ನಾ ಕೊಡೆ, ನೀ ಬಿಡೆ: ಇದು ವಿಎಸ್ಕೆ ವಿವಿ ಸ್ಥಿತಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 14
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ವಿವಾದಗಳು ಅಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿಲ್ಲ. ಕುಲಸಚಿವರನ್ನು ವಿವಿಯಲ್ಲಿ ಮುಂದುವರಿಸಲು ಉನ್ನತ ಶಿಕ್ಷಣ ಇಲಾಖೆ ನೀಡಿರುವ ಆದೇಶವನ್ನು ವಿವಿ ನಿಯಮಗಳಡಿ ಅಂಗೀಕರಿಸಲು ಬರುವುದಿಲ್ಲ ಎಂದು ವಿಸಿ ಮಂಜಪ್ಪ ಹೇಳಿದ್ದರಿಂದ ವಿವಿಯಲ್ಲಿ ಕುಲಸಚಿವ ವಿಜಯಕುಮಾರ್ ಬೆಂಬಲಿತ ಸಂಘಟನೆಗಳು ಮತ್ತು ವಿಸಿ ಮಧ್ಯೆ ವಾಗ್ವಾದ ನಡೆಯಿತು.
ಇತ್ತೀಚೆಗೆ ವಿವಿಯ ಸಿಂಡಿಕೇಟ್ ಸಭೆಯಲ್ಲಿ ಕುಲಸಚಿವ ವಿಜಯಕುಮಾರ್ ಅವರನ್ನು ಸೇವೆಯಿಂದ ತೆರವುಗೊಳಿಸಿ, ಗುಲ್ಬರ್ಗಾ ವಿವಿಗೆ ಹೋಗುವಂತೆ ತಿಳಿಸಿತ್ತು. ಇದರ ಬೆನ್ನಲ್ಲೇ ಕುಲಸಚಿವ ವಿಜಯಕುಮಾರ್ ಅವರು, ಬೆಂಗಳೂರಿಗೆ ತೆರಳಿ ಸಿಂಡಿಕೇಟ್ ಆದೇಶ ರದ್ದುಗೊಳಿಸಿ ವಿವಿಯ ಕುಲಸಚಿವರಾಗಿ ಮುಂದುವರೆಯಲು ಆದೇಶ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗೆ ಮೊರೆ ಹೋಗಿದ್ದರು. ಅಲ್ಲಿಂದ ಆದೇಶ ಪತ್ರವನ್ನು ಪಡೆದ ಕುಲಸಚಿವರು, ಬುಧವಾರ ವಿವಿಗೆ ಆಗಮಿಸಿದ್ದರು. ಆಗ ಅಧಿಕಾರದಲ್ಲಿ ಮುಂದುವರಿಕೆ ಕುರಿತು ಕುಲಪತಿ-ಕುಲಸಚಿವರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.
ಸಿಂಡಿಕೇಟ್ ನಿರ್ಧಾರ ಅಂತಿಮ: ಆದೇಶ ಪತ್ರ ಸ್ವೀಕರಿಸಿ ಕುಲಸಚಿವರಾಗಿ ಮುಂದುವರೆಸಲು ಕೇಳಿದಾಗ ಅದಕ್ಕೆ ಕುಲಪತಿ ಮಂಜಪ್ಪ ಪ್ರತಿಕ್ರಿಯಿಸಿ, ಸೇವೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಕರ್ನಾಟಕ ವಿವಿ ಅಧಿನಿಯಮ 2000ರ ನಿಯಮ 10(1), 15(1), (5) ಹಾಗೂ ನಿಯಮ 29(1)(2)(ಎ) ಅನ್ವಯ ಹಾಗೂ ಇತರೆ ನಿಯಮಗಳ ವಿವಿ ಸಿಂಡಿಕೇಟ್ ಹಾಗೂ ಕುಲಪತಿಗಳಿಗೆ ಆಡಳಿತದ ಹಿತಾಸಕ್ತಿ ಕಾಪಾಡಲು ಅಧಿಕಾರ ಇರುತ್ತದೆ. ವಿಶ್ವವಿದ್ಯಾಲಯಕ್ಕೆ ಸಿಂಡಿಕೇಟ್ ಸುಪ್ರೀಂ ಆಗಿದೆ. ಸಿಂಡಿಕೇಟ್ ಸದಸ್ಯರೊಂದಿಗೆ ಸಭೆ ನಡೆಸಿ, ಕುಲಸಚಿವರನ್ನು ಬಿಡುಗಡೆಗೊಳಿಸಿದ ತೀರ್ಮಾನಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ವಿವಿಗಳ ಕಾಯಿದೆಯೇ ತಿಳಿಸುತ್ತದೆ. ಅಂತೆಯೇ ನಿಯಮದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಸಿ ತಿಳಿಸಿದರು. ಇದರಿಂದಾಗಿ ತೀವ್ರ ಮಾತಿನ ಚಕಮಕಿ ನಡೆಯಿತು.
