಗೆ ಬೇರೆ ಸಚಿವರಿಗೆ ಜವಾಬ್ದಾರಿ ವಹಿಸಲಾಗುತ್ತಿತ್ತು.  ಆದರೆ, ಮಂಗಳವಾರ ಕಾನೂನು ಸಚಿವ ಸುರೇಶ್‌ಕುಮಾರ್ ತಮ್ಮ ಕಾರ್ಯನಿಮಿತ್ತ ಮಂಗಳವಾರ ರಾತ್ರಿ ದಾವಣೆಗೆರೆ ಹೋಗಬೇಕಿತ್ತು. ಇನ್ನು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಜೆ ತೆಗೆದುಕೊಂಡಿದ್ದರು. ಹೀಗಾಗಿ, ಅವರಿಬ್ಬರು ಇಲ್ಲದ್ದರಿಂದ ಸಚಿವ ಸಂಪುಟ ಸಭೆಯ ವಿವರವನ್ನು ಮಾಧ್ಯಮಗಳಿಗೆ ಒದಗಿಸುವುದನ್ನು ರದ್ದುಗೊಳಿಸಲಾಯಿತು.
'ತಾವು ಇರುವುದಿಲ್ಲ, ವಿವರಣೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದೇನೆ.ಅವರು ಸಮ್ಮತಿಸಿದ್ದಾರೆ. ಹೀಗಾಗಿ ಸಚಿವ ಸಂಪುಟ ಸಭೆ ವಿವರಣೆ ಇಂದು ಇರುವುದಿಲ್ಲ' ಎಂದು ಸಚಿವ ಸುರೇಶ್‌ಕುಮಾರ್ ಅವರೇ ಸಭೆ ಆರಂಭಕ್ಕೆ ಮುನ್ನ ಸುದ್ದಿಗಾರರಿಗೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.