ಬಳ್ಳಾರಿ

ಮುಕ್ತ ಚುನಾವಣೆಗೆ ಜಿಲ್ಲಾಡಳಿತ ಸಂದೇಶ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 12
ಭಯವಿಲ್ಲದೆ ಬನ್ನಿ, ತಲೆ ಎತ್ತಿ ಬನ್ನಿ ಮತಗಟ್ಟೆಗೆ, ನೀವು ಮತ್ತು ನಿಮ್ಮ ಹಕ್ಕನ್ನು ರಕ್ಷಿಸಲು ನಾವು ಪಣತೊಟ್ಟಿದ್ದೇವೆ ಎಂಬ ಸಂದೇಶವಿರುವ ಬ್ಯಾನರ್‌ಗಳು ಬಳ್ಳಾರಿ ಜಿಲ್ಲೆಯಡೆ ಕಾಣಿಸುತ್ತಿವೆ. ಮೊದಲಿನಿಂದಲೂ ಗೊಂದಲ, ಗಲಾಟೆ, ಸಿನಿಮಾ ರೀತಿ ಘಟನೆಗೆ ಹೆಸರಾದ ಬಳ್ಳಾರಿ ರಾಜಕಾರಣದಿಂದ ಭಯಗೊಂಡಿದ್ದ ಜನರಲ್ಲಿ ಭಯ, ಗೊಂದಲಗಳನ್ನು ದೂರ ಮಾಡಲು ಮತ್ತು ಈ ಬಾರಿ ಮುಕ್ತ ಚುನಾವಣೆ ನಡೆಯುತ್ತದೆ ಎಂದು ಜಿಲ್ಲಾಡಳಿತ ಬಳ್ಳಾರಿ ಜಿಲ್ಲಾ ಮತದಾರರಿಗೆ ಈ ಮೂಲಕ ಅಭಯ ನೀಡುತ್ತಿದೆ.
ಈ ಬಾರಿಯ ಚುನಾವಣೆಯನ್ನು ಮುಕ್ತವಾಗಿ ನಡೆಸಲು ಬಳ್ಳಾರಿ ಜಿಲ್ಲಾಡಳಿತ ಬ್ಯಾನರ್‌ಗಳನ್ನು ಬಳಸಿಕೊಂಡು ಜನರಲ್ಲಿ ಜಾಗೃತಿ, ಮುಕ್ತ ಚುನಾವಣೆಗೆ ವಿಭಿನ್ನ ಮಾರ್ಗ ಹಿಡಿದಿದೆ. ಮತದಾರರ ಪಕ್ಕದಲ್ಲೇ ಅರೆಸೇನಾ ಪಡೆಯ ಸಿಬ್ಬಂದಿ ನಿಂತು ತೀವ್ರ ಭದ್ರತೆ ನೀಡಿರುವ ಫೋಟೋ ಹಾಗೂ ಉತ್ತಮ ಸಂದೇಶವಿರುವ ಬ್ಯಾನರ್‌ಗಳನ್ನು ಜಿಲ್ಲೆಯ ವಿವಿಧೆಡೆ ಅಳವಡಿಸಿದೆ. ಆ ಮೂಲಕ ಶಾಂತ ಚುನಾವಣೆಗೆ ನಾಂದಿ ಹಾಡಿದೆ.
ಬ್ಯಾನರ್‌ನಲ್ಲಿ ಮತದಾರರಲ್ಲಿ ಸ್ವಾಭಿಮಾನ ಹುಟ್ಟುಹಾಕಿ, ಮುಕ್ತ, ನ್ಯಾಯಸಮ್ಮತ, ಆಮಿಷ ರಹಿತ, ಭವಿಷ್ಯದ ಉತ್ತಮ ಸಮಾಜಕ್ಕೆ ಬೇಕಾಗುವ ಸಮಾಜವನ್ನು ಮತಾದರರೇ ರೂಪಿಸಿಕೊಳ್ಳಬೇಕೆಂಬ ರವೀಂದ್ರನಾಥ್ ಟ್ಯಾಗೋರ್ ಅವರ ಉತ್ತಮ ಸಂದೇಶ ಸಾರುವ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಮೊದಲ ಬಾರಿಗೆ ಚುನಾವಣೆಯಲ್ಲಿ ಇಂತಹ ವ್ಯವಸ್ಥೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಡಿಫರೆಂಟ್ ರಾಜಕಾರಣಕ್ಕೆ, ವಿಭಿನ್ನ ವ್ಯವಸ್ಥೆ: ಬಳ್ಳಾರಿಯಲ್ಲಿ ಕೊಂಚ ಆಂಧ್ರಪ್ರದೇಶದ ರಾಜಕೀಯ ಟಚ್ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ರಾಜಕೀಯ ಇಡೀ ರಾಜ್ಯಕ್ಕಿಂತ ಕೊಂಚ ವಿಭಿನ್ನ. ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರದಲ್ಲಿ ಏನೋ ಗೊಂದಲಗಳು ನಡೆಯುತ್ತಿರುತ್ತವೆ ಎಂಬುದಕ್ಕೆ ಹಿಂದಿನ ಕೆಲ ಚುನಾವಣೆಯ ಮತದಾನ ಪೂರ್ವದಲ್ಲಿ ನಡೆದ ನಾಟಕೀಯ ಬೆಳವಣಿಗೆಯಿಂದ ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಗೊಂದಲಗಳಿಗೆ ಇತಿಶ್ರೀ ಹಾಡಬೇಕೆಂದು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ. ಈಗಾಗಲೆ ಮಾಧ್ಯಮಗಳ ಮೂಲಕ ಹಾಗೂ ವಿವಿಧ ಇಲಾಖೆಗಳ ಕಚೇರಿ ಮೇಲೆ ಮತದಾನದ ಕುರಿತು ಜಾಗೃತಿ ಮೂಡಿಸಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಬಳ್ಳಾರಿ ರಾಜಕೀಯದ ಚುನಾವಣೆ ಬಗ್ಗೆ ಯಾರು ಭಯಗೊಳ್ಳುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಬ್ಯಾನರ್ ಮೂಲಕ ಸಾರುತ್ತಿದೆ.
