ಮಕ್ಕಳಿಗೆ ಪಠ್ಯದ ಜತೆಗೆ ಕ್ರೀಡಾ ತರಬೇತಿ ಅಗತ್ಯ
ಹಗರಿಬೊಮ್ಮನಹಳ್ಳಿ: ಪ್ರಾಥಮಿಕ ಹಂತದ ಶಿಕ್ಷಣದ ಜತೆಯಲ್ಲೇ ಕ್ರೀಡೆಗಳ ಬಗ್ಗೆ ಮಕ್ಕಳಿಗೆ ತರಬೇತಿ ನೀಡುವುದು ಅಗತ್ಯ. ಆದರೆ ಇವತ್ತು ಎಲ್ಲ ಶಾಲೆಗಳಿಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲು ಸಾಧ್ಯವಾಗಿಲ್ಲ. ಇದು ಮಕ್ಕಳ ಕ್ರೀಡಾ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಗಡಿಗ್ರಾಮ ಹನುಮನಗೊಂಡನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಬನ್ನಿಕಲ್ಲು ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಹೈದಾರಾಬಾದ್ ಕರ್ನಾಟಕ ಪ್ರಾಂತದಲ್ಲಿ ವಿಶೇಷ ಸ್ಥಾನಮಾನ ಅನುಷ್ಠಾನಗೊಂಡ ಕೂಡಲೆ ಈ ಭಾಗದಲ್ಲಿನ ಖಾಲಿ ಇರುವ ದೈಹಿಕ ಶಿಕ್ಷಣ ಸೇರಿದಂತೆ ಎಲ್ಲ ಶಿಕ್ಷಕರು, ಉಪನ್ಯಾಸಕರು ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಆ ಮೂಲಕ ಖಾಲಿ ಹುದ್ದೆಗಳ ಸಮಸ್ಯೆ ನಿವಾರಣೆ ಜತೆಗೆ ನಿರುದ್ಯೋಗ ಭೀತಿಯನ್ನು ತೊಡೆದು ಹಾಕಲಾಗುವುದು ಎಂದರು.
24 ಗ್ರಾಮಗಳಿಗೆ ನದಿ ನೀರು: ಈಗಾಗಲೆ ಹೂವಿನಹಡಗಲಿ ವ್ಯಾಪ್ತಿಗೆ ಬರುವ ಹಗರಿಬೊಮ್ಮನಹಳ್ಳಿ ತಾಲೂಕಿನ 24 ಹಳ್ಳಿಗಳಿಗೆ ರು. 24.50 ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆ ಜಾರಿಯಿಂದ ಸೊನ್ನ, ಮೋರಗೇರಿ, ಸಕ್ರಿಹಳ್ಳಿ, ಗಿರಿಗೊಂಡನಹಳ್ಳಿ, ಹನುಮಗೊಂಡನಹಳ್ಳಿ, ಗದ್ದಿಕೇರಿ, ಬನ್ನಿಕಲ್ಲು ಸೇರಿದಂತೆ 24 ಗ್ರಾಮಗಳಿಗೆ ನದಿ ನೀರು ಸಿಗಲಿದೆ. ಮುಂದಿನ ಐದು ವರ್ಷದ ಅವಧಿಯೊಳಗೆ ನಾನು ಪ್ರತಿನಿಧಿಸುತ್ತಿರುವ ಹೂವಿನಹಡಗಲಿ ಕ್ಷೇತ್ರದ ಪ್ರತಿ ಹಳ್ಳಿಗೂ ತುಂಗಭದ್ರಾ ನದಿಯಿಂದ ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವುದಾಗಿ ಭರವಸೆ ನೀಡಿದರು.
ನಂದಿಪುರದ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಸುರೇಶ, ತಾಲೂಕು ಪಂಚಾಯಿತಿ ಸದಸ್ಯರಾದ ಐಗೋಳ ಚಿದಾನಂದ, ಹುಲಿಗೆಮ್ಮ ಹನುಮಜ್ಜ, ಭಾರತಮ್ಮ ಬೆಲ್ಲದ್, ಹಡಗಲಿ ಎಪಿಎಂಸಿ ಅಧ್ಯಕ್ಷ ವಾರದ್ಗೌಸ್, ಟಿಎಪಿಸಿಎಂಎಸ್ ಅಧ್ಯಕ್ಷ ಹೊಳಗುಂದಿ ಶಾಂತನಗೌಡ, ಕಾಂಗ್ರೆಸ್ ಮುಖಂಡರಾದ ಹೆಗ್ಡಾಳ ರಾಮಣ್ಣ, ಎಲ್. ಮಾರೆಣ್ಣ, ಮುಟುಗನಹಳ್ಳಿ ಕೊಟ್ರೇಶ್, ಎಂ. ಪರಮೇಶ್ವರಪ್ಪ, ಬಿ.ವಿ. ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕೋರಿ ಸಿದ್ದಲಿಂಗಪ್ಪ, ಸದಸ್ಯ ಹೊಳಗುಂದಿ ಹನುಮಜ್ಜ, ತಾಪಂ ಇಒ ಗೋಪ್ಯಾನಾಯ್ಕ, ಬಿಇಓ ಕೆ. ರಾಮನಗೌಡ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಸಂಯೋಜಕ ಕೆವಿಎಂ ನಾಗಭೂಷಣ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

