ಬಳ್ಳಾರಿ ಅಗ್ನಿಶಾಮಕ ಠಾಣೆಗೂ ನೀರಿಲ್ಲ!
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 14
ಬಿಸಿಲನಾಡು ಬಳ್ಳಾರಿಯಲ್ಲಿ ಅಗ್ನಿಶಾಮಕ ಠಾಣೆಯಲ್ಲೂ ನೀರಿಗೆ ಬರ! ಮೇಲಿಂದ ಮೇಲೆ ಅಗ್ನಿ ಅನಾಹುತಗಳು ಸಂಭವಿಸಿದರೆ ಅಗ್ನಿಶಾಮಕ ಇಲಾಖೆ ನೀರಿನ ಸಮಸ್ಯೆ ಎದುರಿಸಲಿದೆ. ಅಗ್ನಿದುರಂತಗಳು ಸಂಭವಿಸದಿರಲಿ ಎಂದು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾರ್ಥನೆ ಮಾಡುವ ಪರಿಸ್ಥಿತಿ ಇದೆ.
ಹೇಳಿ ಕೇಳಿ ಇದು ಬೇಸಿಗೆ. ಬಳ್ಳಾರಿ, ರಾಯಚೂರಿನಲ್ಲಿ ವಿಪರೀತ ಅಗ್ನಿದುರಂತಗಳು ಸಂಭವಿಸುವುದರಿಂದ ನೀರಿನ ಅಗತ್ಯ ಜಾಸ್ತಿ. ಎರಡು ವರ್ಷಗಳಿಂದ ನೀರಿನ ಕೊರತೆ ಹೆಚ್ಚುತ್ತಾ ಸಾಗಿದೆ. ಖಾಸಗಿಯವರ ಮನೆ ಬಾಗಿಲಿಗೆ ಹೋಗಿ ನೀರಿಗೆ ದುಂಬಾಲು ಬೀಳಬೇಕಾಗಿದೆ. ಕೆಲವೊಮ್ಮೆ ಖಾಸಗಿಯಾಗಿ ನೀರು ಖರೀದಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸಿದ ನಿದರ್ಶನಗಳೂ ಇವೆ.
ಸೊರಗುತ್ತಿರುವ ಇಲಾಖೆ: ಅಗ್ನಿಶಾಮಕ ಇಲಾಖೆಗಾಗಿ ಮಹಾನಗರ ಪಾಲಿಕೆ ಪ್ರತ್ಯೇಕ ನೀರಿನ ಸರಬರಾಜು ಮಾಡಬೇಕೆಂಬ ನಿಯಮವಿದೆ. ಆದರೆ ಬಳ್ಳಾರಿಯಲ್ಲಿ ಈ ವ್ಯವಸ್ಥೆ ಮಾಡಿಲ್ಲ. ಗೃಹಬಳಕೆಗಾಗಿ ನೀರು ಬಿಡುವಾಗಲೇ ಅಗ್ನಿಶಾಮಕ ಇಲಾಖೆಗೂ ನೀರು ಬರುತ್ತದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳಿಗೊಮ್ಮೆ ನೀರು ಬರುತ್ತದೆ. ಮನೆಬಳಕೆ ನೀರು ಬಿಡುವುದು ವಿಳಂಬವಾದರೆ ಅಗ್ನಿಶಾಮಕ ಇಲಾಖೆಗೂ ನೀರಿಲ್ಲ!
ಗಮನ ಹರಿಸದ ಪಾಲಿಕೆ: ಬಳ್ಳಾರಿಯ ಅಗ್ನಿಶಾಮಕ ಇಲಾಖೆ ಪ್ರಾದೇಶಿಕ ಅಧಿಕಾರಿಗಳ ಕಚೇರಿಯಲ್ಲಿ 50 ಸಾವಿರ ಲೀ. ಸಾಮರ್ಥ್ಯದ ಒಂದು ಟ್ಯಾಂಕರ್ ಮಾತ್ರ ಇದೆ. 10 ವರ್ಷಗಳ ಹಿಂದೆ ಹಾಕಿಸಿದ ಬೋರ್ವೆಲ್ನಿಂದ ಒಂದುವರೆ ಇಂಚು ನೀರು ಮಾತ್ರ ಬರುತ್ತದೆ. ಠಾಣೆಯ ಅಗತ್ಯವನ್ನೂ ಇಷ್ಟೇ ನೀರು ಪೂರೈಸಬೇಕು. ನೀರಿನ ಸಮಸ್ಯೆ ಬಗ್ಗೆ ಪಾಲಿಕೆ ಗಮನ ಸೆಳೆದಾಗ ಮೂರ್ನಾಲ್ಕು ತಿಂಗಳ ಹಿಂದೆ ಬೋರ್ ಹಾಕಿದ್ದರು. ಆದರೆ ಅದಕ್ಕೆ ಮೋಟರ್ ಅಳವಡಿಸದೆ ಇನ್ನೂ ಬಳಕೆಗೆ ಸಿಕ್ಕಿಲ್ಲ.
