ಬಳ್ಳಾರಿ: 14 ಸೆಕ್ಟರ್ ಅಧಿಕಾರಿಗಳ ತಂಡ ರಚನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 8
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಚುನಾವಣೆ ನಡೆಸಲು ನಿಯೋಜಿರುವ 14 ವಲಯ (ಸೆಕ್ಟರ್) ಅಧಿಕಾರಿಗಳ ತಂಡವು, ಇಂದಿನಿಂದ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಅವರ ಕಾರ್ಯ ವ್ಯಾಪ್ತಿಯ ಎಲ್ಲ ಚುನಾವಣಾ ಪ್ರಕ್ರಿಯೆಯ ಮತಗಟ್ಟೆಗಳ ಮೇಲ್ವಿಚಾರಣೆ ವಿಶೇಷ ಕಾರ್ಯನಿರ್ವಾಹಕ ತಂಡಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ, ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚುನಾವಣಾಧಿಕಾರಿಯೂ ಆಗಿರುವ ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ ತಿಳಿಸಿದರು.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 229 ಮತಗಟ್ಟೆಗಳಿದ್ದು, ಸೆಕ್ಟರ್ ಅಧಿಕಾರಿಗಳಿಗೆ ತಲಾ ಸುಮಾರು 20 ಮತಗಟ್ಟೆಗಳು ಬರುತ್ತವೆ. ಸೆಕ್ಟರ್ ಅಧಿಕಾರಿಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ನಿರ್ವಹಿಸಿ, ಚುನಾವಣಾಧಿಕಾರಿಗಳಿಗೆ ವರದಿ ಮಾಡುವುದು. ಸೆಕ್ಟರ್ ಅಧಿಕಾರಿಗಳು ನಿಗಧಿಪಡಿಸಿದ ಮತಗಟ್ಟೆಗಳಿಗೆ ಸಂಚರಿಸಿ, ಸಾಮಾಜಿಕ ಶಾಂತಿ ಕದಡುವವರ ಬಗ್ಗೆ, ಮತದಾರರಿಗೆ ಆಸೆ, ಆಮಿಷ ಒಡ್ಡುವವರ ಬಗ್ಗೆ, ಸೂಕ್ಷ್ಮ ಪರಿಸ್ಥಿತಿ, ಚುನಾವಣೆಗೆ ನಿಯೋಜಿತರ ಕಾರ್ಯವೈಖರಿಯೂ ಸೇರಿದಂತೆ ಮಾಹಿತಿಯನ್ನು ಸಂಗ್ರಹಿಸಿ, ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದರೆ ಎಂಸಿಸಿ ತಂಡದ ಗಮನಕ್ಕೂ ತರಬೇಕು ಎಂದು ಹೇಳಿದರು.
ಸಂಪೂರ್ಣ ಜವಾಬ್ದಾರಿ: ಸ್ಥಳೀಯ ಸರ್ಕಾರೇತರ ಸಂಸ್ಥೆಗಳು, ಜನರ ಸಂಪರ್ಕದಲ್ಲಿದ್ದು ಚುನಾವಣೆಗೆ ಸಂಬಂಧಿಸಿದ ಯಾವುದೇ ತರಹದ ಮಾಹಿತಿಯನ್ನು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಕ್ಷಣ ಒದಗಿಸುವುದು. ಇವಿಎಂ ಬ್ಯಾಲೆಟ್ ಯುನಿಟ್ ಸಿದ್ಧಪಡಿಸುವಲ್ಲಿ ಎಂಜಿನಿಯರುಗಳೊಂದಿಗೆ ಉಸ್ತುವಾರಿ ಜವಬ್ದಾರಿಯನ್ನು ಹೊಂದುವುದು. ಚುನಾವಣೆ ಪ್ರಕ್ರಿಯೆಯಲ್ಲಿ ಸುಮಾರು 94 ವಿಧದ ಅರ್ಜಿ ನಮೂನೆ ಪರಿಕರಗಳಿರುತ್ತದೆ. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿ, ಚುನಾವಣಾ ಮತಗಟ್ಟೆಗೆ ಒದಗಿಸಬೇಕಾದ ನಮೂನೆಗಳು, ಲಕೋಟೆಗಳು ಹಾಗೂ ಇನ್ನಿತರೆ ಸಾಮಗ್ರಿಗಳನ್ನು ವ್ಯವಸ್ಥೆಗೊಳಿಸುವ ಸಂಪೂರ್ಣ ಉಸ್ತುವಾರಿ ವಹಿಸಬೇಕು ಎಂದರು.
