ಕ್ಷೀರಭಾಗ್ಯ: ದೋಷವಾದರೆ ಅಧಿಕಾರಿಗಳೇ ಹೊಣೆ
ಹೂವಿನಹಡಗಲಿ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆ ತರಲು, ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಹಿತ ಕಾಪಾಡಲು ಸರ್ಕಾರ ಈ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ 1ರಿಂದ 10ನೇ ತರಗತಿ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಹಾಲು ವಿತರಣೆ ಹಾಗೂ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆ ಮತ್ತು ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಅಧಿಕಾರಿಗಳೇ ಹೊಣೆ: ಕ್ಷೀರಭಾಗ್ಯ ಯೋಜನೆಯನ್ನು ಅಧಿಕಾರಿಗಳು ಶಿಸ್ತಿನಿಂದ ಹೆಚ್ಚಿನ ಗಮನ ಹರಿಸಿ ಯಾವುದೇ ಲೋಪದೋಷ ಆಗದಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಇದರಲ್ಲಿ ಯಾವುದೇ ವ್ಯತ್ಯಾಸಗಳು, ದೋಷವಾದರೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ ಅವರು, ಕ್ಷೀರಭಾಗ್ಯ ಬಹುಉಪಯೋಗಿ ಯೋಜನೆಯಾಗಿದ್ದು, ಯೋಜನೆಯಲ್ಲಿ ಮಕ್ಕಳ ಆರೋಗ್ಯ ಹಾಗೂ ರೈತರ ಹಿತ ಅಡಗಿದೆ. ಇಂತಹ ಜನಪರ ಯೋಜನೆಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ 24 ಗಂಟೆಯೊಳಗೆ 99 ಲಕ್ಷ ಬಡವರಿಗೆ ಅನ್ನಭಾಗ್ಯ ಯೋಜನೆಯನ್ನು ಚುನಾವಣೆಯಲ್ಲಿ ಮಾತುಕೊಟ್ಟಂತೆ ಅಚ್ಚುಕಟ್ಟಾಗಿ ಜಾರಿಗೊಳಿಸುತ್ತಿದ್ದೇವೆ ಎಂದರು.
3.62 ಲಕ್ಷ ಮಕ್ಕಳಿಗೆ ಆರೋಗ್ಯ ಚೈತನ್ಯ
ಬಳ್ಳಾರಿ ಜಿಲ್ಲೆಯಲ್ಲಿ 1671 ಶಾಲೆಯ 1ರಿಂದ 10 ನೇ ತರಗತಿಯ 3.42 ಲಕ್ಷ ವಿದ್ಯಾರ್ಥಿಗಳು ಹಾಗೂ 2341 ಅಂಗನವಾಡಿ ಕೇಂದ್ರಗಳ 2.09 ಲಕ್ಷ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಹಾಲು ಉತ್ಪಾದಕರಿಗೆ ಲೀಟರ್ಗೆ ರು. 4 ಪ್ರೋತ್ಸಾಹ ಧನ ಘೋಷಣೆಯಿಂದ ರಾಜ್ಯದಲ್ಲಿ ಪ್ರತಿದಿನ 15-20 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಇದನ್ನು ಕೆಡದಂತೆ ಹಾಗೂ ಮಕ್ಕಳ ಆರೋಗ್ಯ ಕಾಪಾಡಲು ಕ್ಷೀರಭಾಗ್ಯ ಜಾರಿಗೊಳಿಸಿದೆ. ವಾರದಲ್ಲಿ 3 ದಿನ ಮಕ್ಕಳಿಗೆ ಕೆನೆಭರಿತ ಹಾಲು ವಿತರಿಸುವ ಯೋಜನೆಗೆ ಚಾಲನೆ ನೀಡಿದ್ದೇವೆ. ಆರೋಗ್ಯ ಚೈತನ್ಯ ಯೋಜನೆಯಡಿ 3.62 ಲಕ್ಷ ಮಕ್ಕಳಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದರು.
ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ಸದಸ್ಯರಾದ ನಳಿನಾ, ಶೋಭಾ ಬೆಂಡಿಗೇರಿ, ಜಿ. ವಸಂತ, ತಾಪಂ ಅಧ್ಯಕ್ಷೆ ದುರುಗಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ. ಪರಮೇಶ್ವರಪ್ಪ, ಅಪರ ಜಿಲ್ಲಾಧಿಕಾರಿ ಜಗದೀಶ, ಡಿಡಿಪಿಐ ಟಿ. ನಾರಾಯಣಗೌಡ, ಡಿಎಚ್ಒ ಮಾಧವರಾವ್ ಪಾಟೀಲ್, ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ, ಕೆಎಂಎಫ್ ವ್ಯವಸ್ಥಾಪಕ ಡಾ. ಸುನೀಲ್, ಮಲ್ಲಿಕಾರ್ಜುನ ಸ್ವಾಮಿ, ಅಟವಾಳಗಿ ಕೊಟ್ರೇಶ, ಕೋಡಿಹಳ್ಳಿ ಮುದುಕಪ್ಪ, ಸಿ. ಚಾಂದಸಾಹೇಬ್, ಕೆ. ಪ್ರಕಾಶ್, ಜ್ಯೋತಿ ಮಲ್ಲಣ್ಣ, ಪುರಸಭೆ ಸದಸ್ಯ ಸಂತೋಷ ಜೈನ್, ಪಿ.ಎಂ. ವಿಲ್ಸನ್ಸ್ವಾಮಿ, ಪ್ರಕಾಶ ಜೈನ್, ಸಿದ್ದೇಶ್ವರ, ವಿಜಯಕುಮಾರ್ ಇತರರಿದ್ದರು.
ಕ್ಷೀರಭಾಗ್ಯ ಯೋಜನೆಯನ್ನು ಪಡೆದು ಪ್ರತಿಭಾವಂತರಾಗಿ
ಹೊಸಪೇಟೆ: ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿಭಾವಂತರಾಗಿ ಬೆಳೆಯಬೇಕು ಎಂದು ಜಿಪಂ ಸದಸ್ಯ ಅನ್ನದಾನರೆಡ್ಡಿ ಹೇಳಿದರು. ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿ ಗುರುವಾರ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿ, ಮಕ್ಕಳಿಗೆ ಪೌಷ್ಟಿಕತೆ ಆಹಾರ ನೀಡುವ ದಿಸೆಯಲ್ಲಿ ಈಗಾಗಲೇ ಮಧ್ಯಾಹ್ನದ ಬಿಸಿಯೂಟದ ಜತೆಗೆ ವಾರದಲ್ಲಿ 3 ದಿನ ಹಾಲು ವಿತರಿಸುವ ಕಾರ್ಯಕ್ರಮ ಜಾರಿಗೆ ತಂದಿದ್ದು, ಗುಣಮಟ್ಟದ ಹಾಲು ನೀಡುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಸ್ವಾಮಿ, ಪ್ರಾಥಮಿಕ ಶಾಲೆ ಮುಖ್ಯಗುರು ಜ್ಯೋತಿ ನಾಯಕ, ಸ್ಥಳೀಯ ಮುಖಂಡ ಗುಜ್ಜಲ್ ಶ್ರೀನಿವಾಸ, ರೈತ ಸಂಘದ ಮುಖಂಡ ಎಂ. ಜಡೆಪ್ಪ, ಸ್ಥಳೀಯ ಮುಖಂಡರು, ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

