ಟ್ರಾವೆಲ್ ಏಜೆನ್ಸಿಗಳಿಗೆ ತಟ್ಟಿದ ಬಿಸಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 18
ಚುನಾವಣಾ ಆಯೋಗ ಅಭ್ಯರ್ಥಿಗಳ ಚಲನವಲನ, ಮತದಾರರಿಗೆ ಹೆಂಡ, ಹಣ ಹಂಚುವುದು, ಸೀರೆ, ಬಟ್ಟೆ, ವಿದ್ಯುತ್ ಉಪಕರಣ ವಿತರಿಸುವುದರ ಮೇಲಷ್ಟೇ ನಿಗಾವಹಿಸದೆ ಚುವಾವಣೆ ಖರ್ಚಿನ ಪ್ರತಿ ಪೈಸೆಗೆ ಪೈಸಾ ಲೆಕ್ಕಹಾಕುವ ಮೂಲಕ ಅಭ್ಯರ್ಥಿಗಳ ವೆಚ್ಚದ ಮೇಲೂ ಹದ್ದಿನ ಕಣ್ಣು ನೆಟ್ಟಿದೆ. ಇದರ ಬಿಸಿ ಖಾಸಗಿ ಟ್ರಾವೆಲ್ ಏಜೆನ್ಸಿಗಳ ಮಾಲೀಕರಿಗೂ ತಟ್ಟಿದೆ.
ಬಳ್ಳಾರಿಯಲ್ಲಿ ಖಾಸಗಿ ವಾಹನಗಳಿಗೆ ಪರವಾನಗಿ ಪಡೆದಿರುವ ಅಭ್ಯರ್ಥಿಗಳಿಗೆ ಮಾತ್ರ ವಾಹನಗಳನ್ನು ಬಾಡಿಗೆ ನೀಡಬೇಕು. ಇಲ್ಲವಾದರೆ ವಾಹನ ಜಪ್ತಿ ಮಾಡಲಾಗುತ್ತದೆ. ಇದಕ್ಕೆ ಆಯೋಗ ಜವಾಬ್ದಾರಿ ಅಲ್ಲ ಎಂಬ ಸ್ಪಷ್ಟ ಸೂಚನೆ ನೀಡುವ ಮೂಲಕ ಅಭ್ಯರ್ಥಿಗಳ ವೆಚ್ಚದ ಮೇಲೆ ತೀವ್ರ ನಿಗಾವಹಿಸಿದೆ. ಚುನಾವಣೆ ಆಯೋಗ ಚಾಪೆ ಕೆಳಗೆ ತೂರಿದರೆ, ರಾಜಕಾರಣಿಗಳು ರಂಗೋಲಿ ಕೆಳಗೆ ತೂರುತ್ತಾರೆ ಎಂಬ ಮಾತಿದೆ. ಆದರೂ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಆದಷ್ಟು ಕಡಿತಗೊಳಿಸಲು ಆಯೋಗ ಮುಂದಾಗಿದೆ. ಇದರಿಂದಾಗಿ ಖಾಸಗಿ ಟ್ರಾವೆಲ್ ಏಜೆನ್ಸಿಗಳು ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ. ಸ್ವಲ್ಪ ಏಮಾರಿದರೂ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಬೇಕಿದೆ.
