ಬಳ್ಳಾರಿ

ಸೀಮಾಂಧ್ರ ಹೋರಾಟ: ಸಾರಿಗೆ ಸಂಸ್ಥೆಗೆ ಕೋಟಿ ನಷ್ಟ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 21
ಬಳ್ಳಾರಿ ಮೂಲಕ ಆಂಧ್ರಪ್ರದೇಶಕ್ಕೆ ಹಾದು ಹೋಗುವ ಎನ್‌ಇಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಎಸ್‌ಆರ್‌ಟಿಸಿಯ 74 ರೂಟ್‌ಗಳ ಬಸ್ ಸಂಚಾರ ಜು. 31ರಿಂದ ಸ್ಥಗಿತವಾಗಿದ್ದರಿಂದ ಆ. 21ರ ವರೆಗೆ ಸುಮಾರು ರು. 2.84 ಕೋಟಿ ನೇರ ನಷ್ಟವನ್ನು ಸಾರಿಗೆ ಸಂಸ್ಥೆ ಅನುಭವಿಸುತ್ತಿದೆ. ಇದಕ್ಕೆ ಕಾರಣ ತೆಲಂಗಾಣ ವಿರೋಧಿ ಹೋರಾಟ.
ಜು. 31ರಿಂದಲೇ ಆಂಧ್ರಪ್ರದೇಶದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆಯುತ್ತಿರುವುದರಿಂದ ಆಂಧ್ರಪ್ರದೇಶಕ್ಕೆ ಹೋಗುವ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಇದರಿಂದಾಗಿ ಕೇವಲ ಬಳ್ಳಾರಿ ಹಾಗೂ ಬಳ್ಳಾರಿ ಮೂಲಕ ಆಂಧ್ರಪ್ರದೇಶಕ್ಕೆ ಹಾದು ಹೋಗುವ 74 ರೂಟ್‌ಗಳ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಕೋಟ್ಯಂತರ ರು.ಗಳ ನಷ್ಟವಾಗಿದೆ. ಕೇವಲ ಹಾನಿ ಮಾತ್ರವಲ್ಲದೆ, ಬಸ್‌ಗಳನ್ನು ಇತರ ರೂಟ್‌ಗಳಿಗೆ ಬಿಟ್ಟಿರುವುದರಿಂದ ಪರೋಕ್ಷವಾಗಿ ಇತರ ಬಸ್ ಆದಾಯದ ಮೇಲೂ ಪರಿಣಾಮ ಬೀರಿದೆ. ಆ ಮೂಲಕ ಸಾರಿಗೆ ಸಂಸ್ಥೆ ಪ್ರತ್ಯೇಕ ಮತ್ತು ಪರೋಕ್ಷ ನಷ್ಟ ಅನುಭವಿಸುತ್ತಿದೆ.
ಪ್ರತಿದಿನ ಬಳ್ಳಾರಿ ವಿಭಾಗಕ್ಕೆ ರು. 4.70 ಲಕ್ಷ ನಷ್ಟ: ಬಳ್ಳಾರಿ ಜಿಲ್ಲೆಯಿಂದ ಸುಮಾರು 45 ರೂಟ್‌ಗಳಲ್ಲಿ ಆಂಧ್ರಪ್ರದೇಶಕ್ಕೆ ಬಸ್ ಸಂಚಾರ ಇತ್ತು. ಆದರೆ ನಾಲ್ಕು ರೂಟ್‌ಗಳ ಬಸ್‌ಗಳ ಸಂಚಾರ ಮಾತ್ರ ಇದೆ. ಬಳ್ಳಾರಿಯಿಂದ ವಾಯಾ ರಾಯಚೂರು ಮೂಲಕ ಹೈದ್ರಾಬಾದ್‌ಗೆ ತೆರಳುತ್ತಿರುವ ಸ್ಲೀಪರ್, ರಾಜಹಂಸ, ಎರಡು ಎಕ್ಸ್‌ಪ್ರೆಸ್ ಬಸ್ಸುಗಳ ಸಂಚಾರ ಮಾತ್ರ ಇದೆ. ಇನ್ನುಳಿದಂತೆ 41 ರೂಟ್‌ಗಳ ಬಸ್ ಸಂಚಾರ ಸ್ಥಗಿತವಾಗಿದೆ. ಬಳ್ಳಾರಿಯಿಂದ ಆಂಧ್ರಪ್ರದೇಶಕ್ಕೆ ತೆರಳುವ 29 ರೂಟ್‌ಗಳ ಬಸ್ಸುಗಳಿಗೆ ಪ್ರತಿದಿನ ಪ್ರತಿಬಸ್ಸಿಗೆ ರು. 