ಪ್ರಗತಿ ಗ್ರಾಮೀಣ ಬ್ಯಾಂಕ್ನಲ್ಲಿ ಕೃಷ್ಣಾ ವಿಲೀನ
ಬಳ್ಳಾರಿ: ಗುಲ್ಬರ್ಗ, ಬೀದರ್, ಯಾದಗಿರಿ ಭಾಗದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ವಿಲೀನವಾಗುವ ಮೂಲಕ ಈ ಭಾಗದ ಪ್ರಗತಿ ಗ್ರಾಮೀಣ ಬ್ಯಾಂಕ್ ಇನ್ನು ಮುಂದೆ ಪ್ರಗತಿ-ಕೃಷ್ಣ ಗ್ರಾಮೀಣ ಬ್ಯಾಂಕ್ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಆದರೆ ವಹಿವಾಟಿನಲ್ಲಿ ಗ್ರಾಹಕರ ಸೇವೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗುವುದಿಲ್ಲ. ಬ್ಯಾಂಕಿನ ಹೆಸರು ಮಾತ್ರ ಬದಲಾವಣೆಯಾಗಿದೆ ಎಂದು ಪ್ರಗತಿ-ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಎಂ.ಜಿ. ಭಟ್ ತಿಳಿಸಿದರು.
ಶನಿವಾರ ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್ಥಿಕ ಕ್ಷೇತ್ರಗಳ ಬದಲಾವಣೆಗೆ ಗ್ರಾಮೀಣ ಬ್ಯಾಂಕ್ಗಳು ಹೊಂದಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದೀಗ ಗ್ರಾಮೀಣ ಬ್ಯಾಂಕ್ಗಳ ವಿಲೀನಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರದ ವಿತ್ತ ಮಂತ್ರಾಲಯದ ಸೂಚನೆ ಮೇರೆಗೆ ಆ. 23ರಂದು ಪ್ರಗತಿ ಗ್ರಾಮೀಣ ಬ್ಯಾಂಕ್ನಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನ್ನು ವಿಲೀನಗೊಳಿಸಿ ಪ್ರಗತಿ-ಕೃಷ್ಣಾ ಗ್ರಾಮೀಣ ಬ್ಯಾಂಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
11 ಜಿಲ್ಲೆಗೆ ವಿಸ್ತರಣೆ: ಕೃಷ್ಣಾ ಬ್ಯಾಂಕಿನ ವಿಲೀನದಿಂದ ಬ್ಯಾಂಕ್ನ ಕಾರ್ಯವ್ಯಾಪ್ತಿ 8 ಜಿಲ್ಲೆಗಳಿಂದ 11 ಜಿಲ್ಲೆಗೆ ವಿಸ್ತರಿಸಿದೆ. ಬೀದರ್, ಗುಲ್ಬರ್ಗ, ಯಾದಗಿರಿಯಲ್ಲಿ ಅಸ್ತಿತ್ವದಲ್ಲಿದ್ದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಇದೀಗ ಪ್ರಗತಿ ಗ್ರಾಮೀಣ ಬ್ಯಾಂಕ್ನಲ್ಲಿ ವಿಲೀನವಾಗಿದ್ದರಿಂದ ಪ್ರಗತಿ ಬ್ಯಾಂಕ್ನ ಕಾರ್ಯವ್ಯಾಪ್ತಿ 11 ಜಿಲ್ಲೆಗೆ ವಿಸ್ತರಿಸಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಗುಲ್ಬರ್ಗಾ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
13,838 ಕೋಟಿಗೆ ವಹಿವಾಟಿಗೆ ಏರಿಕೆ: ಇದುವರೆಗೆ 4,187 ಹಳ್ಳಿಗಳಲ್ಲಿ ಸೇವೆ ಒದಗಿಸಿದ್ದ ಬ್ಯಾಂಕ್ ಇದೀಗ 4,917 ಹಳ್ಳಿಗಳಿಗೆ ಸೇವೆಯನ್ನು ವಿಸ್ತರಿಸಿದೆ. ಇನ್ನು 434 ಶಾಖೆಗಳ ಸಂಖ್ಯೆ 602ಕ್ಕೆ ಏರಿದೆ. 2,170 ಸಿಬ್ಬಂದಿ ಹೊಂದಿದ್ದ ಬ್ಯಾಂಕ್ 2,860 ಸಿಬ್ಬಂದಿಗಳನ್ನು ಹೊಂದಿದೆ. ಇದಲ್ಲದೇ 597 ಕೋಟಿ ಸ್ವಂತ ನಿಧಿಯಿಂದ 786 ಕೋಟಿಗೆ ಏರಿಕೆಯಾಗಿದೆ. 5,308 ಕೋಟಿಯಿಂದ 6,913 ಕೋಟಿಗೆ ಏರಿಕೆಯಾಗಿದ್ದರೆ, ಸಾಲ ಪ್ರಮಾಣ 5,439 ಕೋಟಿಯಿಂದ 6,925 ಕೋಟಿಗೆ ಏರಿಕೆ ಕಂಡು ಒಟ್ಟಾರೆ ವಹಿವಾಟು 10,747 ಕೋಟಿಗಳಿಂದ 13,838 ಕೋಟಿಗೆ ಏರಿಕೆಯಾಗಿದೆ ಎಂದು ವಿವರಿಸಿದರು.
ಯಥಾಸ್ಥಿತಿ: ಪ್ರಗತಿ-ಕೃಷ್ಣಾ ಬ್ಯಾಂಕ್ನ ಕೇಂದ್ರ ಕಚೇರಿ ಬಳ್ಳಾರಿಯಲ್ಲಿಯೇ ಇರುತ್ತದೆ. ಸಮ್ಮಿಲನ ಪೂರ್ವದ 2 ಗ್ರಾಮೀಣ ಬ್ಯಾಂಕ್ಗಳ ಎಲ್ಲಾ ಶಾಖೆಗಳು, ವಿಸ್ತರಣಾ ಕೌಂಟರ್ಗಳು, ಇತರೆ ಕಚೇರಿಗಳು ಪ್ರಗತಿ- ಕೃಷ್ಣಾ ಗ್ರಾಮೀಣ ಬ್ಯಾಂಕ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತವೆ. ಗ್ರಾಹಕರ ಠೇವಣಿ, ಸಾಲದೆ ಖಾತೆಗಳು, ಹಕ್ಕು ಬಾಧ್ಯತೆಗಳು ಹಾಗೂ ಅನ್ಯ ಸೇವಾ ಸೌಲಭ್ಯಗಳು ಯಥಾಪ್ರಕಾರವಾಗಿ ನಡೆಯುತ್ತವೆ. ಇನ್ನು ವಿಧಿ ವಿಧಾನಗಳು, ನಿಯಮಗಳು, ಕೆಲಸದ ವೇಳೆ, ರಜಾ ದಿನಗಳಲ್ಲಿ ಯಾವ ಬದಲಾವಣೆ ಇರುವುದಿಲ್ಲ ಎಂದು ವಿವರಿಸಿದರು. ಹೆಚ್ಚಿನ ವಿವರಗಳಿಗೆ ಸಮೀಪದ ಶಾಖೆ ಸಂಪರ್ಕಿಸಬಹುದು ಎಂದು ಕೋರಿದರು.
ರವಿ ಸುಧಾಕರ್, ಮಲ್ಲಿಕಾರ್ಜುನ, ವೆಂಕಟರಾವ್, ಜಗದೀಶ್ಗೌಡ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