ಟ್ರಾವೆಲ್ಗಳ ಮೇಲೆ ಹದ್ದಿನ ಕಣ್ಣು: ಚುನಾವಣೆಗಳು ಎಂದರೆ ಖಾಸಗಿ ಟ್ರಾವೆಲ್ಗಳಿಗೆ ಸುಗ್ಗಿಯ ಕಾಲವಿದ್ದಂತೆ. ಅಭ್ಯರ್ಥಿಗಳ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಗೆ, ಹಿರಿಯ, ಕಿರಿಯ ಮುಖಂಡರ ಸಂಚಾರಕ್ಕೆ, ಹಣ, ಸೀರೆ, ವಸ್ತುಗಳ ಸಾಗಾಟಕ್ಕೆ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಖಾಸಗಿ ಟ್ರಾವೆಲ್ಗಳ ಮೊರೆ ಹೋಗುತ್ತಾರೆ. ಇದರಿಂದ ಟ್ರಾವೆಲ್ಗಳಿಗೆ ಎಲ್ಲಿಲ್ಲದ ಬೇಡಿಕೆ. ಚುನಾವಣೆ ಸಮಯದಲ್ಲೇ ಪಕ್ಷಗಳು ಮತ್ತು ಅಭ್ಯರ್ಥಿಗಳು ದುಡ್ಡು ಬಿಚ್ಚುತ್ತಾರೆ ಎಂಬುದು ಖಾಸಗಿ ಟ್ರಾವೆಲ್ಗಳ ಮಾಲೀಕರ ನಂಬಿಕೆ. ಆದರೆ ಈ ಬಾರಿ ಚುನಾವಣೆಯಲ್ಲಿ ಟ್ರಾವೆಲ್ಗಳ ಮೇಲೂ ಆಯೋಗ ಕಣ್ಣಿಟ್ಟಿದೆ. ಹೀಗಾಗಿ ತಮಗೆ ಇಷ್ಟಬಂದಂತೆ ಚುನಾವಣೆ ಉದ್ದೇಶಕ್ಕೆ ಹಾಗೂ ರಾಜಕೀಯ ಮುಖಂಡರಿಗೆ ವಾಹನಗಳನ್ನು ಬಾಡಿಗೆಗೆ ನೀಡುವಂತಿಲ್ಲ.
ಸೂಚನೆಯಲ್ಲಿ ಏನಿದೆ?: ಚುನಾವಣೆ ಸಂದರ್ಭದಲ್ಲಿ ಯಾವುದೇ ಅಕ್ರಮಗಳು ನಡೆಯಬಾರದೆಂಬ ಉದ್ದೇಶದಿಂದ ಮತ್ತು ಅಭ್ಯರ್ಥಿಗಳ ಲೆಕ್ಕದ ಮೇಲೆ ನಿಗಾವಹಿಸುವ ಹಿನ್ನೆಲೆಯಲ್ಲಿ ಆಯೋಗ ಹೆಚ್ಚಿನ ಜಾಗರೂಕತೆ ವಹಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಖಾಸಗಿ ಟ್ರಾವೆಲ್ ಏಜೆನ್ಸಿಗಳಿಗೆ ಆಯೋಗ ಸೂಚನೆ ನೀಡಿದೆ. ಯಾವುದೇ ವಾಹನಗಳನ್ನು ಅಭ್ಯರ್ಥಿಗಳಿಗೆ ಹಾಗೂ ಪ್ರಚಾರದ ಉದ್ದೇಶಕ್ಕೆ ನೀಡುವವರು ವಾಹನಗಳಿಗೆ ಆಯೋಗದಿಂದ ಪರವಾನಗಿ ಪಡೆದಿರಬೇಕು, ಇಲ್ಲವಾದರೆ ವಾಹನಗಳ ಜಪ್ತಿ ಮಾಡಲಾಗುತ್ತದೆ ಎಂಬ ಎಚ್ಚರಿಕೆಯ ಸೂಚನೆ ನೀಡಿದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಾಹನಗಳನ್ನು ಬಾಡಿಗೆ ಪಡೆಯಲು ಮುಂದಾದರೂ, ಟ್ರಾವೆಲ್ ಏಜೆನ್ಸಿಗಳು ಹಾಗೂ ಖಾಸಗಿ ವಾಹನಗಳ ಮಾಲೀಕರು ಬಾಡಿಗೆ ಕಳುಹಿಸಲು ಭಯಪಡುವಂತಾಗಿದೆ.