10 ಸಾವಿರ ನಷ್ಟವಾದರೆ, ಹೊಸಪೇಟೆಯಿಂದ ಆಂಧ್ರಪ್ರದೇಶಕ್ಕೆ ತೆರಳುವ ಬಸ್ಸುಗಳಿಗೆ ಪ್ರತಿದಿನ ರು. 15 ಸಾವಿರ ನಷ್ಟವಾಗುತ್ತಿದೆ. ಇದರಿಂದಾಗಿ ಬಳ್ಳಾರಿ ಜಿಲ್ಲೆ ವಿಭಾಗಕ್ಕೆ ಪ್ರತಿದಿನ ರು. 4.70 ಲಕ್ಷ ನಷ್ಟವಾಗುತ್ತಿದೆ ಎಂದು ಸಂಸ್ಥೆಯ ಲೆಕ್ಕ ತಿಳಿಸುತ್ತದೆ.
ಪ್ರತಿದಿನ ರು. 12.95 ಲಕ್ಷ ನಷ್ಟ: ಬಳ್ಳಾರಿ ಜಿಲ್ಲೆಯ 41 ರೂಟ್‌ಗಳ ಸಾರಿಗೆ ಸಂಸ್ಥೆ ಬಸ್‌ಗಳು, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಬಳ್ಳಾರಿಯಿಂದ ಹಾದು ಹೋಗುತ್ತಿರುವ 33 ರೂಟ್‌ಗಳ ಬಸ್‌ಗಳ ಸಂಚಾರ ಸ್ಥಗಿತವಾಗಿದ್ದರಿಂದ ಪ್ರತಿದಿನ ಸಂಸ್ಥೆ ರು. 12.95 ಲಕ್ಷ ನಷ್ಟ ಅನುಭವಿಸುತ್ತಿದೆ. ಎನ್‌ಡಬ್ಲ್ಯೂಕೆಆರ್‌ಟಿಸಿಯ ಬಾದಾಮಿಯಿಂದ ಮಂತ್ರಾಲಯ, ಶಿರಸಿಯಿಂದ ಮಂತ್ರಾಲಯ ಸೇರಿದಂತೆ ಇತರ ರೂಟ್‌ಗಳ ಸಂಚಾರ, ಕೆಎಸ್‌ಆರ್‌ಟಿಸಿಯ ತುಮಕೂರಿನಿಂದ ಮಂತ್ರಾಲಯ, ಬೆಂಗಳೂರಿನಿಂದ ಮಂತ್ರಾಲಯ, ದಾವಣಗೆರೆಯಿಂದ ಶ್ರೀಶೈಲ, ಹರಿಹರದಿಂದ ಶ್ರೀಶೈಲ, ಶಿವಮೊಗ್ಗದಿಂದ ಶ್ರೀಶೈಲ ಸೇರಿದಂತೆ ಬಳ್ಳಾರಿ ಮೂಲಕ ಹಾದು ಹೋಗುವ 33 ರೂಟ್‌ಗಳ ಬಸ್‌ಗಳ ಸಂಚಾರ ಇಲ್ಲದೆ ಅಲ್ಲಿನ ಸಂಸ್ಥೆಗೆ ಪ್ರತಿದಿನ, ಪ್ರತಿಬಸ್ಸಿಗೆ ರು. 25 ಸಾವಿರ ನಷ್ಟವಾಗುತ್ತಿದೆ. ಒಟ್ಟಾರೆ ಎರಡು ಸಂಸ್ಥೆಗಳಿಗೆ 33 ರೂಟ್‌ಗಳಿಂದ ರು. 8.25 ಲಕ್ಷ ನಷ್ಟವಾಗುತ್ತಿದೆ. ಬಳ್ಳಾರಿ ವಿಭಾಗ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿಗಳಿಗೆ ಪ್ರತಿದಿನ ರು. 