ಅಗ್ನಿ ದುರಂತಗಳಲ್ಲಿ ಬೆಂಕಿ ನಂತಿಸಲು ನೀರಿಲ್ಲದೆ ಸಾಧ್ಯವಿಲ್ಲ. ಹೀಗಾಗಿ, ಅಗ್ನಿಶಾಮಕ ದಳ ಖಾಸಗಿಯಾಗಿ ನೀರು ಪಡೆದು ಅಥವಾ ಖರೀದಿಸಿ ಕಾರ್ಯಾಚರಣೆ ನಡೆಸಿದ್ದಿದೆ. ನಿಯಮಗಳ ಪ್ರಕಾರ ಸ್ಥಳೀಯ ಸಂಸ್ಥೆಗಳೇ ಇಲಾಖೆಗೆ ನೀರು ಪೂರೈಸಬೇಕು. ಇದು ಆಗದಿರುವ ಕಾರಣ ಇನ್ನು ಜನರೇ ಬೆಂಕಿ ನಂದಿಸುವ ಅನಿವಾರ್ಯತೆ ಒದಗಿದರೂ ಆಶ್ಚರ್ಯವಿಲ್ಲ.
ಬಾವಿ ತೋಡುವ ಕೆಲಸ ಬೇಡ: ಬೇಸಿಗೆ ಆರಂಭವಾಗಿರುವುದರಿಂದ ಕೂಡಲೆ ಮಹಾನಗರ ಪಾಲಿಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕಿದೆ.
ಸರ್ಕಾರ ಹೆಚ್ಚಿವರಿಯಾಗಿ ಓವರ್ಹೆಡ್ ಟ್ಯಾಂಕ್ ನಿರ್ಮಿಸಬೇಕು. ಅಗ್ನಿಶಾಮಕ ಠಾಣೆಗೆ ಪ್ರತ್ಯೇಕ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಬೇಕು. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಬದಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಶೇ. 40ರಷ್ಟು ಸಿಬ್ಬಂದಿ ಕೊರತೆಯನ್ನೂ ಇಲಾಖೆ ಎದುರಿಸುತ್ತಿದ್ದು, ಅದನ್ನು ನೀಗಿಸುವ ಉದ್ದೇಶದಿಂದ ಗೃಹರಕ್ಷಕ ದಳದವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದಾರೆ.
ನೀರಿನ ಆವಶ್ಯಕತೆ ಇದೆ
ಬೇಸಿಗೆಯಲ್ಲಿ ಹೆಚ್ಚಾಗಿ ಅಗ್ನಿದುರಂತಗಳು ಸಂಭವಿಸುವುದರಿಂದ, ಸೂಕ್ತ ನಿರ್ವಹಣೆ ಮಾಡಲು 50 ಸಾವಿರ ಲೀಟರ್ ಸಾಮರ್ಥ್ಯದ ಓವರ್ಹೆಡ್ ಟ್ಯಾಂಕ್ ಬೇಕಿದೆ. ಮಹಾನಗರ ಪಾಲಿಕೆ ಅಗ್ನಿಶಾಮಕ ಠಾಣೆಗೆ ಪ್ರತ್ಯೇಕ ನೀರಿನ ಸರಬರಾಜು ವ್ಯವಸ್ಥೆ ಮಾಡಬೇಕು. ಅಂದಾಗ ಮಾತ್ರ ಬೆಂಕಿ ಅವಘಡಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
- ಎಂ.ಆರ್. ನರಸಿಂಹಮೂರ್ತಿ, ಅಗ್ನಿಶಾಮಕ ಇಲಾಖೆಯ ಪ್ರಾದೇಶಿಕ ಅಧಿಕಾರಿ
ನೀರಿನ ಕೊರತೆ
ಅಗ್ನಿಶಾಮಕ ಇಲಾಖೆಗಾಗಿ ಮಹಾನಗರ ಪಾಲಿಕೆ ಪ್ರತ್ಯೇಕ ನೀರಿನ ಸರಬರಾಜು ಮಾಡಬೇಕೆಂಬ ನಿಯಮವಿದೆ. ಆದರೆ ಬಳ್ಳಾರಿಯಲ್ಲಿ ಈ ವ್ಯವಸ್ಥೆ ಮಾಡಿಲ್ಲ. ಗೃಹಬಳಕೆಗಾಗಿ ನೀರು ಬಿಡುವಾಗಲೇ ಅಗ್ನಿಶಾಮಕ ಇಲಾಖೆಗೂ ನೀರು ಬರುತ್ತದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳಿಗೊಮ್ಮೆ ನೀರು ಬರುತ್ತದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

