ಮಲ್ಲಿಗೆ ನಾಡಲ್ಲಿ ಅಭಿವೃದ್ಧಿ ಕಂಪಿಲ್ಲ
ಹೂವಿನಹಡಗಲಿ: ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶರು 4 ಬಾರಿ ಗೆಲ್ಲಿಸಿ ಅವರಿಗೆ ಸಚಿವ ಸ್ಥಾನ ಗಳಿಸಿಕೊಟ್ಟ ಹೆಗ್ಗಳಿಕೆಗೆ ಪಾತ್ರವಾಗಿದ್ದು ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ. 2008ರ ಕ್ಷೇತ್ರ ಪುನರ್ ವಿಂಗಡಣೆಯಿಂದ ಪ.ಜಾತಿಗೆ ಮೀಸಲು ಕ್ಷೇತ್ರವಾಗಿ ಹೂವಿನಹಡಗಲಿ ತಾಲೂಕು, ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಹೋಬಳಿ ಸೇರಿದಂತೆ ರಚನೆಗೊಂಡಿದೆ.
ಈ ಕ್ಷೇತ್ರದಲ್ಲಿ ಈವರೆಗೂ ಗೆದ್ದ ಅಭ್ಯರ್ಥಿಗಳ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದೆ. ಕಳೆದ 50 ವರ್ಷಗಳ ಅವಧಿಯಲ್ಲಿ 25 ವರ್ಷಗಳು ಎಂಪಿಪಿ ಕುಟುಂಬವೇ ಕ್ಷೇತ್ರ ಪ್ರತಿನಿಧಿಸಿರುವುದು ಇತಿಹಾಸ. ಎಂ.ಪಿ. ಪ್ರಕಾಶರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೇರಿಸಿದ ಕೀರ್ತಿಗೆ ಭಾಜನರಾದ ಕ್ಷೇತ್ರದ ಮತದಾರರು ಅಂದಿನ ಶಾಸಕರು ಎಷ್ಟೇ ಅಭಿವೃದ್ಧಿ ಪರ ಕೆಲಸ ಮಾಡಿದ್ದರೂ ಮತ್ತೊಮ್ಮೆ ಮಣೆ ಹಾಕಿಲ್ಲ ಎಂಬುದು ವಿಶೇಷ.
ಲಿಂಗಾಯತ, ಪ.ಜಾತಿ ಮತಗಳೇ ನಿರ್ಣಾಯಕ
ಕ್ಷೇತ್ರದಲ್ಲಿ 78,318 ಪುರುಷರು, 73,854 ಮಹಿಳೆಯರು ಸೇರಿದಂತೆ ಒಟ್ಟು 1,52,172 ಮತದಾರರು ಇದ್ದಾರೆ. ಇದರಲ್ಲಿ ಸುಮಾರು 52 ಸಾವಿರ ಲಿಂಗಾಯಿತ, 40 ಸಾವಿರ ಪ.ಜಾತಿ, 22 ಸಾವಿರ ಕುರುಬರು, 15 ಸಾವಿರ ವಾಲ್ಮೀಕಿ, 10 ಸಾವಿರ ಅಲ್ಪಸಂಖ್ಯಾತರು ಮತ್ತು 13 ಸಾವಿರ ಇತರೆ ಜಾತಿಗೆ ಸೇರಿದ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಮತಗಳೇ ನಿರ್ಣಾಯಕ. ಹಾಗಾಗಿ ಎಲ್ಲ ಪಕ್ಷಗಳು ಜಾತಿ ಆಧಾರದ ಲೆಕ್ಕಾಚಾರ ಇಟ್ಟುಕೊಂಡೆ ಪ್ರಚಾರದ ಕಡೆ ಮುಖ ಮಾಡಿದ್ದಾರೆ. ಇನ್ನು ಎರಡನೇ ಅತಿದೊಡ್ಡ ಸಮುದಾಯವಾದ ಪ.ಜಾತಿ ಮತಗಳು ಹೆಚ್ಚಿದ್ದರೂ ಎಲ್ಲ ಪಕ್ಷಗಳಿಗೆ ಹಂಚಿಹೋಗುತ್ತವೆ. ಆಗ ಉಳಿದ ಜಾತಿಗಳ ಮತಗಳನ್ನು ಅಭ್ಯರ್ಥಿಗಳು ಅವಲಂಬಿಸುವುದು ಅನಿವಾರ್ಯ.