ದಿನಚರಿ ಸಲ್ಲಿಸಿ: ಚುನಾವಣಾಧಿಕಾರಿಗಳವರಿಗೆ ಅವರ ಸೆಕ್ಟರ್ ವ್ಯಾಪ್ತಿಯ ಮಾಹಿತಿಯನ್ನು ಪ್ರತಿದಿನ ಲಿಖಿತವಾಗಿ ದಿನಚರಿಯನ್ನು ಸಲ್ಲಿಸುವುದು. ಮತದಾನ ಜರುಗುವ ದಿನ ಮತಗಟ್ಟೆಗಳಲ್ಲಿ ಮಾಕ್ ಪೋಲ್ ಮಾಡಿದ ಬಗ್ಗೆ ದೃಢಿಕರಿಸುವುದು. ಮತಗಟ್ಟೆಗಳಿಗೆ ಮೂಲ ಸೌಕರ್ಯಗಳ ಸೌಲಭ್ಯ, ಮತದಾನದ ಅವಧಿಯಲ್ಲಿ ಮತದಾರರ ನೋಂದಣಿಯಲ್ಲಿ ಮತದಾರರ ಸಹಿ ಪಡೆಯುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳುಬೇಕು. ಬ್ಯಾಲೆಟ್ ಪೇಪರ್ ಅಕೌಂಟ್ನಲ್ಲಿ ಬ್ಯಾಲೆಟ್ ಮತ್ತು ಕಂಟ್ರೋಲ್ ಯುನಿಟ್ ಸಂಖ್ಯೆಗಳನ್ನು ಸರಿಯಾಗಿ ನಮೂದಿಸಿರುವ ಬಗ್ಗೆ ಪರಿಶೀಲಿಸುವುದು. ಓಟರ್ಸ್ ಸ್ಲಿಪ್ ಬಿಎಲ್ಒಗಳಿಂದ ಹಂಚುವ ಕುರಿತು ಸಂಪೂರ್ಣ ಮೇಲುಸ್ತುವಾರಿ ವಹಿಸಿ, ಸರಿಯಾದ ರೀತಿಯಲ್ಲಿ ವಿತರಣೆ ಆಗುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು. ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತದಾನ ಮಾಡುವ ಬಗ್ಗೆಯೂ ಮತದಾರರಿಗೆ ಅರಿವು ಮೂಡಿಸಬೇಕು. ಒಟ್ಟಾರೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಯಲು ಸೆಕ್ಟರ್ ಅಧಿಕಾರಿಗಳ ಪಾತ್ರ ಮಹತ್ತರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಬೇಕೆಂದರು.
ಸಹಾಯಕ ಚುನಾವಣಾಧಿಕಾರಿ ಅಫ್ರುದ್ದೀನ್, ಸೆಕ್ಟರ್ ಅಧಿಕಾರಿಗಳಾದ ಡಿಯುಡಿಸಿ ಅಭಿಯಂತರರಾದ ಬಿ. ರಾಜೇಶೇಖರ, ಎಸ್. ರಾಜಶೇಖರ್, ಕೆಎಸ್ಡಬ್ಲ್ಯೂ ಎಂಜಿನಿಯರ್ ನಾರಾಯಣ ರಾವ್, ಸಹಾಯಕ ಅಭಿಯಂತರರಾದ ವೀರನಗೌಡ, ಶೇಕ್ಇಕ್ಬಾಲ್, ಶಿಶು ಯೋಜನಾಭಿವೃದ್ಧಿ ಅಧಿಕಾರಿ ಬಿ. ಸೋಮಶೇಖರಪ್ಪ, ತಾಂತ್ರಿಕ ಎಂ. ರಮೇಶ್, ಸೈಯ್ಯದ್ ಅಥರ್ ಮೊಹಿದ್ದೀನ್, ಅಬ್ದುಲ್ ಖಾನ್, ಶಿವಣ್ಣ, ಮಾಸ್ಕಿ, ವಾಗ್ಮೋರೆ, ಗೋಪಿನಾಥ್, ಲಕ್ಷ್ಮಿಪತಿ ನಾಯ್ಕ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

