ಬಳ್ಳಾರಿ

ಚುನಾವಣಾ ಕಾಲೆ ಕೊಟ್ಟೂರು ಮೌನ

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಏ. 5
ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ರಾಜಕೀಯ ಕೇಂದ್ರಗಳಲ್ಲಿ ಒಂದಾದ ಕೊಟ್ಟೂರು ಪಟ್ಟಣ ಸದ್ಯದ ರಾಜಕೀಯ ಭರಾಟೆ ದಿನಗಳಲ್ಲಿ ಮೌನಕ್ಕೆ ಶರಣಾಗಿದೆ. ರಾಜಕೀಯ ಝಂಗಾ ಬಲವಾಗಿದ್ದ ವಿಧಾನಸಭಾ ಕ್ಷೇತ್ರದ ಅಸ್ತಿತ್ವ ಕೊಟ್ಟೂರಿನಿಂದ ಕಳಚಿ ಹೋಗಿರುವುದು ಈ ಭಾಗದ ಜನರಲ್ಲಿ ದೊಡ್ಡ ಮಟ್ಟದ ನಿರಾಸೆ ಭಾವನೆ ಮೂಡಿಸಿದೆ.
ಹಳೆಯ ಕೊಟ್ಟೂರು ಕ್ಷೇತ್ರ 2008ರ ಕ್ಷೇತ್ರ ಮರು ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ಕ್ಷೇತ್ರಗಳಿಗೆ ಹಂಚಿ ಹೋಗಿದೆ. ಜನತೆ ಇದೂವರೆಗೂ ಕ್ಷೇತ್ರದೊಂದಿಗೆ ಹೊಂದಿದ್ದ ಭಾವನಾತ್ಮಕ ಸಂಬಂಧ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಸಂಪೂರ್ಣ ಛಿದ್ರಗೊಂಡಿದೆ. ಕೂಡ್ಲಿಗಿ ತಾಲೂಕಿನಲ್ಲಿ ಕೊಟ್ಟೂರು ಕ್ಷೇತ್ರ ಇದ್ದ ಕಾರಣಕ್ಕಾಗಿ ಮತದಾರರು ಒಂದೇ ತಾಲೂಕಿಗೆ ಸೇರಿದವರಾಗಿದ್ದರು. ಕೂಡ್ಲಿಗಿ ಪಟ್ಟಣ ಮತ್ತು ನಾಲ್ಕು ಗ್ರಾಮ ಪಂಚಾಯಿತಿಗಳು ಮಾತ್ರ ಈ ಹಿಂದೆ ಕೂಡ್ಲಿಗಿ ಕ್ಷೇತ್ರಕ್ಕೆ ಸೇರಿದವುಗಳಾಗಿದ್ದವು. ಇಡೀ ತಾಲೂಕಿನ ಹಿಡಿತ ಕೊಟ್ಟೂರು ಶಾಸಕರ ಮರ್ಜಿಗೆ ಒಳಗಾಗಿತ್ತು. ಸರ್ಕಾರದ ಪ್ರತಿ ಯೋಜನೆಗಳು ಮತ್ತು ಅನುದಾನಗಳನ್ನು ಬಿಡುಗಡೆಗೊಳಿಸಿದಾಗ ಕೊಟ್ಟೂರು ಕ್ಷೇತ್ರದ ಹೆಸರಿನಲ್ಲಿ ಇರುತ್ತಿದ್ದವು. ಇದರ ಸಂಪೂರ್ಣ ಲಾಭ ಕೂಡ್ಲಿಗಿ ತಾಲೂಕಿನ ಅಬಿವೃದ್ಧಿಗೆ ಬಳಕೆಯಾಗುತ್ತಿತ್ತು.
ಶಾಸಕರಾಗಿದ್ದವರು: ಈ ಕ್ಷೇತ್ರದಲ್ಲಿ ಎಂ.ಎಂ.ಜೆ. ಸದ್ಯೋಜಾತಪ್ಪ, ಬಿ.ಎಸ್. ವೀರಭದ್ರಪ್ಪ, ಕೆ.ವಿ. ರವೀಂದ್ರನಾಥಬಾಬು, ಟಿ. ಮರುಳಸಿದ್ದನಗೌಡ, ಭಾಗೀರಥಿ ಮರುಳಸಿದ್ಧನಗೌಡ ಶಾಸಕರಾಗಿ ಕಾರ್ಯನಿರ್ವಹಿಸಿ ಹೆಸರು ಗಳಿಸಿದ್ದರು. ಅದರಲ್ಲೂ ಎಂ.ಎಂ.ಜೆ. ಸದ್ಯೋಜಾತಪ್ಪ ಮತ್ತು ಟಿ. ಭಾಗೀರಥಿ ಮರುಳಸಿದ್ದನಗೌಡ ಆಯಾ ಕಾಲ ಘಟ್ಟದ ರಾಜ್ಯ ಸರ್ಕಾರಗಳಲ್ಲಿ ಕ್ಯಾಬಿನೆಟ್ ಸಚಿವರಾಗಿ ರಾಜ್ಯ ಮಟ್ಟದಲ್ಲಿ ಹೆಚ್ಚು ಪ್ರಚಲಿತರಾಗಿ ಕ್ಷೇತ್ರವನ್ನು ಉತ್ತಮವಾಗಿ ಪರಿಚಯಿಸಿದ್ದರು.