12.95 ಲಕ್ಷ ನಷ್ಟವಾಗುತ್ತಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಪರೋಕ್ಷ ನಷ್ಟಕ್ಕೆ ಲೆಕ್ಕವಿಲ್ಲ: ಪ್ರತ್ಯೇಕ ನಷ್ಟ ಕೋಟ್ಯಂತರ ರು.ಗಳು ಆಗಿದ್ದರೆ, ಇನ್ನು ಪರೋಕ್ಷ ನಷ್ಟಕ್ಕೆ ಸಾರಿಗೆ ಸಂಸ್ಥೆ ಲೆಕ್ಕ ಇಟ್ಟಿಲ್ಲ. ಪರೋಕ್ಷವಾಗಿ ಅಂದರೆ ಆಂಧ್ರಪ್ರದೇಶಕ್ಕೆ ಹೋಗುವ ಬಸ್‌ಗಳನ್ನು ಸುಮ್ಮನೆ ನಿಲ್ಲಿಸಲು ಬರುವುದಿಲ್ಲ ಎನ್ನುವ ಕಾರಣಕ್ಕೆ ಬೇರೆ ಕಡೆಗೆ ಓಡಿಸುತ್ತಿರುವುದರಿಂದ ಆ ಭಾಗದಲ್ಲಿ ಬರುವ ಆದಾಯ ಹೆಚ್ಚಳವಾಗಿಲ್ಲ. ಇದರಿಂದಾಗಿ ಡಿಸೇಲ್ ವೆಚ್ಚ ಹೆಚ್ಚಾಗುತ್ತಿದೆ. ಅಲ್ಲದೆ ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಆಗಮಿಸಿದ ಪ್ರಯಾಣಿಕರು ರಾಜ್ಯದ ಸಾರಿಗೆ ಸಂಸ್ಥೆ ಬಸ್‌ಗಳ ಮೂಲಕ ಇತರ ಭಾಗಕ್ಕೆ ಸಂಚರಿಸುವುದರಿಂದ, ಆ ಆದಾಯ ಸ್ಥಗಿತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಕೇವಲ ಆಂಧ್ರಪ್ರದೇಶಕ್ಕೆ ಮಾತ್ರವಲ್ಲದೆ, ರಾಜ್ಯಕ್ಕೆ ಕೋಟ್ಯಂತರ ರು.ಗಳ ನಷ್ಟವಾಗಿದೆ. ಇದು ರಾಜ್ಯದ ಸಾರಿಗೆ ಸಂಸ್ಥೆಯ ಇತಿಹಾಸದಲ್ಲಿ ಬೇರೆ ರಾಜ್ಯಗಳ ಬಂದ್‌ನ ಹಿನ್ನೆಲೆಯಲ್ಲಿ ಹೆಚ್ಚು ನಷ್ಟವಾಗಿರುವ ದಾಖಲೆ ಎನ್ನಬಹುದು.
ಆಂಧ್ರದಲ್ಲಿ ಬಂದ್, ಪ್ರತಿಭಟನೆ, ಹೋರಾಟಗಳಾದರೆ ರಾಜ್ಯದ ಸಾರಿಗೆಗೆ ನೇರ ಹೊಡೆತ ಬೀಳುತ್ತದೆ ಎಂಬುದನ್ನು ತೆಲಂಗಾಣ ವಿರೋಧಿ ಪ್ರತಿಭಟನೆ ಸಾಬೀತು ಮಾಡಿದೆ. ಮೊದಲೆ ಹಲವು ವರ್ಷಗಳಿದ ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆ ಇನ್ನೇನು ಆರ್ಥಿಕವಾಗಿ ಲಾಭ ಗಳಿಸಿ ಸುಧಾರಿಕೊಳ್ಳುತ್ತಿದೆ ಎನ್ನುವಾಗಲೇ ಈ ರೀತಿಯ ಹೊಡೆತ ಬಿದ್ದಿರುವುದು ಸಂಸ್ಥೆಗೆ ದೊಡ್ಡ ನಷ್ಟವೇ ಸರಿ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.