ಬಳ್ಳಾರಿ

ಮತ್ತೆ ಚುರುಕಾಗಲಿದೆ ಗಣಿ ಚಟುವಟಿಕೆ

Published On :

ಸಿ.ಕೆ. ನಾಗರಾಜ್
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 20
ಬಳ್ಳಾರಿ ಜಿಲ್ಲೆ ಎಂದರೆ ಗಣಿನಾಡು ಎಂದು ಇಡೀ ದೇಶಕ್ಕೆ ಚಿರಪರಿಚಿತವಾಗಿದೆ. ವಿಧಾನಸೌಧದಲ್ಲಿ ಕುಳಿತಿದ್ದ ಮಂತ್ರಿ ಮಹೋದಯರಿಂದಲೇ ಹಿಂದೆ ಗಣಿಗಾರಿಕೆಗೆ ಪ್ರೋತ್ಸಾಹ ಸಿಕ್ಕಿತ್ತು. ಅದೇ ವಿಧಾನಸೌಧದಿಂದಲೇ ಎರಡು ವರ್ಷಗಳ ಹಿಂದೆ ಗಣಿಗಾರಿಕೆಗೆ ಬ್ರೇಕ್ ಬಿತ್ತು. ಈಗ ಬಿ ವರ್ಗದ ಗಣಿಗಾರಿಕೆ ಆರಂಭವಾಗುವುದರಿಂದ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆ ಚುರುಕು ಕಾಣಲಿದೆ.
ಬಳ್ಳಾರಿಯ ಕೆಲವು ಪ್ರಭಾವಿ ವ್ಯಕ್ತಿಗಳು ಗಣಿಗಾರಿಕೆಯಲ್ಲಿ ತೀವ್ರ ಹಸ್ತಕ್ಷೇಪ ನಡೆಸಿ, ತಮ್ಮ ಮನಸೋ ಇಚ್ಛೆ ವ್ಯವಹಾರ ನಡೆಸಿದರು. ಅದರ ಪರಿಣಾಮ ಅಕ್ರಮ ಬೆಳಕಿಗೆ ಬಂದು, ಗಣಿಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವಂತಾಯಿತು.
ಈಗ ಸುಪ್ರೀಂ ಕೋರ್ಟ್ ಬಿ ಕೆಟಗರಿ ಗಣಿ ಕಂಪನಿಗಳಿಗೆ ಅಸ್ತು ನೀಡಿದೆ. ಗಣಿಗಾರಿಕೆ ಚಟುವಟಿಕೆ ಮತ್ತೆ ಚುರುಕುಗೊಳ್ಳುತ್ತಿದೆ. ಕೆಲವೇ ಗಣಿ ಮಾಲೀಕರ ನಡೆಸಿದ ಅಟಾಟೋಪಕ್ಕೆ ಇಡೀ ಉದ್ಯಮವೇ ಶಿಕ್ಷೆ ಅನುಭವಿಸುವಂತಾಯಿತು.
ವಲಸೆ: ಕೆಲವು ವರ್ಷಗಳಿಂದಲೂ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಹಲವರು ಉದ್ಯೋಗ ಕಂಡುಕೊಂಡಿದ್ದರು. 40-50 ಸಾವಿರ ಜನರು ಗಣಿಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದರು. ಗಣಿಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಒಂದು ಕಡೆಯಾದರೆ, ಇನ್ನೊಂದು ಕಡೆ ಅದಿರು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕರು, ಕ್ಲೀನರ್‌ಗಳು, ಗ್ಯಾರೇಜ್‌ನಲ್ಲಿ ಕೆಲಸ ಮಾಡುವವರು, ಪೆಟ್ರೋಲ್ ಬಂಕ್, ಹೋಟೆಲ್ ಉದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ನೆಲೆ ಕಲ್ಪಿಸಿತ್ತು.
ಗಣಿ ಉದ್ಯಮ ಸ್ಥಗಿತಗೊಂಡ ಬಳಿಕ ದುಡಿಯಲು ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಹಲವರು ಬೇರೆ ಪ್ರದೇಶಗಳಿಗೆ ವಲಸೆ ಹೋದರು.
ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಸುತ್ತಮುತ್ತಲಿನ ಗ್ರಾಮಗಳಾದ ಕಲ್ಲಳ್ಳಿ, ರಾಜಾಪುರ, ಜಂಬುನಾಥ ಹಳ್ಳಿ, ಇಂಗಳಿ, ಕಾರಿಗನೂರು, ವಡ್ರಹಳ್ಳಿ, ಸಂಕ್ಲಾಪುರ, ಪಾಪಿನಾಯಕನಹಳ್ಳಿ, ಕಾರಿಗನೂರು, ಶಂಕರ್‌ನಗರ ಕ್ಯಾಂಪ್, ಹನುಮನಹಳ್ಳಿ, ಡಣಾಪುರ ಗಾಳೆಮ್ಮನಗುಡಿ, ವ್ಯಾಸನಕೆರೆ, ಜೈಸಿಂಗ್‌ಪುರ, ವೆಂಕಟಗಿರಿ, ತಾರಾನಗರ, ಯಶವಂತನಗರ ಸೇರಿದಂತೆ ಹೊಸಪೇಟೆ, ಸಂಡೂರು ತಾಲೂಕಿನ ಬಹುತೇಕ ತಾಂಡಗಳ ಜನರು ಬೇರೆ ಜಿಲ್ಲೆಗಳಿಗೆ ದುಡಿಯಲು ವಲಸೆ ಹೋಗಿದ್ದಾರೆ.