ಪಿ.ಎಚ್. ದೊಡ್ಡರಾಮಣ್ಣ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ತುಸು ಕುತೂಹಲ ಕೆರಳಿಸಿದ್ದರಾದರೂ ಅದನ್ನು ಬಿಟ್ಟರೆ ಬೇರೆ ಆಕಾಂಕ್ಷಿಗಳು ಸಂಭವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ಇದೀಗ ಸ್ವಲ್ಪ ಮಟ್ಟಿಗೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಆದರೆ ಅಂತಿಮವಾಗಿ ಯಾರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು.
65 ಸಾವಿರ ಮತದಾರರು: ಹಗರಿಬೊಮ್ಮನಹಳ್ಳಿ ಕ್ಷೇತ್ರದ ಸುಮಾರು 1.75 ಲಕ್ಷ ಮತದಾರರಲ್ಲಿ ಕೊಟ್ಟೂರಿನದು 65 ಸಾವಿರಕ್ಕೂ ಅಧಿಕ ಪಾಲು ಮಾತ್ರ. ಹೀಗಾಗಿ ಎಲ್ಲ ಬಗೆಯ ರಾಜಕೀಯ ಗಡಿಬಿಡಿಗಳು ಇದೀಗ ಕೊಟ್ಟೂರಿನಿಂದ ದೂರ ಸರಿದಿವೆ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಪಟ್ಟಣದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಬೆಂಬಲ ಕೇಳುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರ ರಚನೆಗೊಂಡಿರುವ ಪರಿಯೇ ಕೊಟ್ಟೂರು ಭಾಗದಲ್ಲಿ ಹಲವು ಬಗೆಯ ಸಮಸ್ಯೆಗಳನ್ನು ಸೃಷ್ಠಿಸಿದೆ. ಕೊಟ್ಟೂರು ಪಟ್ಟಣ ಮತ್ತು 4 ಗ್ರಾಪಂಗಳು ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸೇರಿಕೊಂಡರೂ, ಕೂಡ್ಲಿಗಿ ತಾಲೂಕಿನ ಆಧೀನಕ್ಕೆ ಒಳಪಡುವಂತಾಗಿದೆ. ಸದ್ಯ ಸರ್ಕಾರ ಕೊಟ್ಟೂರನ್ನು ಹೊಸ ತಾಲೂಕೆಂದು ಘೋಷಿಸಿದ್ದು, ಮುಂಬರುವ ಸರ್ಕಾರದ ಕಾಲಕ್ಕೆ ಜಾರಿಗೊಳ್ಳಲಿರುವ ಕೊಟ್ಟೂರು ತಾಲೂಕು ಆಡಳಿತ ವ್ಯಾಪ್ತಿಗೆ ಈ ಎಲ್ಲ ಗೊಂದಲಗಳು ಸಂಪೂರ್ಣ ನಿವಾರಣೆಯಾಗಬಹುದೆಂಬ ಆಶಾ ಭಾವನೆ ಇಲ್ಲಿನ ಜನರದ್ದಾಗಿದೆ.

-ಜಿ. ಸೋಮಶೇಖರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.