ಅಭ್ಯರ್ಥಿಗಳಿಗೆ ತಂದ ಆತಂಕ: ಇನ್ನು ಅಭ್ಯರ್ಥಿಗಳು ಕೂಡ ಟ್ರಾವೆಲ್ ಏಜೆನ್ಸಿಗಳಿಂದ ಖಾಸಗಿ ವಾಹನ ಬಾಡಿಗೆ ಪಡೆಯಬೇಕಾದರೆ ಎಚ್ಚರಿಕೆ ವಹಿಸಬೇಕಿದೆ. ಒಂದು ವೇಳೆ ತಮ್ಮ ಹೆಸರಿನಲ್ಲಿ ವಾಹನಗಳನ್ನು ಬುಕ್ ಮಾಡಿದರೆ ಎಲ್ಲಿ ತಮ್ಮ ಖರ್ಚು ವೆಚ್ಚದಲ್ಲಿ ಬರುತ್ತದೆ ಎಂಬ ಭೀತಿ ಹಿನ್ನೆಲೆಯಲ್ಲಿ ವಾಹನಗಳನ್ನು ಕಡಿಮೆ ಬುಕ್ ಮಾಡುತ್ತಿದ್ದಾರೆ. ಇದಲ್ಲದೆ ಯಾವ ಉದ್ದೇಶಕ್ಕೆ ವಾಹನಗಳನ್ನು ಅಭ್ಯರ್ಥಿಗಳು ಬಿಡುತ್ತಿದ್ದಾರೆ ಎಂಬ ಬಗ್ಗೆ ಟ್ರಾವೆಲ್ ಏಜೆನ್ಸಿಗಳು ಹೆಚ್ಚಿನ ಕಾಳಜಿ ವಹಿಸುತ್ತಿವೆ. ಆಯೋಗದ ಇಂತಹ ಕ್ರಮ ಅಭ್ಯರ್ಥಿ ಹಾಗೂ ಟ್ರಾವೆಲ್ ಏಜೆನ್ಸಿಗಳಿಗೆ ನುಂಗಲಾರದ ತುತ್ತಾಗಿದೆ. ಇನ್ನು ಕೆಲ ಪಕ್ಷಗಳು ವಾಹನಗಳನ್ನು ಪಡೆದು ಹಣ ಸಾಗಿಸುತ್ತಾರೆ ಎಂಬ ಭೀತಿ ಸಹಜವಾಗಿಯೇ ಟ್ರಾವೆಲ್ ಏಜೆನ್ಸಿಗಳಲ್ಲಿ ಇದೆ. ತಮ್ಮದಲ್ಲದ ತಪ್ಪಿಗೆ ತಾವು ಸಿಕ್ಕಿಹಾಕಿಕೊಳ್ಳುತ್ತೇವೆ ಎಂಬ ಭೀತಿ ಟ್ರಾವೆಲ್ ಏಜೆನ್ಸಿಗಳಲ್ಲಿ ಆವರಿಸಿದೆ.
ಖಾಸಗಿ ಟ್ರಾವೆಲ್ ಏಜೆನ್ಸಿ ಮಾಲೀಕರೊಬ್ಬರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಅಕ್ರಮಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಯಾವುದೆ ರಾಜಕೀಯ ಪಕ್ಷಗಳಿಗೆ ವಾಹನಗಳನ್ನು ನೀಡಿಲ್ಲ. ಬಹುತೇಕ ವಾಹನಗಳನ್ನು ಪೊಲೀಸರಿಗೆ, ಇತರರಿಗೆ ನೀಡುತ್ತಿದ್ದೇವೆ. ಜಿಲ್ಲಾಡಳಿತ ಕೂಡ ವಾಹನ ಪರವಾನಗಿ ಪಡೆದ ಅಭ್ಯರ್ಥಿಗಳಿಗೆ ಮಾತ್ರ ವಾಹನ ನೀಡಬೇಕೆಂದು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಾಹನ ಬಾಡಿಗೆ ಕೊಡುವಾಗ ಹೆಚ್ಚಿನ ಜಾಗರೂಕತೆ ವಹಿಸಲಾಗಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