ಹೋರಾಟ: ನ್ಯಾಯಯುತವಾಗಿ, ಇತಿಮಿತಿಯಲ್ಲಿ ಗಣಿಗಾರಿಕೆ ನಡೆಸಿಕೊಂಡು ಹೋಗಿದ್ದರೆ ಮುಚ್ಚುವ ಸ್ಥಿತಿ ಬರುತ್ತಿರಲಿಲ್ಲ. ರಾಜಕೀಯವಾಗಿ ಮಹತ್ವ ಪಡೆಯುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ಬಳ್ಳಾರಿ ರೆಡ್ಡಿಗಳು ವಿಧಾನಸೌಧದಲ್ಲಿ ತೊಡೆ ತಟ್ಟಿ, ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದರು. ಕಾಂಗ್ರೆಸ್ ನಾಯಕರು ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದು ಒಂದು ಇತಿಹಾಸ. ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಯಲು ಕಾಂಗ್ರೆಸ್ ಹೋರಾಟವೂ ಕಾರಣವಾಯಿತು.
ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವಾಗ ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ. ಜನಾರ್ದನ ರೆಡ್ಡಿ ಮತ್ತು ಜಿಲ್ಲೆಯ ಉಳಿದ ಸಚಿವರು ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ವಾದಿಸಿದರು. ಜಿಲ್ಲೆಯಲ್ಲಿ ಡಿಗ್ಗಿಂಗ್ ಬಂದ್ ಮಾಡಿದರು. ಆದರೆ ಅಕ್ರಮ ತಡೆಯುವಲ್ಲಿ ಮುಂದಾಗಲಿಲ್ಲ.
ಜಿಲ್ಲೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಗಣಿ ಉದ್ಯಮಿಗಳೇ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಯಾವ ಗಣಿ ಉದ್ಯಮಿಯನ್ನು ಆಯ್ಕೆ ಮಾಡಿ ಕಳುಹಿಸಬೇಕು. ಯಾರು ಗೆದ್ದರೆ ಮತ್ತೆ ಗಣಿಗಾರಿಕೆ ಆರಂಭವಾಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಮತದಾರ ಯಾರ ಪರ ಹೆಚ್ಚು ಒಲವು ತೋರಿಸಬಹುದು ಎನ್ನುವದನ್ನು ಕಾದು ನೋಡಬೇಕಾಗಿದೆ.



ಗಣಿ ಕಾರ್ಮಿಕರ ನಿರೀಕ್ಷೆ...
ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಣಿಗಾರಿಕೆ ಪುನಃ ಆರಂಭವಾಗಬಹುದು ಎಂಬ ನಿರೀಕ್ಷೆಯನ್ನು ಗಣಿ ಕಾರ್ಮಿಕರು ಹೊಂದಿದ್ದಾರೆ. ಕಾರ್ಮಿಕರು ಕಂಗಾಲಾಗಿದ್ದು, ಗಣಿಗಾರಿಕೆಯನ್ನೇ ಅವಲಂಬಿಸಿ ಅನೇಕ ಕುಟುಂಬಗಳು ಇವೆ. ಗಣಿಗಾರಿಕೆ ಆರಂಭವಾಗಬೇಕೆಂಬ ಇಚ್ಛೆಯನ್ನು ಕಾರ್ಮಿಕರು ವ್ಯಕ್ತಪಡಿಸುತ್ತಾರೆ.
ಣ ಎಚ್.ಆರ್. ಗವಿಯಪ್ಪ, ಮಾಜಿ ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.