ನಿವೇಶನ ಒತ್ತಾಯಿಸಿ ಅಲೆಮಾರಿಗಳ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಕುರುಗೋಡು, ಆ. 6
ಅಲೆಮಾರಿ ಜನಾಂಗಕ್ಕೆ ಕೂಡಲೇ ನಿವೇಶನ ನೀಡುವಂತೆ ಒತ್ತಾಯಿಸಿ, ವಿವಿಧ ಬುಡಕಟ್ಟು ಜನರು, ಅಲೆಮಾರಿ ನಿವೇಶನ ರಹಿತರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕೃಷಿ ಕೂಲಿಕಾರ ಸಂಘದ ನೇತೃತ್ವದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಪ್ರಾಂತ ರೈತ ಸಂಘದ ಅಧ್ಯಕ್ಷ ಕೆ. ಗಾದಿಲಿಂಗಪ್ಪ, ಎರಡು ವರ್ಷದಿಂದ ಅಲೆಮಾರಿ ಜನಾಂಗಕ್ಕೆ ನಿವೇಶನ ನೀಡುವಂತೆ ಒತ್ತಾಯಿಸಿ ಚಳವಳಿ ನಡೆದಿದೆ. ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಪಟ್ಟಣದ ಕಂಪ್ಲಿ ರಸ್ತೆಯಲ್ಲಿ 5.9 ಎಕರೆ ಜಮೀನು ನೀಡಿ ಎರಡು ವರ್ಷ ಕಳೆದರೂ ನಿವೇಶನ ಹಂಚಿಕೆಯಾಗಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ ಎಂದು ಆರೋಪಿಸಿದರು.
ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನಾ ಸ್ಥಳದಲ್ಲಿ ಸಮಾವೇಶಗೊಂಡರು. ಕೆಲ ಸಮಯದ ನಂತರ ಸ್ಥಳಕ್ಕೆ ಕಂದಾಯ, ತಾಪಂ ಹಾಗೂ ಗ್ರಾ.ಪಂ ಅಧಿಕಾರಿ ಭೇಟಿ ನೀಡಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖಂಡ ವಿ.ಎಸ್. ಶಿವಶಂಕರ್ ಮಾತನಾಡಿ, ಜಿಲ್ಲಾಧಿಕಾರಿ ಮಂಜೂರು ಮಾಡಿದ ಸ್ಥಳಕ್ಕೆ ಹೋಗಲು ರಸ್ತೆ ಸರ್ವೇ ನಡೆಯಬೇಕಿದೆ. ಅಲ್ಲದೆ ನಿವೇಶನ ಸಂಖ್ಯೆ ನಿಗದಿ, ರಸ್ತೆ ಮತ್ತಿತರೆ ಸೌಲಭ್ಯದ ಬಗ್ಗೆ ಸರ್ವೇ ನಡೆದು ನಕ್ಷೆಯಾಗಬೇಕಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಡಾ. ಬಿ.ಶರಣಪ್ಪ ಮಾತನಾಡಿ, ಇತ್ತೀಚೆಗೆ ಅನೇಕ ಕಚೇರಿಯಲ್ಲಿ ಅಧಿಕಾರಿಗಳ ಬದಲಾವಣೆ ನಡೆದಿದೆ. ಇದೇ ದಿನ ರಸ್ತೆ ಸರ್ವೇ ನಡೆಸಲಾಗಿದೆ. ಇದರ ವರದಿ ಟೌನ್ಪ್ಲಾನಿಂಗ್ ತಾಪಂ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದರು. ಅನಂತರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಮ್ ಮಾತನಾಡಿ, ವರದಿ ಬಂದ ತಕ್ಷಣ ಖುದ್ದಾಗಿ ಟೌನ್ ಪ್ಲಾನಿಂಗ್ ಕಚೇರಿಗೆ ತೆರಳಿ ಮುಂದಿನ ಕೆಲಸ ಮಾಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಉದ್ಯೋಗ ಖಾತ್ರಿ ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಪಿ. ಮಹ್ಮದ್ಖಾನ್, ನಿವೇಶನ ಹೋರಾಟ ಸಮಿತಿ ಅಧ್ಯಕ್ಷ ಹನುಮಂತಪ್ಪ, ಗಾಳೆಪ್ಪ, ನಾಗೇಶ್, ಅರ್ಜುನ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

