ಬಳ್ಳಾರಿ

ವಿಎಸ್‌ಕೆ ವಿವಿ ಆದೇಶಕ್ಕೆ ಸರ್ಕಾರ ಅಡ್ಡಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 20
ಕಾಲೇಜುಗಳಲ್ಲಿ ಮೂಲ ಸೌಲಭ್ಯ ಸೇರಿದಂತೆ ಯುಜಿಸಿ ನಿಯಮ ಪಾಲಿಸಿಲ್ಲ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳ ಸಂಯೋಜನೆ ರದ್ದುಗೊಳಿಸಿ, ಆದೇಶ ಹೊರಡಿಸಿದ್ದರೆ, ಇದೀಗ ವಿವಿಯ ಕ್ರಮದ ವಿರುದ್ಧ ರಾಜ್ಯ ಸರ್ಕಾರ ಸಂಯೋಜನೆ ಮುಂದುವರೆಸುವಂತೆ ಮರು ಆದೇಶ ಹೊರಡಿಸುವ ಮೂಲಕ ಕಾಲೇಜುಗಳ ಪರ ಧ್ವನಿ ಎತ್ತಿರುವುದು ಆಶ್ಚರ್ಯ ಮೂಡಿಸಿದೆ.
ದಿನ ಬೆಳಗಾದರೆ ಗುಣಾತ್ಮಕ ಶಿಕ್ಷಣಬೇಕೆಂದು ವೇದಿಕೆ ಮೇಲೆ ಭಾಷಣ ಮಾಡುವ ರಾಜಕಾರಣಿಗಳು, ರಾಜ್ಯ ಸರ್ಕಾರ ಇದೀಗ ಗುಣಾತ್ಮಕ ಶಿಕ್ಷಣಕ್ಕೆ ಎಳ್ಳುನೀರು ಬಿಡುವ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ. ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಕಾಲೇಜುಗಳು ಮೂಲ ಸೌಲಭ್ಯ, ಯುಜಿಸಿ ನಿಯಮಗಳನ್ನು ಪಾಲಿಸಿಲ್ಲ, ಗುಣಾತ್ಮಕ ಕೊರತೆ ಕಾರಣವಾಗುತ್ತಿದೆ ಎಂಬ ಕಾರಣ ನೀಡಿ, ವಿಎಸ್‌ಕೆ ವಿವಿಯು ಸಿಂಡಿಕೇಟ್ ಸಭೆಯ ನಿರ್ಧಾರದಂತೆ ವಿವಿ ವ್ಯಾಪ್ತಿಯ 12 ಎಂಕಾಂ, ಎಂಎಸ್‌ಡಬ್ಲ್ಯೂ, ಬಿಇಡಿ, ಎಂಇಡಿ ಕಾಲೇಜುಗಳ ಸಂಯೋಜನೆ ರದ್ದುಗೊಳಿಸಿ, ಕಾಲೇಜುಗಳಿಗೆ ಚಾಟಿ ಬೀಸಿತ್ತು.
ಯಾವ ಯಾವ ಕಾಲೇಜು?: ಸಂಯೋಜನೆ ರದ್ದುಗೊಂಡ ಕಾಲೇಜುಗಳ ವ್ಯವಸ್ಥಾಪಕ ಮಂಡಳಿಯವರು ತಮ್ಮ ಪ್ರಭಾವ ಬಳಸಿ ಇದೀಗ ಸಂಯೋಜನೆ ಮುಂದುವರಿಸುವಂತೆ ಆದೇಶ ತಂದಿವೆ. ಕೊಪ್ಪಳ ಜಿಲ್ಲೆಯ ಆರ್‌ಡಿಟಿಇ ಸಂಸ್ಥೆಯ ಎಂಎಸ್‌ಡಬ್ಲ್ಯೂ, ಆರ್‌ಡಿಟಿಇ ಗುಳಗಣ್ಣನವರ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಕಾಲೇಜು, ಕೆಕೆ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ (ಎಂಕಾಂ), ಎಸ್‌ಎ ನಿಂಗೋಜಿ ಕಾಲೇಜು ಆಫ್ ಎಜ್ಯುಕೇಷನ್ ಯಲಬುರ್ಗಾ, ಕೊಪ್ಪಳದ ದಡೇಗಲ್‌ನ ರಾಜೀವ್ ಗಾಂಧಿ ಎಂಇಡಿ ಕಾಲೇಜು, ರಾಜೀವ್ ಗಾಂಧಿ ಬಿಇಡಿ ಕಾಲೇಜು, ಕುಷ್ಟಗಿಯ ಬಿಇಡಿ ಕಾಲೇಜು, ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬಿಇಡಿ ಕಾಲೇಜು, ಕೊಟ್ಟೂರಿನ ತುಂಗಭದ್ರಾ ಬಿಇಡಿ ಕಾಲೇಜು, ಬಳ್ಳಾರಿಯ ಶಶಾಂಕ ಎಂಎಸ್‌ಡಬ್ಲ್ಯೂ ಕಾಲೇಜು, ಕೂಡ್ಲಿಗಿಯ ಜ್ಞಾನಭಾರತಿ ಬಿಇಡಿ ಕಾಲೇಜು ಹಾಗೂ ಬಳ್ಳಾರಿಯ ರಾಯಲ್ ಬಿಇಡಿ ಕಾಲೇಜುಗಳು ಸರ್ಕಾರದಿಂದ ಮರು ಸಂಯೋಜನೆ ಪಡೆದಿವೆ.