ಪ್ರಚಾರದಲ್ಲಿ ಅಭ್ಯರ್ಥಿಗಳು: ಈಗಾಗಲೇ ಬಿಜೆಪಿಯಿಂದ ಹಾಲಿ ಶಾಸಕ ಚಂದ್ರನಾಯ್ಕ, ಕೆಜೆಪಿಯಿಂದ ಮಧುನಾಯ್ಕ, ಕಾಂಗ್ರೆಸ್ನಿಂದ ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಬಿಎಸ್ಪಿಯಿಂದ ಕಟೆಪ್ಪನವರ ಉಚ್ಚೆಂಗೆಪ್ಪ ಇವರ ಹೆಸರುಗಳು ಘೋಷಣೆಯಾಗಿವೆ. ಎಲ್ಲರೂ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಕಾಂಗ್ರೆಸ್ಗೆ ಬಂಡಾಯ ಬೆನ್ನಿಗೆ ಬಿದ್ದ ಬೇತಾಳವಾಗಿದೆ. ಸ್ಥಳೀಯ ಕಾಂಗ್ರೆಸಿಗರು ಈವರೆಗೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ, ಎಂಜಿನಿಯರ್ ರಾಮಾಂಜನಿ ಕೆಜೆಪಿ ಟಿಕೆಟ್ನಿಂದ ವಂಚಿತರಾಗಿ ಬಂಡಾಯವೆದ್ದಿದ್ದಾರೆ. ಜೆಡಿಎಸ್, ಬಿಎಸ್ಸಾರ್ ಟಿಕೆಟ್ ಯಾರಿಗೆ ಎಂಬುದೇ ತಿಳಿದಿಲ್ಲ. ಕಳೆದ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿ.ಎಸ್. ಯಡಿಯೂರಪ್ಪ ಪರ ಬೀಸಿದ ಅನುಕಂಪದ ಗಾಳಿ ಹಾಗೂ ಪಿ.ಟಿ. ಪರಮೇಶ್ವರ ನಾಯ್ಕ ವಲಸೆ ಅಭ್ಯರ್ಥಿ ಎಂಬ ಎರಡು ಅಂಶ ಇಲ್ಲಿನ ಬಿಜೆಪಿ ಅಭ್ಯರ್ಥಿ ಬಿ. ಚಂದ್ರನಾಯ್ಕ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಅಭಿವೃದ್ಧಿ ಅಷ್ಟಕ್ಕಷ್ಟೇ: ಕ್ಷೇತ್ರದಲ್ಲಿ ಹೇಳಿಕೊಳ್ಳುವ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ತುಂಗಭದ್ರೆ ಸುತ್ತುವರೆದರೂ ಎಲ್ಲ ಹಳ್ಳಿಗಳಿಗೂ ಸಮರ್ಪಕ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ. ಆದರೂ, ಈಗಾಗಲೇ 78 ಹಳ್ಳಿಗಳಿಗೆ ಸಂಯುಕ್ತ ಕುಡಿಯುವ ನೀರಿನ ಯೋಜನೆ, ಸಿಂಗಟಾಲೂರು ಯೋಜನೆಯಿಂದ 23 ಹಳ್ಳಿಗಳ ರೈತರಿಗೆ ನೀರು, 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, 100 ಹಾಸಿಗೆ ಆಸ್ಪತ್ರೆ ನಿರ್ಮಾಣಗೊಂಡಿದೆ. ಶುದ್ಧ ಕುಡಿಯುವ ನೀರಿಲ್ಲದೇ ಕಂಗೆಟ್ಟಿರುವ ಪಟ್ಟಣದ ಜನತೆಗೆ 2ನೇ ಹಂತದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕ್ಷೇತ್ರದ ಜನತೆ ಬಿಜೆಪಿ ಸರ್ಕಾರದಿಂದ ನಿರೀಕ್ಷೆ ಮಾಡಿದ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿ ನಡೆದಿಲ್ಲ. ಇದು ಮತದಾರರಲ್ಲಿ ಅಲ್ಪಮಟ್ಟಿನ ಅಸಮಾಧಾನ ಮೂಡಿಸಿದೆ.