30 ಅರೆಸೇನಾ ತುಕಡಿಗಳು: ಬೆಂಗಳೂರು, ಬೆಳಗಾವಿ ಬಿಟ್ಟರೆ ಬಳ್ಳಾರಿಯಲ್ಲಿ ಅತಿಹೆಚ್ಚು ಅರೆಸೇನಾ ಪಡೆಯನ್ನು ನೇಮಕ ಮಾಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 30 ಅರೆಸೇನಾ ತುಕಡಿಗಳು ಕಾರ್ಯನಿರ್ವಹಿಸಲಿವೆ. ಸುಮಾರು 3000 ಅರೆಸೇನಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ 40 ಚೆಕ್‌ಪೋಸ್ಟ್‌ಗಳಲ್ಲಿ ಅರೆಸೇನಾ ಪಡೆಗಳನ್ನು ನೇಮಕ ಮಾಡುವ ಮೂಲಕ ತೀವ್ರ ಭದ್ರತೆ ನೀಡಲಾಗಿದೆ. ಕೇವಲ ಚೆಕ್‌ಪೋಸ್ಟ್ ಮಾತ್ರವಲ್ಲದೆ ರಹದಾರಿಗಳಲ್ಲಿ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಜಾಹೀರಾತಿಗೆ ಸೀಮಿತವಾಗಿದ್ದ ಬ್ಯಾನರ್‌ಗಳನ್ನು ಇದೀಗ ಜಿಲ್ಲೆಯ 50ಕ್ಕೂ ಹೆಚ್ಚು ಕಡೆಗೆ ಜಾಗೃತಿ ಕುರಿತ ಸಂದೇಶವನ್ನು ಸಾರಲು ಬಳಸಿಕೊಳ್ಳಲಾಗಿದೆ.
ಬ್ಯಾನರ್ ನೋಡಿದಾಕ್ಷಣ ನಿರ್ಭೀತಿ: ಜಿಲ್ಲಾಡಳಿತ ಅಳವಡಿಸಿರುವ ಬ್ಯಾನರ್‌ಗಳನ್ನು ನೋಡಿದಾಕ್ಷಣ ಈ ಬಾರಿ ಜಿಲ್ಲೆಯಲ್ಲಿ ಭದ್ರತೆ ಹೇಗಿದೆ ಎಂಬುದನ್ನು ಬಿಂಬಿಸುತ್ತದೆ. ಮತಗಟ್ಟೆಯಲ್ಲಿ ಮತದಾರರು ಸಾಲಾಗಿ ನಿಂತಿದ್ದರೆ ಅವರ ಪಕ್ಕದಲ್ಲೇ ಅರೆಸೇನಾ ಪಡೆಯ ಯೋಧನೊಬ್ಬ ಬಂದೂಕು ಹಿಡಿದು ನಿಂತಿರುವ ದೃಶ್ಯ ಬ್ಯಾನರ್‌ನಲ್ಲಿದೆ. ಇದನ್ನು ನೋಡಿದರೆ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಅಡ್ಡ ಮತದಾನ, ಗೋಜು ಗೊಂದಲಗಳಿಗೆ ಅವಕಾಶವೆ ಇರುವುದಿಲ್ಲ ಎಂಬ ಸಂದೇಶ ಕಾಣಸಿಗುತ್ತದೆ. ಇನ್ನು ಮುಕ್ತ ಮತದಾನಕ್ಕೆ ಬೇಕಾಗುವ ಎಲ್ಲ ಸಿದ್ಧತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ.

ಮುಕ್ತ ಮತದಾನಕ್ಕೆ ಪ್ರೇರಣೆ
ಮತದಾರರು ನಿರ್ಭೀತಿಯಿಂದ ಮುಕ್ತ ಮತದಾನ ಮಾಡಬೇಕು. ಭವಿಷ್ಯದ ಬಗ್ಗೆ ತಿಳಿವಳಿಕೆ ಇಟ್ಟುಕೊಂಡು ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಇಂತಹ ವ್ಯವಸ್ಥೆ ಮಾಡಲಾಗಿದೆ. ಮುಕ್ತ ಮತದಾನಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದಾಗಿ ಜಿಲ್ಲೆಯ 50ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಯಾನರ್ ಅಳವಡಿಸಿದ್ದೇವೆ. ಜಾಗೃತಿಯ ಒಂದು ಭಾಗವಾಗಿಯೇ ಬ್ಯಾನರ್ ಬಳಕೆ ಮಾಡಲಾಗಿದೆ.
- ಡಾ. ಚಂದ್ರಗುಪ್ತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.