ಸರ್ಕಾರದ ಪತ್ರದಲ್ಲಿ ಏನಿದೆ?: ಸರ್ಕಾರ ವಿವಿಯ ಕುಲಸಚಿವರಿಗೆ ಪತ್ರ ಬರೆದು 2013-14ರ ಸಾಲಿಗೆ ಬಳ್ಳಾರಿಯ ವಿಎಸ್‌ಕೆ ವಿವಿಯ ಸಿಂಡಿಕೇಟ್ ಸಭೆ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸಂಯೋಜನೆ ಸ್ಥಗಿತಗೊಳಿಸಲು ಶಿಫಾರಸು ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದ ಸದರಿ ಸಭೆಯ ನಡಾವಳಿಗಳನ್ನು ಪರಿಶೀಲಿಸಲಾಗಿದೆ. ಸದರಿ ನಡಾವಳಿಗಳನ್ನು ಪ್ರಾದೇಶಿಕ ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ, ಗುಲ್ಬರ್ಗಾ ವಿಭಾಗ ಗುಲ್ಬರ್ಗ ಇವರಿಗೆ ಕಳುಹಿಸಿ, ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸಂಯೋಜನೆಯನ್ನು ಮುಂದುವರಿಸುವ ಕುರಿತು ಸದರಿ ಮಹಾವಿದ್ಯಾಲಯಗಳು, ಕಾಲೇಜುಗಳು ಅಗತ್ಯ ಮೂಲ ಸೌಕರ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿರುವ ಬಗ್ಗೆ ಭಾವಚಿತ್ರಗಳೊಂದಿಗೆ ವಿಸೃತ ವರದಿಯನ್ನು ನೀಡಬೇಕೆಂದು ತಿಳಿಸಿತ್ತು. ಈ ಕುರಿತು ಪ್ರಾದೇಶಿಕ ಜಂಟಿ ನಿರ್ದೇಶಕರು ವರದಿ ಸಲ್ಲಿಸಿದ್ದು, ವರದಿಯಲ್ಲಿ 12 ಕಾಲೇಜುಗಳಲ್ಲಿ ಅಗತ್ಯ ಮೂಲ ಸೌಕರ್ಯಗಳು ಹೊಂದಿರುವ ಬಗ್ಗೆ ಭಾವಚಿತ್ರಗಳೊಂದಿಗೆ ವಿವರವಾದ ವರದಿಯನ್ನು ನೀಡಿದ್ದಾರೆ. ಇದನ್ನು ಪರಿಶೀಲಿಸಿದ್ದು, ಕಾಲೇಜುಗಳ ಸಂಯೋಜನೆಯನ್ನು ಮುಂದುವರಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ವಿವಿ ಸರ್ಕಾರದ ನಡುವೆ ತಿಕ್ಕಾಟ: ಇಲ್ಲಿ ವಿಶ್ವವಿದ್ಯಾಲಯ ಪರಿಶೀಲನೆ ನಡೆಸಿ ಸಂಯೋಜನೆ ರದ್ದುಗೊಳಿಸಿ ಕೈಗೊಂಡಿರುವ ಕ್ರಮ ಸರಿಯೋ ಅಥವಾ ಸರ್ಕಾರದ ಪ್ರಾದೇಶಿಕ ಜಂಟಿ ನಿರ್ದೇಶಕರು ನೀಡಿರುವ ವರದಿ ಆಧರಿಸಿ ಸರ್ಕಾರದ ನಿರ್ಧಾರದ ಸರಿಯೋ ಎಂಬುದು ಗೊತ್ತಿಲ್ಲ. ವಿವಿಯ ವಿದ್ಯಾವಿಷಯಕ ಪರಿಷತ್ತು ಹಾಗೂ ಸಿಂಡಿಕೇಟ್ ಸಭೆಗಳು 2013-14ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಪ್ರಕರಣ 63(1) ರನ್ವಯ ಸಂಯೋಜನೆಯನ್ನು ಸ್ಥಗಿತಗೊಳಿಸಿರುವುದನ್ನು ರದ್ದುಪಡಿಸಿ, ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000, ಪ್ರಕರಣ 63(9)ರಲ್ಲಿ ನೀಡಿರುವ ಪದತ್ತವಾದ ಅಧಿಕಾರನ್ವಯ ಸಂಯೋಜನೆಯನ್ನು ಮುಂದುವರಿಸುವಂತೆ ನಿರ್ದೇಶಿಸಿದೆ. ಇಲ್ಲಿಯೂ ಕೂಡ ರಾಜ್ಯ ಸರ್ಕಾರ ಹಾಗೂ ವಿವಿಯ ನಡುವಿನ ತಿಕ್ಕಾಟ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.