ಸರ್ಕಾರದ ಆದೇಶದಂತೆ ನಡೆಯುತ್ತೇನೆ: ನಂತರ ಕುಲಸಚಿವ ವಿಜಯ್ಕುಮಾರ್ ಮಾತನಾಡಿ, ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡಿದ ಸಿಂಡಿಕೇಟ್ ಸಭೆಯ ನಿರ್ಣಯದ ಕುರಿತು ಉನ್ನತ ಶಿಕ್ಷಣ ಇಲಾಖೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಆದರೆ, ಸಿಂಡಿಕೇಟ್ ಸಭೆಯ ತೀರ್ಮಾನವನ್ನು ಕಲಂ 15.1 ಹಾಗೂ 15.5ರಂತೆ ರದ್ದುಗೊಳಿಸಿ ಕುಲಸಚಿವರಾಗಿ ಮುಂದುವರೆಯುವಂತೆ ಆದೇಶ ನೀಡಿದ್ದಾರೆ. ಈ ಆದೇಶ ಪತ್ರವನ್ನು ಕುಲಪತಿಗಳಿಗೆ ನೀಡಿದರೆ ಅವರು ನಾನು ಯಾವುದೇ ಕಾರಣಕ್ಕೂ ಈ ಆದೇಶವನ್ನು ಒಪ್ಪುವುದಿಲ್ಲ. ಅಗತ್ಯವಿದ್ದರೆ ರಾಜ್ಯಪಾಲರ, ಹೈಕೋರ್ಟ್ ಮೊರೆ ಹೋಗಿ ಎಂದು ಹೇಳುತ್ತಿದ್ದಾರೆ. ಸಿಂಡಿಕೇಟ್ ತೀರ್ಮಾನವೆ ಸುಪ್ರೀಂ ಎನ್ನುತ್ತಿದ್ದು, ಸರ್ಕಾರದ ಆದೇಶವನ್ನು ಅವರು ಒಪ್ಪುತ್ತಿಲ್ಲ. ಸರ್ಕಾರದ ಆದೇಶ ಪಡೆದಿರುವುದರಿಂದ ನಾನು ವಿವಿಯಲ್ಲೇ ಕೂರುವುದಾಗಿ ತಿಳಿಸಿದರು.
ಕೊಠಡಿ ಕೀಲಿ ಕೈ ನೀಡಿದ ವಿಸಿ: ಕುಲಪತಿ ಮಂಜಪ್ಪ ಹೊಸಮನಿ ಅವರ ಧೋರಣೆ ಖಂಡಿಸಿ ವಿವಿ ಆವರಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮತ್ತು ಉಪನ್ಯಾಸಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದರು. ಆಗ ಜಿಲ್ಲಾಧಿಕಾರಿ ಬಿಸ್ವಾಸ್ ದೂರವಾಣಿ ಮೂಲಕ ಕುಲಪತಿಗಳನ್ನು ಸಂಪರ್ಕಿಸಿ ಮಾತುಕತೆ ನಡೆಸಿದ ನಂತರ ಕುಲಸಚಿವರ ಕೋಣೆಯ ಬೀಗ ತೆಗೆದು ಕೊಡಲು ಅವಕಾಶ ಕಲ್ಪಿಸಲಾಯಿತು.
ವಿವಿ ಹೊರ ಮತ್ತು ಮುಖ್ಯದ್ವಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗ್ರಾಮೀಣ ಡಿಎಸ್ಪಿ ರುದ್ರಮುನಿ, ಸಿಪಿಐ ಸುಲೇಮಾನ್ ತಹಸೀಲ್ದಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭದ್ರತೆ ಏರ್ಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