ನಿರೀಕ್ಷೆ ಹುಸಿ ಮಾಡಿಲ್ಲ
ಸಿಂಗಟಾಲೂರು ಏತ ನೀರಾವರಿ ಯೋಜನೆ ಬಹುದೊಡ್ಡ ಕೊಡುಗೆ. ತಾವು ರು. 450 ಕೋಟಿ ಅನುದಾನ ತಂದು ಲೋಕಾರ್ಪಣೆ ಮಾಡಿ ಕ್ಷೇತ್ರದ 23 ಹಳ್ಳಿಗಳ 45 ಸಾವಿರ ಎಕರೆ ರೈತರ ಜಮೀನುಗಳಿಗೆ ನೀರುಣಿಸುತ್ತಿದೆ. 10 ಕೆರೆಗಳಿಗೆ ನೀರು ತುಂಬಿಸುವ ಭಾಗ್ಯ ಬಂದಿದೆ. ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಅಭಿವೃದ್ಧಿ, ಪಟ್ಟಣಕ್ಕೆ 2ನೇ ಹಂತದ ಕುಡಿಯುವ ನೀರಿನ ಯೋಜನೆ, 100 ಹಾಸಿಗೆ ಆಸ್ಪತ್ರೆ ನಿರ್ಮಾಣ, ರಾಣಿ ಚನ್ನಮ್ಮ, ಮೊರಾರ್ಜಿ ವಸತಿ ಶಾಲೆ, ಬಸವ ವಸತಿ ಯೋಜನೆಯಡಿ 10 ಸಾವಿರ ಮನೆ ಮಂಜೂರು, ವಾಲ್ಮೀಕಿ, ಕನಕ ಭವನ ನಿರ್ಮಾಣ, ಕ್ಷೇತ್ರದ ಪ್ರತಿ ಹಳ್ಳಿಗೂ ತುಂಗಭದ್ರಾ ನದಿಯಿಂದ ಸಂಯುಕ್ತ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗಿದೆ. ಮತದಾರರ ನಿರೀಕ್ಷೆಯನ್ನು ಯಾವ ಕಾರಣಕ್ಕೂ ಹುಸಿ ಮಾಡಿಲ್ಲ. - ಬಿ. ಚಂದ್ರನಾಯ್ಕ, ಬಿಜೆಪಿ ಹಾಲಿ ಶಾಸಕ.
ಅಭಿವೃದ್ಧಿ ಶೂನ್ಯ
5 ವರ್ಷಗಳಲ್ಲಿ ಕ್ಷೇತ್ರಕ್ಕೆ ಹೊಸ ಯೋಜನೆಗಳು ಬಂದಿಲ್ಲ, ಈ ಹಿಂದೆ ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡಲು ಎಂ.ಪಿ. ಪ್ರಕಾಶರು ಕನಸು ಕಂಡಿದ್ದ ಯೋಜನೆಗಳನ್ನೇ ಅನುಷ್ಠಾನ ಮಾಡಿದ್ದಾರೆ ಹೊರತು, ಶಾಸಕರ ಶ್ರಮವಿಲ್ಲ. ಸರ್ಕಾರ ನೀಡುವ ಅನುದಾನ ಬಿಟ್ಟರೆ ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡಿಲ್ಲ. ಹಳ್ಳಿಗಳ ರಸ್ತೆಗಳು ಅಭಿವೃದ್ಧಿ ಕಾಣದೇ ಕಿತ್ತು ಹೋಗಿರುವ ರಸ್ತೆಗಳೇ ಗತಿಯಾಗಿವೆ, ಸಾರ್ವಜನಿಕರ ಯಾವುದೇ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿಲ್ಲ, ಒಟ್ಟಾರೆ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ.
- ಪಿ.ಟಿ. ಪರಮೇಶ್ವರ ನಾಯ್ಕ, ಕಾಂಗ್ರೆಸ್ ಮಾಜಿ ಶಾಸಕ.
-ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

