ಶಾಂತ, ಮುಕ್ತ ಚುನಾವಣೆಗೆ ಜಿಲ್ಲಾಡಳಿತ ಸಜ್ಜು
ಬಳ್ಳಾರಿ: ನಿರೀಕ್ಷೆಯಂತೆ ಸ್ಥಳೀಯ ಸಂಸ್ಥೆ ಚುನಾವಣೆ ಶಾಂತಿಯುತವಾಗಿ ನಡೆದಿರುವ ಹಿನ್ನೆಲೆಯಲ್ಲಿ ಇದೀಗ ವಿಧಾನಸಭಾ ಚುನಾವಣೆಯನ್ನು ಶಾಂತಿ, ಮುಕ್ತ, ನಿರ್ಭೀತಿಯಿಂದ ನಡೆಸಲು ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ಹೇಳಿದರು.
ಮುಕ್ತ ಚುನಾವಣೆಗೆ ಮಾಡಿಕೊಂಡಿರುವ ವ್ಯವಸ್ಥೆಯ ಕುರಿತು ಬುಧವಾರ ಎಸ್ಪಿ ಡಾ. ಚಂದ್ರಗುಪ್ತಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವಿದ್ದೇವೆ ಧೈರ್ಯ, ಮುಕ್ತವಾಗಿ ಮತದಾನ ಮಾಡಿ ಎಂದು ಮತದಾರರಿಗೆ ಧೈರ್ಯ ತುಂಬಿದರು. ಮತದಾನಕ್ಕೆ ದುಡ್ಡು ಪಡೆದರೂ 1 ವರ್ಷ ಜೈಲು ಶಿಕ್ಷೆ ಎಂದು ತಿಳಿಸುವ ಮೂಲಕ ಮತದಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ.
ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು ಏ. 10ರಿಂದಲೇ ನಾಮಪತ್ರ ಸಲ್ಲಿಕೆ ಶುರುವಾಗಿದೆ. ದೇವಸ್ಥಾನಗಳಲ್ಲಿ ಮತ ಪ್ರಚಾರ ನಡೆಸಿದರೆ 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇನ್ನು ಪ್ರತಿ ಚಟುವಟಿಕೆ ಮೇಲೆ ನಿಗಾ ವಹಿಸಲು ಆಯೋಗದಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಮತದಾರರಿಗೆ ಗರಿಷ್ಠ ಪ್ರಮಾಣದ ರಕ್ಷಣೆ ನೀಡುತ್ತಿದ್ದು, ಅಂಜಿಕೆಯಿಲ್ಲದೆ ಎಲ್ಲರೂ ಮುಕ್ತವಾಗಿ ಮತದಾನ ಮಾಡಬಹುದು ಎಂದರು.
15,29,098 ಮತದಾರರು: ಜಿಲ್ಲೆಯಲ್ಲಿ ಒಂದು ಸಾವಿರ ಪುರುಷ ಮತದಾರರಿಗೆ 981 ಮಹಿಳಾ ಮತದಾರರು ಇದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 15,29,098 ಮತದಾರರಿದ್ದಾರೆ. ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ 30 ಸಾವಿರ ಮತದಾರರು ಅರ್ಜಿ ಸಲ್ಲಿಸಿದ್ದು, ದಾಖಲೆಗಳು ಸೂಕ್ತವಾಗಿದ್ದರೆ ಸೇರ್ಪಡೆ ಕಾರ್ಯ ನಡೆಯುತ್ತದೆ. ಎರಡು ಕಡೆ ಮತದಾನ ಹಕ್ಕು ಪಡೆದಿದ್ದರೆ ಕಾನೂನು ಪ್ರಕಾರ ಅಪರಾಧವಾಗುತ್ತದೆ. ಇದಕ್ಕೆ ಜೈಲು ಶಿಕ್ಷೆಯೂ ಆಗಬಹುದು ಎಂದ ಅವರು, ಚುನಾವಣೆಗೆ ಒಟ್ಟು 1,908 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅಭ್ಯರ್ಥಿಗಳ ಚುನಾವಣಾ ಖರ್ಚು ವೆಚ್ಚದ ಮೇಲೆ ನಿಗಾ ಇಡಲು 5 ವೀಕ್ಷಕರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ 9 ಕ್ಷೇತ್ರಗಳಲ್ಲಿ, 9 ತಂಡಗಳನ್ನು ರಚಿಸಲಾಗಿದ್ದು, 9 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 11 ಸ್ಕ್ವಾಡ್ಗಳನ್ನು ನೇಮಿಸಲಾಗಿದೆ. 27 ಹೋಬಳಿ ಮಟ್ಟದ ಮೊಬೈಲ್ ಸ್ಕ್ವಾಡ್ಗಳು ಚುನಾವಣೆ ಸೂಕ್ತ ರೀತಿಯಿಂದ ನಡೆಯಲು ನೆರವಾಗುತ್ತವೆ ಎಂದರು.
10 ಪ್ರಕರಣ ದಾಖಲು: ಎಸ್ಪಿ ಚಂದ್ರಗುಪ್ತಾ ಮಾತನಾಡಿ, ಮತದಾನದ ಹಿನ್ನೆಲೆಯಲ್ಲಿ 3 ಸಾವಿರ ಪ್ಯಾರಮಿಲಿಟರಿ ಪಡೆ ನಗರಕ್ಕೆ ಆಗಮಿಸುತ್ತಿವೆ. 2,200 ಪೊಲೀಸ್ ಸಿಬ್ಬಂದಿ, 500 ಗೃಹರಕ್ಷಕ ದಳವನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿದ್ದೇವೆ. ಈವರೆಗೆ 10 ಪ್ರಕರಣಗಳು ದಾಖಲಾಗಿದ್ದು, ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆ ವೇಳೆ ರು. 53,42,361 ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯದ ಅನುಮತಿ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
40 ಕಡೆ ಚೆಕ್ಪೋಸ್ಟ್: ರೌಡಿ ಶೀಟರ್ಗಳ ಮೇಲೆ ನಿಗಾವಹಿಸಲಾಗಿದ್ದು, ಕೆಲವರಿಂದ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗಿದೆ. ಹಣದ ಸಾಗಾಣಿಕೆ ಮಾಡದಂತೆ, ಅಕ್ರಮಗಳು ನಡೆಯದಂತೆ ಜಿಲ್ಲೆಯ 40 ಕಡೆಗಳಲ್ಲಿ ಚೆಕ್ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗಗಳಿಗೆ ತೆರಳುವ ಕಾಲು ದಾರಿ ಹಾಗೂ ಬಂಡಿಗಳಲ್ಲಿ ಸಾಗಿಸುವ ವಸ್ತುಗಳ ಮೇಲೂ ನಿಗಾ ಇಟ್ಟಿದ್ದೇವೆ. ನಗರಕ್ಕೆ ಆಗಮಿಸುವ ಹೆಲಿಕಾಪ್ಟರ್ಗಳು 24 ಗಂಟೆಗಳ ಪೂರ್ವದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಒಟ್ಟಾರೆಯಾಗಿ ಚುನಾವಣೆಗೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

